ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮ ವಾಸ್ತವ್ಯದಿಂದ ಜನಪ್ರತಿನಿಧಿಗಳು, ಅಧಿಕಾರಿಗಳು, ಜನರ ನಡುವೆ ಸೇತುವೆ: ಅಶೋಕ್

Last Updated 21 ಮಾರ್ಚ್ 2021, 4:49 IST
ಅಕ್ಷರ ಗಾತ್ರ

ಛಬ್ಬಿ (ಹುಬ್ಬಳ್ಳಿ): ಜನಪ್ರತಿನಿಧಿಗಳು, ಅಧಿಕಾರಿಗಳು ಮೇಲಿನಿಂದ ಇಳಿದು ಬಂದವರಲ್ಲ. ಜನ, ಮಂತ್ರಿಗಳು, ಡಿಸಿ ಹಾಗೂ ಎಸಿಯವರನ್ನು ಭೇಟಿಯಾಗಿ ಅಹವಾಲು ಹೇಳಿಕೊಳ್ಳಲು ಮುಜುಗರ ಪಟ್ಟುಕೊಳ್ಳುತ್ತಾರೆ. ಈ ಭಾವನೆ ಹಾಗೂ ಜನಸಾಮಾನ್ಯರ ನಡುವಿನ ಕಂದಕ ಮುಚ್ಚಿ, ಸೇತುವೆ ನಿರ್ಮಿಸುವಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಛಭ್ಬಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಸಚಿವರು ಭಾನುವಾರ ಬೆಳಿಗ್ಗೆ ದಿನ ಪತ್ರಿಕೆಗಳನ್ನು ಓದಿ, ನಂತರ ಗ್ರಾಮದ ಹಿರೇಕೆರೆ ಏರಿ ಮೇಲೆ ವಾಯು ವಿಹಾರ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಜನರಿಗೆ ಅಧಿಕಾರಿಗಳು ನಮ್ಮವರು ಎನಿಸಬೇಕು, ಹಾಗೇ ಅಧಿಕಾರಿಗಳಿಗೆ ಜನರು ನಮ್ಮವರು ಎನ್ನುವ ಭಾವನೆ ಮೂಡಬೇಕು. ಪಟ್ಟಣ ಪ್ರದೇಶಗಳ ಅಭಿವೃದ್ಧಿಯಿಂದ ಮಾತ್ರ ದೇಶ ಉದ್ದಾರವಾಗುವುದಿಲ್ಲ. ಮಹಾತ್ಮ ಗಾಂಧಿಜೀಯವರ ಆಶಯದಂತೆ ಹಳ್ಳಿಗಳು ಉದ್ಧಾರವಾಗಬೇಕು. ಸರ್ಕಾರ ಹಳ್ಳಿಗಳ ಉದ್ಧಾರಕ್ಕೆ ನೂರಾರು ಕಾರ್ಯಕ್ರಮಗಳನ್ನು ಜಾರಿ ಮಾಡಿದರೂ ಜನರಿಗೆ ಹತ್ತು ಕಾರ್ಯಕ್ರಮಗಳ ಬಗ್ಗೆ ಅರಿವು ಕೂಡ ಇರುವುದಿಲ್ಲ. ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಅವುಗಳನ್ನು ಅನುಷ್ಠಾನಗೊಳಿಸಲು ಗ್ರಾಮವಾಸ್ತವ್ಯ ನೆರವಾಗುತ್ತದೆ. ಇದರಿಂದ ಸರ್ಕಾರದ ಮೇಲೆ ವಿಶ್ವಾಸ ಮೂಡುವುದು. ರಾಜ್ಯದ 270 ಕಡೆ ಗ್ರಾಮ ವಾಸ್ತವ್ಯ ನಡೆಯುತ್ತದೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್
ಗ್ರಾಮ ವಾಸ್ತವ್ಯ ಹೂಡಿದ್ದಾರೆ.

ತಿಂಗಳ ಪ್ರತಿ ಮೂರನೇ ಶನಿವಾರ ಕಂದಾಯ ಇಲಾಖೆ ಕಚೇರಿಗಳು ಖಾಲಿಯಿರುತ್ತವೆ. ಕ್ಲರ್ಕ್ ಗಳು ಮಾತ್ರ ಇರುತ್ತಾರೆ. ಇದರೊಂದಿಗೆ ಪರಿವರ್ತನೆ ಆರಂಭವಾಗಿದೆ. ಕಾರ್ಯಕ್ರಮ ಜನರನ್ನು ತಲುಪುತ್ತದೆ. ವಾಸ್ತವ್ಯ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ಶಾಸಕರೂ ಪಾಲ್ಗೊಳ್ಳಬೇಕು ಎಂದರು.

ಕೋವಿಡ್ ನಡುವೆ ಬದುಕಬೇಕು: ಜರ್ಮನಿಯಲ್ಲಿ ಕೋವಿಡ್ ಮೂರನೇ ಅಲೆ ಕಾಣಿಸಿಕೊಂಡಿದೆ. ಸಾಂಕ್ರಾಮಿಕ ರೋಗ ಎಷ್ಟುದಿ‌ನ ಇರುವುದು ತಿಳಿಯದು. ಇದರೊಟ್ಟಿಗೆ ಬದುಕುವುದನ್ನು ಕಲಿಯಬೇಕು. ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಬೇಕು. ಸರ್ಕಾರದ ಮುಂದೆ ಸದ್ಯಕ್ಕೆ ಲಾಕ್ ಡೌನ್ ಪ್ರಸ್ತಾವ ಇಲ್ಲ. ಮುಂದಿನ ಹತ್ತುದಿನ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರೀತಿಗೆ ಚಿರ ಋಣಿ: ಗ್ರಾಮ ವಾಸ್ತವ್ಯಕ್ಕೆ ಬಂದಿದ್ದ ನನ್ನನ್ನು ಭವ್ಯ ಮೆರವಣಿಗೆಯೊಂದಿಗೆ ಛಬ್ಬಿ ಗ್ರಾಮಸ್ಥರು ಬರ ಮಾಡಿಕೊಂಡರು. ಊರಲ್ಲಿ ಹಬ್ಬದ ವಾತಾವರಣ ಕಂಡು‌ಬಂತು. ಪ್ರತಿ ಮನೆಯ ಮುಂದೆ ರಂಗವಲ್ಲಿ ಹಾಕಿ ಜನ ಹಬ್ಬವೇನೊ ಎನ್ನುವಂತೆ ಸಂಭ್ರಮಿಸಿದರು. ರಾತ್ರಿ ಹನ್ನೊಂದು ಗಂಟೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡುವೆಯೂ ಜನ ಅಹವಾಲು ಸಲ್ಲಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಸ್ವಲ್ಪವೇ ಕೆಲಸ ಮಾಡಿದರೂ ಜನ ಹೆಚ್ಚಿನ ಪ್ರೀತಿ ತೋರುತ್ತಾರೆ. ಗ್ರಾಮಸ್ಥರು ತೋರಿದ ಪ್ರೀತಿಗೆ ಚಿರ ಋಣಿ ಆಗಿದ್ದೇನೆ. ಗ್ರಾಮ ವಾಸ್ತವ್ಯ ಯಶಸ್ವಿಯಾಗಿದೆ ಎಂದು ಹೇಳಿದರು.

ಉಪಾಹಾರ ಸೇವನೆ: ಛಬ್ಬಿ ಗ್ರಾಮದ ಕಾಳೆ ಅವರ ಮನೆಯಲ್ಲಿ ಸಚಿವರು ಉಪಹಾರವನ್ನು ಕುಟುಂಬದ ಸದಸ್ಯರೊಂದಿಗೆ ಸೇವನೆ ಮಾಡಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ವಿಪತ್ತು ನಿರ್ವಹಣಾ ಆಯುಕ್ತ ಮನೋಜ್ ರಂಜನ್, ಉಪವಿಭಾಗಾಧಿಕಾರಿ ಗೋಪಾಲಕೃಷ್ಣ,
ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT