ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ನೊಂದವರಿಗೆ ನೆರವಾಗುವ ‘ಸಖಿ’

Published 4 ಜುಲೈ 2023, 5:45 IST
Last Updated 4 ಜುಲೈ 2023, 5:45 IST
ಅಕ್ಷರ ಗಾತ್ರ

ಗೋವರ್ಧನ ಎಸ್.ಎನ್.

ಹುಬ್ಬಳ್ಳಿ: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಹಾಗೂ ಮಕ್ಕಳು ನ್ಯಾಯಕ್ಕಾಗಿ ಪರಿತಪಿಸುವಾಗ, ವೈದ್ಯಕೀಯ, ಕಾನೂನು ನೆರವಿನೊಂದಿಗೆ ಆತ್ಮಸ್ಥೈರ್ಯವನ್ನೂ ತುಂಬುತ್ತಾಳೆ ಈ ‘ಸಖಿ’.

ದೆಹಲಿಯಲ್ಲಿ ನಡೆದ ನಿರ್ಭಯಾ ಘಟನೆ ಬಳಿಕ, ದೌರ್ಜನ್ಯದಿಂದ ನೊಂದ ಮಹಿಳೆಯರಿಗೆ ಅಗತ್ಯ ನೆರವು ನೀಡಲು ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಂಡಿತ್ತು. ಒಂದೇ ಸೂರಿನಡಿ ವೈದ್ಯರು, ಪೊಲೀಸರು ಹಾಗೂ ವಕೀಲರು ನೆರವು ಒದಗಿಸಲು 2019ರ ನವೆಂಬರ್‌ನಲ್ಲಿ ‘ಸಖಿ–ಒನ್‌ ಸ್ಟಾಪ್’ ಕೇಂದ್ರಗಳ ಪರಿಕಲ್ಪನೆ ಜಾರಿಗೊಳಿಸಿತು. ಅದೇ ವರ್ಷ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ಎಂ.ಸಿ.ಎಚ್‌ ಕಟ್ಟಡದಲ್ಲಿ ಸಖಿ ಕೇಂದ್ರ ಆರಂಭಗೊಂಡಿತು. ಈವರೆಗೆ 666 ನೊಂದ ಮಹಿಳೆಯರು ಹಾಗೂ ಮಕ್ಕಳು ಈ ಕೇಂದ್ರದಿಂದ ನೆರವು ಪಡೆದಿದ್ದಾರೆ.

ಆಡಳಿತ ವ್ಯವಸ್ಥೆ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುವ ಸಖಿ ಕೇಂದ್ರದಲ್ಲಿ ಒಬ್ಬರು ಆಡಳಿತಾಧಿಕಾರಿ ಸೇರಿ 8 ಮಂದಿ ಕಾರ್ಯ ನಿರ್ವಹಿಸುತ್ತಾರೆ. ಒಬ್ಬರು ಆಪ್ತ ಸಮಾಲೋಚಕರು, ಇಬ್ಬರು ಸಮಾಜ ಕಾರ್ಯಕರ್ತೆಯರು, ಇಬ್ಬರು ಕಾನೂನು ಸಲಹೆಗಾರರು, ಇಬ್ಬರು ಸಹಾಯಕಿಯರು ಇರುತ್ತಾರೆ. ವೈದ್ಯರು,  ಸರ್ಕಾರಿ ವಕೀಲರು, ಪೊಲೀಸ್‍ ಸಿಬ್ಬಂದಿ ಕೇಂದ್ರದ ಸಂಪರ್ಕದಲ್ಲಿ ಇರುತ್ತಾರೆ.

ಮಹಿಳಾ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇತೃತ್ವದಲ್ಲಿ ಸಖಿ ಕೇಂದ್ರವು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.
ಸರಳಾ ಮಣಕವಾಡ, ಆಡಳಿತಾಧಿಕಾರಿ ಸಖಿ ಕೇಂದ್ರ

‘ದೇಶದ ಜಿಲ್ಲಾಸ್ಪತ್ರೆಗಳಲ್ಲಿ 702 ಸಖಿ ಕೇಂದ್ರಗಳು ಇವೆ. ಧಾರವಾಡದ ಜಿಲ್ಲಾಸ್ಪತ್ರೆಯಲ್ಲೂ ಸಖಿ ಕೇಂದ್ರ ಆರಂಭ ಆಗಲಿದೆ. ಲೈಂಗಿಕ, ಕೌಟುಂಬಿಕ, ದೈಹಿಕ ಶೋಷಣೆಗೆ ಒಳಗಾದ ಮಹಿಳೆಯರು ಸದ್ಯ ಹುಬ್ಬಳ್ಳಿಯಲ್ಲಿರುವ ಸಖಿ ಕೇಂದ್ರಕ್ಕೆ ಧಾರವಾಡ ಜಿಲ್ಲೆ ಅಲ್ಲದೆ ಇತರೆ ಜಿಲ್ಲೆಯವರೂ ದೂರು ನೀಡಬಹುದು’ ಎಂದು ಸಖಿ ಕೇಂದ್ರದ ಆಡಳಿತಾಧಿಕಾರಿ ಸರಳಾ ಮಣಕವಾಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೊಲೀಸ್‌ ಠಾಣೆಯಲ್ಲಿ ಮೊದಲೇ ದೂರು ನೀಡಿದ್ದರೂ, ಸಖಿ ಕೇಂದ್ರದ ನೆರವು ಪಡೆಯಬಹುದು. ದೂರು ದಾಖಲಾದ ಎರಡು ಗಂಟೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಶೋಷಣೆಗೆ ಒಳಗಾದವರು ಇರುವಲ್ಲಿಯೇ ಪಿಎಸ್‍ಐ ದರ್ಜೆಯ ಮಹಿಳಾ ಪೊಲೀಸ್‍ ಅಧಿಕಾರಿ ಬಂದು, ದೂರು ದಾಖಲಿಸಿಕೊಳ್ಳುತ್ತಾರೆ’ ಎಂದು ಅವರು ವಿವರಿಸಿದರು.

‘ಮುಂದಿನ ಕಾನೂನು ಪ್ರಕ್ರಿಯೆ, ನಿಯಮಾವಳಿ ಕುರಿತು ಸರ್ಕಾರಿ ವಕೀಲರು ಸಂತ್ರಸ್ತೆಗೆ ಅರಿವು ಮೂಡಿಸುತ್ತಾರೆ. ಸಖಿ ಕೇಂದ್ರದ ಆಪ್ತಸಮಾಲೋಚಕರು 5-6 ಬಾರಿ ಸಮಾಲೋಚನೆ ನಡೆಸಿ, ಆತ್ಮಸ್ಥೈರ್ಯ ತುಂಬುತ್ತಾರೆ. ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರೇ ಸಂತ್ರಸ್ತೆ ಪರ ವಾದ ಮಂಡಿಸುವರು. ಈ ಎಲ್ಲಾ ಪ್ರಕ್ರಿಯೆಗಳು ಸಂಪೂರ್ಣ ಉಚಿತ’ ಎಂದರು.

ಪುನರ್ವಸತಿ ವ್ಯವಸ್ಥೆ

ಸಂತ್ರಸ್ತೆಯು ಮನೆ ಅಥವಾ ತಾನಿದ್ದ ಜಾಗಕ್ಕೆ ಹೋಗಲು ತಿರಸ್ಕರಿಸಿದರೆ, ವಸತಿ ವ್ಯವಸ್ಥೆಯನ್ನೂ ಕಲ್ಪಿಸುತ್ತೇವೆ. ಅಪ್ರಾಪ್ತರಿಗೆ ಬಾಲಮಂದಿರಗಳಲ್ಲಿ, ವಯಸ್ಕರಿಗೆ ಸ್ವಾಧಾರ ಕೇಂದ್ರಗಳಲ್ಲಿ ಊಟೋಪಚಾರ ಸಹಿತ ವಸತಿ ಸೌಲಭ್ಯ ಉಚಿತವಾಗಿ ಸಿಗುತ್ತದೆ’ ಎಂದರು.

ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಪೋಕ್ಸೊ ದಾಖಲಾಗುತ್ತದೆ. ಸಾಕ್ಷ್ಯಗಳ ಕೊರತೆಯಿಂದ, ದೂರು ನೀಡಿದವರು ಹೊಂದಾಣಿಕೆ ಮಾಡಿಕೊಂಡಾಗ ದೌರ್ಜನ್ಯ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವುದಿಲ್ಲ. ಹೀಗಾಗಿ ಲೈಂಗಿಕ ಶಿಕ್ಷಣ ಮತ್ತು ಕಾನೂನು ಅರಿವಿನ ಕುರಿತು ಜನರಿಗೆ ಇನ್ನಷ್ಟು ಅರಿವು ಮೂಡಿಸಲಾಗುತ್ತದೆ’ ಎಂದರು.

ಯಾವ ಪ್ರಕರಣಗಳಲ್ಲಿ ದೂರು ನೀಡಬಹುದು

  • ಲೈಂಗಿಕ ಕಿರುಕುಳ

  • ಕೌಟುಂಬಿಕ ದೌರ್ಜನ್ಯ

  • ವರದಕ್ಷಿಣೆ ಕಿರುಕುಳ

  • ಆ್ಯಸಿಡ್‌ ದಾಳಿ

  • ಸೈಬರ್‌ ಅಪರಾಧ (ಅಶ್ಲೀಲ ಸಂದೇಶ ರವಾನೆ ಖಾಸಗಿತನಕ್ಕೆ ಧಕ್ಕೆ ಇತ್ಯಾದಿ)

ಸಂತ್ರಸ್ತರ ವಸತಿ ಕೇಂದ್ರಗಳು

ಬಾಲಭವನ ಉಣಕಲ್‌ ಕ್ರಾಸ್‌ ಹುಬ್ಬಳ್ಳಿ

ಬಾಲಕಿಯರ ಭವನ ಕ್ರಿಶ್ಚಿಯನ್ ಕಾಲೊನಿ ಹುಬ್ಬಳ್ಳಿ

ಸ್ನೇಹ ವಸತಿ ಗೃಹ ರಾಯಪುರ

ದರ್ಶನ್‌ ತೆರೆದ ವಸತಿ ಗೃಹ ಧಾರವಾಡ

ಸಖಿ ಕೇಂದ್ರದಲ್ಲಿ ದಾಖಲಾದ ದೂರುಗಳ ವಿವರ

ವರ್ಷ ; ಅಪ್ರಾಪ್ತರು ; ವಯಸ್ಕರು

2021-22 ; 131 ; 79

2022-23 ; 99 ; 56

2023-24 (ಜೂನ್‍ 27ರವರೆಗೆ) ; 30 ; 14

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT