ಶನಿವಾರ, ಆಗಸ್ಟ್ 20, 2022
21 °C
ಶಿಕ್ಷಕರ ವರ್ಗಾವಣೆ: ‘ಬಿ’, ‘ಸಿ’ ಗುಂಪಿನವರಿಗೆ ಮೊದಲ ಪ್ರಾಶಸ್ತ್ಯ ನೀಡಲು ಗ್ರಾಮೀಣ ಶಿಕ್ಷಕರ ಒತ್ತಾಯ

ವರ್ಷದ ಹಿಂದೆ ವರ್ಗವಾದವರಿಗೆ ಆದ್ಯತೆ: ಅಸಮಾಧಾನ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ವರ್ಗಾವಣೆಯಲ್ಲಿ ಕಳೆದ ವರ್ಷವಷ್ಟೇ ವರ್ಗಾವಣೆಯಾದವರಿಗೆ, ಮೊದಲ ಆದ್ಯತೆ ನೀಡುತ್ತಿರುವುದು ಗ್ರಾಮೀಣ ಶಿಕ್ಷಕರಲ್ಲಿ ಅಸಮಾಧಾನ ಉಂಟುಮಾಡಿದೆ.

ಕನಿಷ್ಠ 3 ವರ್ಷ ಒಂದು ಕಡೆ ಸೇವೆ ಸಲ್ಲಿಸಿದವರಷ್ಟೇ ವರ್ಗಾವಣೆಗೆ ಅರ್ಜಿ ಹಾಕಲು ಎಂಬ ಅರ್ಹರೆಂಬ ನಿಯಮವನ್ನು ಇಲಾಖೆಯೇ ಉಲ್ಲಂಘಿಸಿದೆ. ಇದರಿಂದಾಗಿ, ಹತ್ತಕ್ಕೂ ಹೆಚ್ಚು ವರ್ಷಗಳಿಂದ ಗ್ರಾಮೀಣ ಭಾಗದಲ್ಲೇ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಅನ್ಯಾಯವಾಗಲಿದೆ ಎಂಬ ಕೂಗು ಎದ್ದಿದೆ.

2019ರಲ್ಲಿ ನಡೆದಿದ್ದ ವರ್ಗಾವಣೆಯಲ್ಲಿ ನಗರದಲ್ಲಿದ್ದ 5,400 ಶಿಕ್ಷಕರು ಕಡ್ಡಾಯ ವರ್ಗಾವಣೆಯಾಗಿದ್ದಾರೆ. ಈ ಪೈಕಿ, 3,058 ಮಂದಿ ಮತ್ತೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಸ್ಥಳ ಆಯ್ಕೆಗೆ ಇವರಿಗೆ ಪ್ರಥಮ ಪ್ರಾಶಸ್ತ್ಯ ನೀಡುತ್ತಿರುವುದು ಅತೃಪ್ತಿಗೆ ಮುಖ್ಯ ಕಾರಣ.

‘ಶಿಕ್ಷಕರ ಪೈಕಿ ಶೇ 84ರಷ್ಟು ಗ್ರಾಮೀಣ ಭಾಗದಲ್ಲಿದ್ದಾರೆ. ಇವರೆಲ್ಲರೂ ಕನಿಷ್ಠ ಹತ್ತು ವರ್ಷದಿಂದ ಗರಿಷ್ಠ 25 ವರ್ಷಗಳವರೆಗೆ ಒಂದೇ ಕಡೆ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಲ ಕಡ್ಡಾಯ ವರ್ಗಾವಣೆ ಬದಲಿಗೆ ವಲಯ ವರ್ಗಾವಣೆಯಡಿ, ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಇಲಾಖೆ ಮುಂದಾಗಿದೆ. ಇದರಲ್ಲಿ ಗ್ರಾಮೀಣದವರಿಗೆ ಮೊದಲ ಆದ್ಯತೆ ನೀಡದಿರುವುದು ಸರಿಯಲ್ಲ’ ಎಂದು ರಾಜ್ಯ ಸರ್ಕಾರಿ ಗ್ರಾಮೀಣ ಶಾಲೆಗಳ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಎಂ. ಸಜ್ಜನ ‘ಪ್ರಜಾವಾಣಿ’ಯೊಂದಿಗೆ ಅಸಮಾಧಾನ ತೋಡಿಕೊಂಡರು.

‘ಇಲಾಖೆಯ ಈ ನಡೆಯಿಂದ 3,058 ಮಂದಿ ‘ಎ’ ವಲಯದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಬಿಟ್ಟ ಸ್ಥಳಗಳು ಉಳಿದವರಿಗೆ ಸಿಗಲಿವೆ. ಇದರಿಂದಾಗಿ ಅಂಗವಿಕಲರು, ಮಹಿಳೆಯರು ಸೇರಿದಂತೆ ವಿವಿಧ ರೀತಿಯ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ‘ಬಿ’ ಮತ್ತು ‘ಸಿ’ ವಲಯದ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಸೇವಾವಧಿಯಲ್ಲಿ ಕಡೆಯ ವರ್ಷಗಳನ್ನು ನಗರದಲ್ಲಿ ಕಳೆಯಬೇಕೆಂಬ ಬಹುತೇಕರ ಕನಸು ಕನಸಾಗಿಯೇ ಉಳಿಯಲಿದೆ’ ಎಂದರು.

‘ಕಳೆದ ಸಲ ವರ್ಗಾವಣೆಯಾದವರಿಗೆ ಅನಾನುಕೂಲವಾಗಿದೆ ಎಂದು ವರ್ಗಾವಣೆ ನಿಯಮಗಳನ್ನು ಗಾಳಿಗೆ ತೂರಿ ಅನುಕೂಲ ಮಾಡಿಕೊಟ್ಟರೆ, ಉಳಿದವರಿಗೆ ಆಗುವ ಅನ್ಯಾಯವನ್ನು ಯಾರು ಸರಿಪಡಿಸುತ್ತಾರೆ? ಸರ್ಕಾರವೇ ಜಾರಿಗೆ ತಂದಿರುವ ವಲಯ ವರ್ಗಾವಣೆಯನ್ನು ಕೆಲವರಿಗಾಗಿ ಉಲ್ಲಂಘಿಸುವುದು ಯಾವ ನ್ಯಾಯ?’ ಎಂದು ಪ್ರಶ್ನಿಸಿದರು.

ಡಿ. 31ಕ್ಕೆ ಅಂತಿಮ ಪಟ್ಟಿ

ವರ್ಗಾವಣೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಹಾಗೂ ಅನುಮೋದನೆ ಕಾರ್ಯ ಡಿ. 1ರಿಂದ ಆರಂಭವಾಗಿದ್ದು, 11ಕ್ಕೆ ಪೂರ್ಣಗೊಳ್ಳಲಿದೆ. 15ಕ್ಕೆ ವರ್ಗಾವಣೆಗೆ ಅರ್ಹ ಹಾಗೂ ಅನರ್ಹ ಶಿಕ್ಷಕರ ಆದ್ಯತಾ ಪಟ್ಟಿ ಪ್ರಕಟಿಸಲಾಗುತ್ತಿದೆ. ಇದಕ್ಕೆ 16ರಿಂದ 23ರವರೆಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. 24 ರಿಂದ 29ರವರೆಗೆ ಬಹಿರಂಗವಾಗಿ ಆಕ್ಷೇಪಣೆಗಳನ್ನು ಆಲಿಸಿ, ಡಿ. 31ರಂದು  ಅಂತಿಮ ಆದ್ಯತಾ ಪಟ್ಟಿ ಪ್ರಕಟಿಸಲಾಗುತ್ತದೆ.

‘ಈ ಸಲ ಮಾತ್ರ ವಿನಾಯಿತಿ’

‘2019ರಲ್ಲಿ ಕಡ್ಡಾಯ ವರ್ಗಾವಣೆಯಾದವರಿಗೆ ಕೆಲ ಸಮಸ್ಯೆ ಆಗಿರುವುದರಿಂದ, ಸರ್ಕಾರ ಈ ಬಾರಿ ಅವರಿಗೆ ಮಾತ್ರ ವಿಶೇಷ ವಿನಾಯಿತಿ ನೀಡಿದೆ. ಈ ಕುರಿತು, ಶಿಕ್ಷಕರ ಸಂಘದ ಜತೆ ಚರ್ಚಿಸಿದ ಬಳಿಕವೇ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಡಿಮೆ ಹುದ್ದೆಗಳು ಇದ್ದಾಗ ಸಮಸ್ಯೆಯಾಗುತ್ತದೆ. ಈ ಬಾರಿ ಹೆಚ್ಚು ಖಾಲಿ ಹುದ್ದೆಗಳಿರುವುದರಿಂದ ತೊಂದರೆಯಾಗುವುದಿಲ್ಲ. ಕೆಲವರು ಬಯಸಿದ ಶಾಲೆ ಬದಲಿಗೆ, ಪಕ್ಕದ ಶಾಲೆ ಸಿಗಬಹುದಷ್ಟೇ. ಇಡೀ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದ್ದು, ಯಾರಿಗೂ ಅನ್ಯಾಯವಾಗುವುದಿಲ್ಲ. ಇಲಾಖೆಯಲ್ಲಿರುವ 2 ಲಕ್ಷ ಶಿಕ್ಷಕರ ಪೈಕಿ, 71,558 ಮಂದಿ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಇಷ್ಟು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗಿರುವುದು ಇದೇ ಮೊದಲು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು