ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರ ಪಾಲಿಕೆ ಚುನಾವಣೆ: ಪಕ್ಷಕ್ಕೆ ಹಿನ್ನಡೆಯಾಗಿದ್ದು ನಿಜ–ಶೆಟ್ಟರ್

ನಮ್ಮವರೇ ಮೇಯರ್–ಉಪ ಮೇಯರ್ ಆಗಲಿದ್ದಾರೆ
Last Updated 12 ಸೆಪ್ಟೆಂಬರ್ 2021, 12:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಟಿಕೆಟ್ ಹಂಚಿಕೆಯಲ್ಲಾದ ಗೊಂದಲ ಮತ್ತು ಪಕ್ಷದ ಕೆಲ ಮುಖಂಡರು ಸರಿಯಾಗಿ ಕೆಲಸ ಮಾಡದಿದ್ದರಿಂದ ಹುಬ್ಬಳ್ಳಿ–ಧಾರವಾಡಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದ್ದು ನಿಜ. ಮತದಾರರ ಪಟ್ಟಿಯಲ್ಲಾದ ಯಡವಟ್ಟು ಹಾಗೂ ತಗ್ಗಿದ ಮತದಾನ ಪ್ರಮಾಣ ಕೂಡ ಹಿನ್ನಡೆಗೆ ಕಾರಣ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.‌

‘ಮತದಾರರ ಪಟ್ಟಿಯಲ್ಲಿನನ್ನ ಕುಟುಂಬದ ಸದಸ್ಯರ ಹೆಸರೇ ಒಂದೊಂದು ಕಡೆ ಇತ್ತು. ಈ ಕುರಿತು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ನಾವೇ ಅಧಿಕಾರಕ್ಕೆ: ‘ಚುನಾವಣೆಯಲ್ಲಿ ಪಕ್ಷ ಬಹುಮತ ಸಿಗದಿದ್ದರೂ, ಹೆಚ್ಚು ಸ್ಥಾನಗಳು ದಕ್ಕಿವೆ. ಸತತ ಮೂರನೇ ಸಲ ಪಕ್ಷ ಅಧಿಕಾರ ಹಿಡಿಯುವುದು ಖಚಿತ. ಪಕ್ಷದ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿ ಗೆದ್ದವರು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸ್ಥಳೀಯ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ.ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಅವರೆಲ್ಲರೂ ಪಕ್ಷವನ್ನು ಬೆಂಬಲ ವ್ಯಕ್ತಪಡಿಸಲಿದ್ದಾರೆ’ ಎಂದು ಹೇಳಿದರು.

‘ವಾರ್ಡ್ 69ರಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ದುರ್ಗಮ್ಮ ಬಿಜವಾಡ ಅವರ ಪತಿಶಶಿಕಾಂತ ಬಿಜವಾಡ ಅವರನ್ನು ಪಕ್ಷಕ್ಕೆ ಮತ್ತೆ ಬರ ಮಾಡಿಕೊಳ್ಳಲಾಗಿದೆ.ಇನ್ನೂ ಎರಡ್ಮೂರು ಮಂದಿ ಸದ್ಯದಲ್ಲೇ ಪಕ್ಷವನ್ನು ಮರಳಿ ಸೇರಲಿದ್ದಾರೆ’ ಎಂದರು.

‘ಶಿಸ್ತುಕ್ರಮದಡಿ ಪಕ್ಷದಿಂದ ಅಮಾನತುಗೊಂಡವರೇಚುನಾವಣೆ ಬಳಿಕ, ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ಪಕ್ಷಕ್ಕೆ ಮರಳಿ ಬರುವುದಾಗಿ ಮನವಿ ಮಾಡಿದ್ದರಿಂದ ಮತ್ತೆ ಸೇರಿಸಿಕೊಳ್ಳಲಾಗಿದೆ. ಉಳಿದವರು ಬರುವ ಇಚ್ಛೆ ತೋರಿದರೆ, ಆ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು, ಚುನಾವಣೆ ಸಂದರ್ಭದಲ್ಲಿ ಇದೆಲ್ಲಾ ಸಾಮಾನ್ಯ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಜಕೀಯಕ್ಕಾಗಿ ಆರೋಪ ಸಲ್ಲದು:‘ಚುನಾವಣಾ ಆಯೋಗವನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿದೆ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು,‘ಕೋವಿಡ್–19 ಕಾರಣಕ್ಕಾಗಿ ಆರು ತಿಂಗಳು ಯಾವುದೇ ಚುನಾವಣೆ ನಡೆಸಬಾರದು ಎಂದು ಸಚಿವ ಸಂಪುಟ ನಿರ್ಧರಿಸಿತ್ತು. ಆದರೂ, ಅನಿವಾರ್ಯವಾಗಿ ಚುನಾವಣೆ ಎದುರಿಸಬೇಕಾಯಿತು. ಹೀಗಿರುವಾಗ ಚುನಾವಣಾ ಆಯೋಗದ ದುರುಪಯೋಗ ಹೇಗೆ ಸಾಧ್ಯ? ರಾಜಕೀಯಕ್ಕಾಗಿ ಶಿವಕುಮಾರ್ ಅವರು ಇಂತಹ ಆರೋಪ ಮಾಡುವುದನ್ನು ಬಿಡಬೇಕು’ ಎಂದರು.

‘ಯಾವುದೇ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿಪಡಿಸುವುದು ಪ್ರಾದೇಶಿಕ ಆಯುಕ್ತರಿಗೆ ಬಿಟ್ಟಿದ್ದು. ಅದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇರುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬಿಜೆಪಿಯವರು ಹಣದ ಆಫರ್ ಕೊಟ್ಟಿದ್ದರು’ ಎಂಬ ಕಾಗವಾಡದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್,‘ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ಯಾವ ಶಾಸಕರಿಗೂ ಹಣದ ಆಮಿಷ ತೋರಿಸಿಲ್ಲ. ಅವರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೊ ಗೊತ್ತಿಲ್ಲ’ ಎಂದರು.

ಅಮಾನತುಗೊಂಡಿದ್ದ ಮಹಾನಗರ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಶಶಿಕಾಂತ ಬಿಜವಾಡ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು.

ಶಾಸಕ ಹಾಗೂ ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮುಖಂಡರಾದ ಶಿವು ಮೆಣಸಿನಕಾಯಿ, ದತ್ತಮೂರ್ತಿ ಕುಲಕರ್ಣಿ ಇದ್ದರು.

11 ದಿನದ ಗಣೇಶೋತ್ಸವಕ್ಕೆ ಸಲಹೆ

‘ಜಿಲ್ಲೆಯಲ್ಲಿ ಗಣೇಶೋತ್ಸವಕ್ಕೆ 5 ದಿನದ ಬದಲು 11 ದಿನಕ್ಕೆ ಅವಕಾಶ ನೀಡಬೇಕು. ಬೆಂಗಳೂರಿನಲ್ಲಿ ಕೆಲ ಷರತ್ತುಗಳೊಂದಿಗೆ 11 ದಿನ ಅನುಮತಿ ನೀಡಲಾಗಿದೆ. ಇಲ್ಲಿಯೂ ಅದೇ ರೀತಿ ಅನುಮತಿಗೆ ಕ್ರಮ ಕೈಗೊಳ್ಳುವಂತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮತ್ತು ಜಿಲ್ಲಾಧಿಕಾರಿಗೆ ಸಲಹೆ ನೀಡಿದ್ದೇನೆ. ಅವರು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಜಗದೀಶ ಶೆಟ್ಟರ್ ಹೇಳಿದರು.

ನಿಯಮ ಪ್ರಕಾರವೇ ಹಂಚಿಕೆ:ಮುಮ್ಮಿಗಟ್ಟಿ ಮತ್ತು ನರೇಂದ್ರದಲ್ಲಿ ಕೈಗಾರಿಕೋದ್ಯಮಿಗಳ ಮತ್ತು ಕಾರ್ಮಿಕರ ವಸತಿ ಪ್ರದೇಶದ ಭೂಮಿಯನ್ನು ಅನ್ಯ ಉದ್ದೇಶಕ್ಕೆ ನೀಡಿರುವ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ‘ವಸತಿ ಸೌಕರ್ಯಕ್ಕೆ ಅಗತ್ಯವಿರುವಷ್ಟು ಜಾಗ ಬಿಡಲಾಗಿದೆ. ಉಳಿದ ಜಾಗವನ್ನು ಮಾತ್ರ ಬೇರೆ ಉದ್ದೇಶಕ್ಕೆ ನೀಡಲಾಗಿದೆ. ಕೆಲವೆಡೆ ವಸತಿ ಸಂಕೀರ್ಣ ನಿರ್ಮಿಸಿದರೂ ಖರೀದಿಸುವವರು ಇಲ್ಲವಾಗಿದೆ. ಎಲ್ಲವೂ ನಿಯಮದ ಪ್ರಕಾರವೇ ನಡೆದಿದೆ’ ಎಂದರು.

‘ಎಫ್‌ಎಂಸಿಜಿ (ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳು) ಕ್ಲಸ್ಟರ್ ನಿರ್ಮಿಸುವುದಕ್ಕೆ ಸಂಬಂಧಿಸಿದ ಕಡತ ಹಣಕಾಸು ಇಲಾಖೆಯಲ್ಲಿದೆ. ಕೆಲ ರಿಯಾಯಿತಿಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ಕೋರಿದ್ದಾರೆ. ಈ ಕುರಿತು, ಸಚಿವ ನಿರಾಣಿ ಗಮನಕ್ಕೆ ತಂದಿದ್ದೇನೆ. ಕ್ಲಸ್ಟರ್ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ಸಿಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT