ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರು ಮತಗಟ್ಟೆಗೆ ಬಂದು ಮಾದರಿಯಾಗಲಿ: ಚುನಾವಣಾಧಿಕಾರಿ ಎಸ್.ಭರತ್ ಮನವಿ

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತಕ್ಷೇತ್ರದ ಚುನಾವಣಾಧಿಕಾರಿ ಎಸ್.ಭರತ್ ಮನವಿ
Last Updated 1 ಏಪ್ರಿಲ್ 2023, 5:56 IST
ಅಕ್ಷರ ಗಾತ್ರ

ಧಾರವಾಡ: ‘ಈ ಬಾರಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಅಂಚೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗಿದ್ದರೂ, ಅನಿವಾರ್ಯವಲ್ಲದವರು ತಮ್ಮ ಹೆಸರು ಇರುವ ಮತಗಟ್ಟೆಗೆ ಬಂದು ಮತ ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು’ ಎಂದು ಹುಬ್ಬಳ್ಳಿ–ಧಾರವಾಡ ಪಶ್ಚಿಮ ಮತಕ್ಷೇತ್ರದ ಚುನಾವಣಾಧಿಕಾರಿ ಎಸ್. ಭರತ್ ಮನವಿ ಮಾಡಿದರು.

‘ಮನೆಯಲ್ಲೇ ಕುಳಿತು ಅಂಚೆ ಮತದಾನದ ಮೂಲಕ ಮತ ಚಲಾಯಿಸುವವರಿಂದ ಅರ್ಜಿ ಪಡೆಯಲು ಶೀಘ್ರದಲ್ಲೇ ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡಲಿದ್ದಾರೆ. ಈ ಅರ್ಜಿಗಳನ್ನು ಪರಿಶೀಲಿಸಿ, ಸಾರ್ವತ್ರಿಕ ಮತದಾನಕ್ಕೂ ಮುನ್ನ ಚುನಾವಣಾ ಸಿಬ್ಬಂದಿ, ಪೊಲೀಸ್ ಹಾಗೂ ವಿಡಿಯೊ ದಾಖಲಿಸುವ ತಂಡ ಆಯಾ ಮನೆಗಳಿಗೆ ಭೇಟಿ ನೀಡಿ, ಅಂಚೆ ಮತಪತ್ರ ನೀಡಿ, ಸಂಗ್ರಹಿಸಲಿವೆ. ಇದರ ದಿನಾಂಕ ಶೀಘ್ರದಲ್ಲಿ ತಿಳಿಸಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮ ನಡೆಯದಂತೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು 0836–2446133 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು’ ಎಂದು ಹೇಳಿದರು.

‘ಪಶ್ಚಿಮ ಮತಕ್ಷೇತ್ರದಲ್ಲಿ ಶೇ 100ರಷ್ಟು ಗುರುತಿನ ಚೀಟಿ ವಿತರಿಸಲಾಗಿದೆ. ಕಳೆದ ಜ. 15ರಿಂದ ಬಾಕಿ ಇದ್ದ 15,439 ಮತದಾರರ ಗುರುತಿನ ಚೀಟಿಗಳನ್ನು ಅಂಚೆ ಮೂಲಕ ವಿತರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು.

‘ಈ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಹಾಗೂ ಮತದಾನ ಖಾತ್ರಿಗೆ ವಿವಿಪ್ಯಾಟ್‌ ಯಂತ್ರ ಬಳಸಲಾಗುವುದು. ಮತಗಟ್ಟೆಗಳಿಗೆ ಬಳಸಲಾಗುವ ಎಲ್ಲಾ ಮತಯಂತ್ರಗಳನ್ನು 2ನೇ ಹಂತದಲ್ಲಿ ರ‍್ಯಾಂಡಮೈಸೇಷನ್ ಮಾಡಲಾಗುವುದು. ಈ ಪ್ರಕ್ರಿಯೆಯನ್ನು ವೀಕ್ಷಕರ ಹಾಗೂ ಅಭ್ಯರ್ಥಿಗಳ ಅಥವಾ ಅವರ ಏಜೆಂಟರ ಸಮ್ಮುಖದಲ್ಲಿ ಮಾಡಲಾಗುವುದು. ಇವಿಎಂ ಮತ್ತು ವಿವಿಪ್ಯಾಟ್‌ಗಳ ಕುರಿತು ಈಗಾಗಲೇ ಸೆಕ್ಟರ್ ಅಧಿಕಾರಿಗಳ ಮೂಲಕ ವ್ಯಾಪಕ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ರಾಜಕೀಯ ಪಕ್ಷಗಳ ಮುಖಂಡರಿಗೆ ಹಾಗೂ ಮತದಾರರಿಗೆ ತಿಳಿವಳಿಕೆ ನೀಡಲಾಗಿದೆ’ ಎಂದು ಎಸ್.ಭರತ್ ತಿಳಿಸಿದರು.

ಸಹಾಯಕ ಚುನಾವಣಾಧಿಕಾರಿ ಯಶವಂತಕುಮಾರ, ಸಹಾಯಕ ಮತದಾರ ನೋಂದಣಿ ಅಧಿಕಾರಿ ಉಮೇಶ ಸವಣೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT