ಅಳ್ನಾವರ: ನೀರು ಮಾನವನಿಗೆ ಅವಶ್ಯವಾಗಿ ಬೇಕು. ನೀರನ್ನು ಮಹಿಳೆಯರು ಹಿತ, ಮಿತವಾಗಿ ಬಳಕೆ ಮಾಡಬೇಕು ಎಂದು ಪಟ್ಟಣ ಪಂಚಾಯ್ತಿ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಬಸವರಾಜ ಬೆಣ್ಣಿಶಿರೂರ ಹೇಳಿದರು.
ಭಾರತ ಸರ್ಕಾರದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯದ ನಿರ್ದೇಶನದಂತೆ ಅಮೃತ -2 ಕಾರ್ಯಕ್ರಮದಡಿ ವುಮೆನ್ ಫಾರ್ ವಾಟರ್ ಫಾರ್ ವುಮೆನ್ ಕ್ಯಾಂಪೇನ್ ಹಾಗೂ ಜಲ ದೀಪಾವಳಿ ಕಾರ್ಯಕ್ರಮ ಪ್ರಯುಕ್ತ ದೀನದಯಾಳ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ರಚನೆಯಾದ 30 ಸ್ವಸಹಾಯ ಪುಂಪಿನ ಸದಸ್ಯರಿಗೆ ಕಾಳಿ ನದಿ ನೀರು ಯೋಜನೆಯ ಜಾವಳ್ಳಿ ನೀರು ಶುದ್ದೀಕರಣ ಘಟಕ ಹಾಗೂ ದಾಡೇಲಿ ಜಾಕವೆಲ್ ಸ್ಥಳಕ್ಕೆ ಕರೆದುಕೊಂಡು ಭೇಟಿ ನೀಡಲಾಯಿತು.
ಜಾವಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೀರು ಶುದ್ಧೀಕರಣ ಘಟಕದ ವ್ಯವಸ್ಥೆ, ನೀರಿನ ಸರಬರಾಜು, ನೀರು ಶುದ್ಧೀರಣ ಘಟಕದ ವಿವಿಧ ವಿಭಾಗಗಳು, ನೀರಿನ ಪ್ರಯೋಗಾಲಯ, ಶುದ್ಧೀಕರಣಕ್ಕೆ ಬಳಕೆ ಮಾಡುವ ಸಾಮಗ್ರಿಗಳು ಹಾಗೂ ನೀರಿನಿಂದ ಹರಡುವ ರೋಗಾಣುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಕಾಳಿ ನದಿ ನೀರು ಯೋಜನೆಯ ಅಧಿಕಾರಿ ದಾಸ್ ಮಾಹಿತಿ ನೀಡಿದರು.
ಪಟ್ಟಣ ಪಂಚಾಯ್ತಿ ಸಮುದಾಯ ಸಂಘಟನಾಧಿಕಾರಿ ನಾಗರಾಜ ಗುರ್ಲಹುಸೂರ ಮಾತನಾಡಿ, ನೀರಿನ ಬಳಕೆ, ನೀರಿನ ಮಹತ್ವ, ನೀರು ಶುದ್ದೀಕರಣ ಆಗುವ ಬಗ್ಗೆ ಜಾಗೃತಿ ಮೂಡಿಸಿದರು.
ಪಟ್ಟಣ ಪಂಚಾಯ್ತಿ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಬಸವರಾಜ ಬೆಣ್ಣಿಶಿರೂರ, ಮುಖ್ಯಾಧಿಕಾರಿ ಪ್ರಕಾಶ ಮುಗದುಮ್, ಸಮುದಾಯ ಸಂಘನಾಧಿಕಾರಿ ಎಂ.ಎಸ್.ಬೆಂತೂರ, ಸಮುದಾಯ ಸಂಪನ್ಮೂಲ ವ್ಯಕ್ತಿ ಶ್ವೇತಾ ಕಡಕೋಳ, ಪಟ್ಟಣ ಪಂಚಾಯ್ತಿ ಸಿಬ್ಬಂದಿ ದೀಪಕ ಕಿತ್ತೂರ, ಪ್ರವೀಣ ದೊಡ್ಡಮನಿ, ಜಾನ್ ತಮಗುಂಟಿ ಇದ್ದರು.