ಹಬ್ಬಳ್ಳಿ: ’ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರನ್ನು ನಾಮಕರಣ ಮಾಡಬೇಕು ಎಂಬ ಹಲವು ದಿನಗಳ ಈ ಭಾಗದ ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂಬ ಭರವಸೆ ನೀಡಿದ್ದಾರೆ. ಶೀಘ್ರದಲ್ಲಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣವಾಗುವ ಸಾಧ್ಯತೆ ಇದೆ’ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯು ಮಂಗಳವಾರ ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
’ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಬಳಿಯೇ ಸಂಗೊಳ್ಳಿ ರಾಯಣ್ಣ ಅವರ ಬೃಹತ್ ಮೂರ್ತಿಯನ್ನೂ ಸ್ಥಾಪನೆ ಮಾಡಬೇಕು ಎಂಬುದು ರಾಯಣ್ಣ ಅಭಿಮಾನಿಗಳ ಒತ್ತಾಯವೂ ಆಗಿತ್ತು. ಸಾಕಷ್ಟು ಸಮಸ್ಯೆಗಳ ನಡುವೆಯೇ ಅಂತಿಮವಾಗಿ ರಾಯಣ್ಣನ ಪುತ್ಥಳಿಯನ್ನು ವೃತ್ತದ ಬಳಿ ಸ್ಥಾಪನೆ ಮಾಡಿದ್ದ ಸಂತಸದ ಸಂಗತಿಯಾಗಿದೆ’ ಎಂದು ಹೇಳಿದರು.
’ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರು ಹಾಗೂ ಸಮಾಜದ ಸುಧಾರಣೆಗಾಗಿ ಶ್ರಮಿಸಿದ ಸಂತರು–ಶರಣರನ್ನು ಎಂದಿಗೂ ಯಾವುದೇ ಜಾತಿಗೆ ಸೀಮಿತ ಮಾಡಬಾರದು. ಅವರ ಚಿಂತನೆಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 32 ಜನ ಸಾಧಕರಿಗೆ ’ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಪ್ರಶಸ್ತಿ ಹಾಗೂ ಐವರಿಗೆ ’ವೀರ ರಾಣಿ ಕಿತ್ತೂರು ರಾಣಿ ಚನ್ನಮ್ಮ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು. ಎಚ್.ಎಫ್.ಮುದಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಜೋಗಿನ ಹಾಗೂ ಸಮಿತಿಯ ಪ್ರಮುಖರು ವೇದಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.