ಸೋಮವಾರ, ಏಪ್ರಿಲ್ 19, 2021
33 °C

ಹುಬ್ಬಳ್ಳಿ: ಸಿದ್ಧಾರೂಢರ ರಥೋತ್ಸವ ಮಾ. 12ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಸಿದ್ಧಾರೂಢರ ಜಾತ್ರಾ ಮಹೋತ್ಸವದ ಅಂಗವಾಗಿ ಮಾ. 12ರಂದು ಸಂಜೆ 5.30ಕ್ಕೆ ರಥೋತ್ಸವ  ಸರಳವಾಗಿ ನಡೆಯಲಿದೆ. ‌ಕೋವಿಡ್-19 ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ರಥೋತ್ಸವ ನಡೆಯಲಿದ್ದು, ಭಕ್ತರು ಸಹಕರಿಸಬೇಕು ಎಂದು ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ದೇವೇಂದ್ರಪ್ಪ ಮಾಳಗಿ ಹೇಳಿದರು.

ಶಿವರಾತ್ರಿ ಉತ್ಸವದ ಕಾರ್ಯಕ್ರಮಗಳು ಈಗಾಗಲೇ ಪ್ರಾರಂಭಗೊಂಡಿದ್ದು, ಮಾ. 14ರಂದು ಮುಕ್ತಾಯಗೊಳ್ಳಲಿವೆ. 11ರಂದು ಶ್ರೀಗಳ ಪಲ್ಲಕ್ಕಿಯು ವಾದ್ಯಮೇಳದೊಂದಿಗೆ ರಾತ್ರಿ ಮಠಕ್ಕೆ ಬಂದ ನಂತರ ಅಹೋರಾತ್ರಿ ಜಾಗರಣೆ ಶುರುವಾಗಲಿದೆ.  ಭಕ್ತರು ಶಿವರಾತ್ರಿ ಜಾಗರಣೆಗೆ ಮಠಕ್ಕೆ ಬರದೆ, ತಮ್ಮ‌ ಊರುಗಳಲ್ಲಿರುವ ಮಠ- ಮಂದಿರಗಳಲ್ಲಿ ಭಜನೆ ಸೇವೆ ಮಾಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾ. 11ರವರೆಗೆ ನಿತ್ಯ ರಾತ್ರಿ 8 ಗಂಟೆಗೆ ರಾಜ್ಯ ಹಾಗೂ ಹೊರರಾಜ್ಯಗಳ ಪ್ರಸಿದ್ಧ ಸಂಗೀತಗಾರರಿಂದ ಸಂಗೀತೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 14ರಂದು ಕೌದಿ ಪೂಜೆ ನೆರವೇರಿಸಿದ ನಂತರ ಉತ್ಸವ ಸಮಾಪ್ತಿಗೊಳ್ಳುವುದು ಎಂದರು.

ಉತ್ಸವ ನಿಮಿತ್ತ ಮಠದಲ್ಲಿ ನಡೆಯುವ ದಾಸೋಹಕ್ಕೆ ಕಾಯಿಪಲ್ಲೆಯನ್ನು ಎಪಿಎಂಸಿ ವರ್ತಕರು ದೇಣಿಗೆಯಾಗಿ ನೀಡಲಿದ್ದಾರೆ. ಮಠದಲ್ಲಿ ಎಂದಿನಂತೆ ದಾಸೋಹ ನಡೆಯಲಿದ್ದು, 11ರ ಶಿವಯೋಗದ ದಿನದಂದು ನಗರದ ವೀರಭದ್ರೇಶ್ವರ ಭಕ್ತ ಮಂಡಳಿಯು ಭಕ್ತರಿಗೆ ಉಪಾಹಾರ ವ್ಯವಸ್ಥೆ ಮಾಡಲಿದೆ. ಉಳಿದಂತೆ ಮಠದ ಆವರಣದಲ್ಲಿ  ಪ್ರಸಾದ ಸೇವೆ ಒದಗಿಸುವವರು ಕಡ್ಡಾಯವಾಗಿ ಆಹಾರ ಇಲಾಖೆಯಿಂದ ಪ್ರಸಾದವನ್ನು ಪರೀಕ್ಷೆ ಮಾಡಿಸಿ ವಿತರಿಸಬೇಕು ಎಂದು ಸೂಚಿಸಲಾಗಿದೆ. ಪೊಲೀಸ್ ಬಂದೋಬಸ್ತ್ ಹಾಗೂ ತುರ್ತು ವೈದ್ಯಕೀಯ ಚಿಕಿತ್ಸಾ ಕೇಂದ್ರ ತೆರೆಯುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಮಾಸ್ಕ್ ಕಡ್ಡಾಯ, ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ: ರಥೋತ್ಸವಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸೂಕ್ತ ಅಂತರ ಕಾಯ್ದುಕೊಳ್ಳಬೇಕು. ಮಾ. 10ರಿಂದ 14ರವರೆಗೆ ಮಠ ಪ್ರವೇಶಿಸುವ ಭಕ್ತರಿಗೆ 18 ಮಂದಿಯನ್ನೊಳಗೊಂಡ ತಂಡ ಎಂಟು ಕಡೆ ಸ್ಯಾನಿಟೈಸರ್ ಸಿಂಪಡಿಸಿ, ಥರ್ಮಲ್ ಸ್ಕ್ಯಾನಿಂಗ್ ಮಾಡಲಿದೆ. ಈ ವೇಳೆ, ಯಾರಿಗಾದರೂ ಹೆಚ್ಚಿನ ತಾಪಮಾನ ಕಂಡುಬಂದರೆ ಅವರಿಗೆ ಪ್ರವೇಶ ನಿಷೇಧಿಸಿ, ಸ್ಥಳೀಯ ಆಸ್ಪತ್ರೆಗೆ ಹೋಗುವಂತೆ ಸೂಚಿಸಲಾಗುವುದು ಎಂದರು.

ಭಕ್ತರು ತೇರಿಗೆ ದೊಡ್ಡ ಹಾರ ಹಾಗೂ ಬಾಳೆ ಗೊನೆ ತಂದು ಅಲಂಕಾರ ಮಾಡುವುದರಿಂದ, ತೇರಿನ‌ ಮೇಲೆ ಹೆಚ್ಚಿನ ಭಾರ ಬೀಳಲಿದೆ. ಹಾಗಾಗಿ, ತೇರಿಗೆ ಹಾಕಲು ತರುವ ಬದಲು ಪೂಜ್ಯರ ಸಮಾಧಿಗೆ ಅಲಂಕಾರ ಮಾಡಲು ತಂದು ಕೊಡಬೇಕು ಎಂದು ಮನವಿ ಮಾಡಿದರು.

ಮಠದ ಕಮಿಟಿ ಉಪಾಧ್ಯಕ್ಷ ಜಗದೀಶ ಮಗಜಿಕೊಂಡಿ, ಗೌರವ ಕಾರ್ಯದರ್ಶಿ ಸಿದ್ರಾಮಪ್ಪ ಕೋಳಕೂರ, ಧರ್ಮದರ್ಶಿಗಳಾದ ಶಾಮಾನಂದ ಪೂಜೇರಿ, ಗಣಪತಿ ನಾಯಕ ಹಾಗೂ ಡಾ. ಗೋವಿಂದ ಮಣ್ಣೂರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು