ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಶಿಕ್ಷಣ ನೀತಿ ಮೂಲಕ ಕ್ರಾಂತಿಕಾರಕ ಬದಲಾವಣೆ

ಕವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಬಣ್ಣನೆ
Last Updated 6 ಡಿಸೆಂಬರ್ 2022, 4:18 IST
ಅಕ್ಷರ ಗಾತ್ರ

ಧಾರವಾಡ: ‘75 ವರ್ಷಗಳ ನಂತರ ನೂತನ ಶಿಕ್ಷಣ ನೀತಿ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ. ಈ ಸಂದರ್ಭದಲ್ಲಿ ನಾವಿರುವುದೇ ನಮ್ಮ ಭಾಗ್ಯ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ.ಗುಡಸಿ ಹೇಳಿದರು.

ಅಂಜುಮನ್ ಪದವಿ ಕಾಲೇಜು ಹಾಗೂ ನ್ಯಾಕ್ ಸಮಿತಿ ಜಂಟಿಯಾಗಿ ಸೋಮವಾರ ಆಯೋಜಿಸಿದ್ದ ನೂತನ ರಾಷ್ಟ್ರೀಯ ಶೀಕ್ಷಣ ನೀತಿಯ ಸಾಧನ–ಬಾಧಕಗಳ ಕುರಿತು ಚರ್ಚೆ ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಶೈಕ್ಷಣಿಕ ಕ್ರಾಂತಿಯ ಹೊಸ ಮನ್ವಂತರಕ್ಕೆ ಎನ್‌ಇಪಿ ಒಂದು ಪ್ರಬಲ ಅಸ್ತ್ರವಾಗಿದೆ. ಇದರಲ್ಲಿ ಶಿಕ್ಷಕರೂ ಒಂದಷ್ಟು ಬದಲಾಗುವ ಹಾಗೂ ಹೊಸತನ್ನು ಕಲಿತು ಕಲಿಸುವ ಮೂಲಕ 21ನೇ ಶತಮಾನದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು’ ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉಪನ್ಯಾಸ ನೀಡಿದ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ರಾಮಚಂದ್ರಗೌಡ, ‘ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿದ್ದರೂ, ಅದಕ್ಕೆ ತಕ್ಕಂತೆ ಪಠ್ಯಕ್ರಮಗಳ ಹಾಗೂ ಕಲಿಕೆಯಲ್ಲಿನ ಬದಲಾವಣೆ ಆಗಿರಲಿಲ್ಲ. ನೂತನ ಶಿಕ್ಷಣ ನೀತಿಯ ಮೂಲಕ ವಿದ್ಯೆಯ ಜತೆಗೆ ಕೌಶಲ ಕಲಿಸುವ ಪ್ರಯತ್ನೂ ನಡೆದಿದೆ. ಹೀಗಾಗಿ ಶಿಕ್ಷಣದ ಮೂಲಕ ಸಾಮಾಜಿಕ ಅಭಿವೃದ್ಧಿಯೂ ಆಗುವ ಭರವಸೆ ಇದೆ’ ಎಂದರು.

‘ನಿರುದ್ಯೋಗಿಯು ಕುಟುಂಬಕ್ಕೆ ಮಾತ್ರವಲ್ಲ, ಸಮಾಜಕ್ಕೂ ಹೊರೆ. ಆದರೆ ಕೌಶಲವನ್ನು ರೂಢಿಸಿಕೊಂಡಲ್ಲಿ ಬದುಕಿನ ಸವಾಲುಗಳನ್ನು ಎದುರಿಸಲು ಸಾಧ್ಯ. 80ರ ದಶಕದಲ್ಲಿ ಕಂಪ್ಯೂಟರ್ ಪರಿಚಯಗೊಂಡಾಗ, ಉದ್ಯೋಗ ಕಸಿಯುವ ಕಂಪ್ಯೂಟರ್‌ಗಳು ಬೇಡ ಎಂದು ಚಳವಳಿಗಳು ನಡೆದವು. ಆದರೆ ಇಂದು ಅದೇ ಕಂಪ್ಯೂಟರ್‌ ಲಕ್ಷಾಂತರ ಯುವಕರಿಗೆ ಕೆಲಸ ಕೊಟ್ಟಿದೆ. ಹೀಗಾಗಿ ಯಾವುದೇ ಹೊಸತು ಬಂದರೂ ಅದಕ್ಕೆ ವಿರೋಧ ಸಹಜ. ಆದರೆ ನಂತರ ಅದರಿಂದಾಗ ಧನಾತ್ಮಕ ಬದಲಾವಣೆಗಳೇ ಆಗುತ್ತವೆ’ ಎಂದರು.

ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಕ್ಬಾಲ್ ಜಮಾದಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಂತರ ಎನ್ಇಪಿ ಅನುಷ್ಠಾನದಲ್ಲಿ ಐಕ್ಯೂಎಸಿ ಪಾತ್ರ ವಿಷಯ ಕುರಿತ ಗೋಷ್ಠಿ ನಡೆಯಿತು. ಇದರಲ್ಲಿ ಆಂತರಿಕ ಗುಣಮಟ್ಟದ ಭರವಸೆ ಕೋಶ ನ್ಯೂಣತೆ ಕುರಿತು ಮಾತನಾಡಿದ ಡಾ. ವೆಂಕನಗೌಡ ಪಾಟೀಲ, ‘ರಾಷ್ಟ್ರೀಯ ಶಿಕ್ಷಣ ನೀತಿ ಎಂಬುದು ಅವಸರದಲ್ಲಿ ಅನುಷ್ಠಾನಕ್ಕೆ ತಂದ ಅವೈಜ್ಞಾನಿಕ ಶಿಕ್ಷಣ ಕಲ್ಪನೆಯಾಗಿದೆ. ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯ ಎಸಗುವ ಹುನ್ನಾರವಾಗಿದೆ’ ಎಂದರು.

‘ಎನ್‌ಇಪಿ ಜಾರಿಗೂ ಮೊದಲು ಶಿಕ್ಷಣ ತಜ್ಞರೊಂದಿಗೆ ಚರ್ಚಿಸದೇ, ಏಕಮುಖವಾಗಿ ಜಾರಿಗೆ ತರಲಾಗಿದೆ. ಜ್ಞಾನ, ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆ ಜಗದಲ್ಲಿ ಕೌಶಲದ ಹೆಸರಿನಲ್ಲಿ ಕಾರ್ಮಿಕರನ್ನು ಸೃಷ್ಟಿಸುವ ಯಂತ್ರಗಳಾಗಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಾಗಿದೆ. ಶಿಕ್ಷಕರ ಕೊರತೆ ನೀಗಿಸದ ಹಾಗೂ ಅಗತ್ಯ ಅನುದಾನ ನೀಡದ ಕೇಂದ್ರ ಸರ್ಕಾರ ಶಿಕ್ಷಣ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಸಿದೆ’ ಎಂದರು.

ಕಾಲೇಜು ಶಿಕ್ಷಣ ಇಲಾಖೆ ಪ್ರತಿನಿಧಿ ಡಾ. ಚೇತನ ವಾಗಾ ಮಾತನಾಡಿ, ‘ನೂತನ ಶಿಕ್ಷಣ ನೀತಿಯಿಂದ ಕೌಶಲ ಹೆಚ್ಚುತ್ತದೆ. ಕೌಶಲದಿಂದ ಉದ್ಯೋಗ, ಉದ್ಯೋಗದಿಂದ ಸ್ವಾವಲಂಬಿ ಬದಕು. ಆ ಮೂಲಕ ಭಾರತದ ಪರಿಕಲ್ಪನೆ ಸಾಕಾರಗೊಳ್ಳಲಿದೆ’ ಎಂದರು.

ನಂತರ ವಿವಿಧ ಗೋಷ್ಠಿಗಳು ನಡೆದವು. ವಿವಿಧ ಕಾಲೇಜುಗಳ ಉಪನ್ಯಾಸಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ವಿಚರಗಳನ್ನು ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT