ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಜೊತೆ ‘ಸಾಯ್‌’ ಕೇಂದ್ರದ ಒಪ್ಪಂದ

ಕಟ್ಟಡ, ಮತ್ತಷ್ಟು ಹೊಸ ಕ್ರೀಡೆಗಳ ನಿರೀಕ್ಷೆಯಲ್ಲಿ ಆಟಗಾರರು, ತರಬೇತುದಾರರು
Last Updated 9 ಜನವರಿ 2021, 3:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡದ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ತರಬೇತಿ ಕೇಂದ್ರವುರಾಜ್ಯ ಸರ್ಕಾರದ ಜೊತೆ ಮೂರು ದಶಕಗಳ ಬಳಿಕ ಒಪ್ಪಂದ (ಎಂಒಯು)ಮಾಡಿಕೊಂಡಿದ್ದು, ಇನ್ನು ಮುಂದೆ ಕ್ರೀಡೆಗಳ ತರಬೇತಿ, ಕ್ರೀಡಾ ಸೌಲಭ್ಯಗಳು ಹೆಚ್ಚಾಗುವ ನಿರೀಕ್ಷೆ ಮೂಡಿದೆ.

ಕೇಂದ್ರ ಸರ್ಕಾರ ಅಧೀನದ ಸಾಯ್‌ ಕೇಂದ್ರಗಳು ಬೆಂಗಳೂರು, ಮಡಿಕೇರಿ ಮತ್ತು ಧಾರವಾಡದಲ್ಲಿ ಮಾತ್ರ ಇವೆ. ಇಲ್ಲಿ 1991ರಲ್ಲಿ ಕ್ರೀಡಾ ಕೇಂದ್ರ ಆರಂಭವಾಗಿತ್ತು.ಉತ್ತರ ಕರ್ನಾಟಕದ ಏಕೈಕ ಕೇಂದ್ರವಾದ ಧಾರವಾಡದಲ್ಲಿಈ ಭಾಗದ ಕ್ರೀಡಾಪಟುಗಳೇ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಎಂಒಯು ಮಾಡಿಕೊಳ್ಳದ ಕಾರಣ ಕ್ರೀಡಾ ಕೇಂದ್ರಕ್ಕೆ ಹೊಸ ಕಟ್ಟಡಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ.

ಕ್ರೀಡಾ ಕೇಂದ್ರದಲ್ಲಿ ಈಗ ಟೇಕ್ವಾಂಡೊ, ಕಬಡ್ಡಿ, ಕುಸ್ತಿ ಮತ್ತು ಬ್ಯಾಸ್ಕೆಟ್‌ಬಾಲ್‌ ಕ್ರೀಡೆಗಳಿಗೆ ತರಬೇತಿ ನೀಡಲಾಗುತ್ತಿದೆ. ಸುಸಜ್ಜಿತ ಕಟ್ಟಡ ಮತ್ತು ಹಾಸ್ಟೆಲ್‌ ಸೌಲಭ್ಯದ ಕೊರತೆಯಿಂದಾಗಿ ಕ್ರೀಡಾಪಟುಗಳ ಸಂಖ್ಯೆ ಕಡಿಮೆಯಾಗಿತ್ತು. ಬಾಲಕಿಯರಿಗೆ ತರಬೇತಿ ಕೈ ಬಿಡಲಾಗಿತ್ತು.

ಗುಣಮಟ್ಟದ ಹಾಸ್ಟೆಲ್‌ ನಿರ್ಮಿಸಿಕೊಳ್ಳಲು ರಾಜ್ಯ ಸರ್ಕಾರದ ಜೊತೆ ಎಂಒಯು ಮಾಡಿಕೊಳ್ಳುವುದು ಅಗತ್ಯವಾಗಿತ್ತು. ಈಗ ಆ ಕೆಲಸವಾಗಿದೆ. ಹೊಸ ಕಟ್ಟಡ ನಿರ್ಮಾಣಗೊಂಡರೆ ಇನ್ನಷ್ಟು ಕ್ರೀಡೆಗಳ ತರಬೇತಿ ಆರಂಭಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸಾಯ್‌ ಕೇಂದ್ರದ ಸಿಬ್ಬಂದಿ.

ಧಾರವಾಡ ಕೇಂದ್ರದ ಹಿಂದಿನ ಉಸ್ತುವಾರಿ ಹಾಗೂ ಕಬಡ್ಡಿ ತರಬೇತುದಾರಈಶ್ವರ ಅಂಗಡಿ ಪ್ರತಿಕ್ರಿಯಿಸಿ ‘ಕಟ್ಟಡವಿಲ್ಲದ ಕಾರಣಕ್ಕೆ ಹೆಚ್ಚು ಕ್ರೀಡಾಪಟುಗಳಿಗೆ ತರಬೇತಿ ನೀಡಲು ಸಾಧ್ಯವಾಗುತ್ತಿರಲಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನೆರವಿನಿಂದ ಹೊಸ ಕಟ್ಟಡ ನಿರ್ಮಾಣವಾದರೆ ಸಾಯ್‌ ತರಬೇತುದಾರರಿಂದಈ ಭಾಗದ ಕ್ರೀಡಾಪಟುಗಳಿಗೆ ಸ್ಥಳೀಯವಾಗಿಯೇ ಗುಣಮಟ್ಟದ ತರಬೇತಿ ಸಿಗುತ್ತದೆ. ಇದರಿಂದ ಇಲ್ಲಿನ ಕ್ರೀಡಾಪಟುಗಳು ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಹೋಗುವುದು ತಪ್ಪುತ್ತದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕುಸ್ತಿ ಸಂಘದ ಸದಸ್ಯ ಶ್ರೀನಿವಾಸ ಶಾಸ್ತ್ರಿ ‘ಎಂಒಯುನಿಂದಾಗಿ ಅಭಿವೃದ್ಧಿಯ ಹಾದಿ ಸುಗಮವಾಗಿದೆ. ಇಲ್ಲಿನ ಕೇಂದ್ರದಲ್ಲಿ ಕುಸ್ತಿ ಸೇರಿದಂತೆ ಇನ್ನಷ್ಟು ಹೊಸ ಕ್ರೀಡೆಗಳನ್ನು ಸೇರಿಸಿದರೆ ಕ್ರೀಡಾಪಟುಗಳ ಸಂಖ್ಯೆ ಹೆಚ್ಚುತ್ತದೆ’ ಎಂದರು.

ಸೌಲಭ್ಯ ಕಲ್ಪಿಸಲು ಒತ್ತು: ಜೋಶಿ

ಹುಬ್ಬಳ್ಳಿ: ಸಾಯ್‌ ಕೇಂದ್ರದಲ್ಲಿನಮ್ಮ ಭಾಗದ ಕ್ರೀಡಾಪಟುಗಳು ಸ್ಥಳೀಯವಾಗಿಯೇ ತರಬೇತಿ ಪಡೆಯಲು ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಒತ್ತು ಕೊಡುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಕೆಲ ವರ್ಷಗಳ ಹಿಂದೆ ಧಾರವಾಡದಿಂದ ಸಾಯ್‌ ಕೇಂದ್ರವನ್ನು ಸ್ಥಳಾಂತರಿಸಲು ಸಿದ್ಧತೆ ನಡೆದಿತ್ತು. ಕಬಡ್ಡಿಯನ್ನೂ ಸ್ಥಳಾಂತರ ಮಾಡುವ ಹುನ್ನಾರಕ್ಕೆತಡೆಯೊಡ್ಡಿ ಆ ಕ್ರೀಡೆ ಧಾರವಾಡದಲ್ಲಿಯೇ ಉಳಿಯುವಂತೆ ಮಾಡಿದ್ದೇನೆ. ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಲಿರುವ ಕ್ರೀಡಾಂಗಣಗಳ ಜೊತೆಗೆ ಸಾಯ್‌ ಕೇಂದ್ರಕ್ಕೂ ಕಟ್ಟಡ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಹಂತಹಂತವಾಗಿಕಲ್ಪಿಸಲುಕೇಂದ್ರ ಕ್ರೀಡಾ ಸಚಿವರ ಜೊತೆ ಚರ್ಚಿಸುತ್ತೇನೆ’ ಎಂದು ತಿಳಿಸಿದರು.

***

ದೊಡ್ಡ ಸಾಧನೆ ಮಾಡಬೇಕೆಂದರೆ ಸಾಯ್‌ ಕೇಂದ್ರಗಳಲ್ಲಿ ತರಬೇತಿ ಪಡೆಯಬೇಕು, ಕ್ರೀಡೆ ಜೊತೆಗೆ ಶಿಕ್ಷಣವೂ ಉಚಿತವಾಗಿ ಸಿಗುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುತ್ತದೆ.

- ಹರೀಶ ನಾಯ್ಕ,ಧಾರವಾಡ ಸಾಯ್‌ ಕೇಂದ್ರದ ಕಬಡ್ಡಿ ಆಟಗಾರ

***

ಎಂಒಯು ಆಗಿರುವುದರಿಂದ ಹೊಸ ಕ್ರೀಡೆಗಳು ಬರಲು ಅವಕಾಶವಿರುತ್ತದೆ. ಇದರಿಂದ ಉತ್ತರ ಕರ್ನಾಟಕದ ಮಕ್ಕಳು ತರಬೇತಿಗಾಗಿ ದೂರದ ಊರುಗಳಿಗೆ ಹೋಗುವುದು ತಪ್ಪುತ್ತದೆ.

-ಮಂದಾರ ಶೆಟ್ಟಿ, ಕಬಡ್ಡಿ ಕೋಚ್‌

***

ಧಾರವಾಡ ಕೇಂದ್ರದಲ್ಲಿ ಕೋಚ್‌ಗಳು ನೀಡಿದ ವೈಜ್ಞಾನಿಕ ತರಬೇತಿ ಮತ್ತು ಅಲ್ಲಿ ಸಿಕ್ಕ ಸ್ಫೂರ್ತಿ ಬದುಕಿನ ದಿಕ್ಕು ಬದಲಿಸಿದೆ. ಆದ್ದರಿಂದ ಸಾಯ್‌ನಲ್ಲಿ ಅವಕಾಶ ಸಿಗಲು ಅದೃಷ್ಟ ಮಾಡಿರಬೇಕು.

- ಎಲ್‌. ಪುನೀತ್‌, ಕಬಡ್ಡಿ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT