ಮಂಗಳವಾರ, ಮಾರ್ಚ್ 31, 2020
19 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ

ಸ್ಕೈವಾಕ್‌ ಬಳಕೆಗಿಲ್ಲ ಆಸಕ್ತಿ, ನಿರ್ವಹಣೆಯತ್ತ ನಿರಾಸಕ್ತಿ

ಗೋವರ್ಧನ್‌ ಎಸ್‌.ಎನ್‌. Updated:

ಅಕ್ಷರ ಗಾತ್ರ : | |

Prajavani

‘ಅಲ್ಲೊಂದು ಸ್ಕೈವಾಕ್‌ ಇದೆಯಲ್ಲಾ? ಅದರ ಮೂಲಕವೇ ಮತ್ತೊಂದು ಬದಿಗೆ ಹೋಗಬಹುದಲ್ಲಾ? ರಸ್ತೆಗಿಳಿದು ಅಪಾಯವನ್ನೇಕೆ ತಂದುಕೊಳ್ತೀರಿ ಎಂದು ಪ್ರಶ್ನಿಸಿದರೆ, ಹಲ್ಕಿರಿಯುವುದೇ ಉತ್ತರ. ಇನ್ನು ಕೆಲವರು ‘ಹೋ ಸ್ಕೈವಾಕ್‌ ಇದೆಯಲ್ಲಾ... ಇರಲಿ’ ಎಂದು ರಸ್ತೆಯಲ್ಲೇ ಮುನ್ನುಗ್ಗುತ್ತಾರೆ. ಮತ್ತಷ್ಟು ಜನ ದೂರುಗಳ ಮಳೆ ಸುರಿಸಿ ತೆರಳುತ್ತಾರೆ.

ಹುಬ್ಬಳ್ಳಿಯಿಂದ ಧಾರವಾಡಕ್ಕೆ ತೆರಳುವ ‘ಚಿಗರಿ’ ಸಾರಿಗೆಯ ಕೆಲ ನಿಲ್ದಾಣದಿಂದ ರಸ್ತೆಗೆ ಬದಿಗೆ ತೆರಳಲು ನಿರ್ಮಿಸಲಾಗಿರುವ ಸ್ಕೈವಾಕ್‌ ಬಳಕೆ ಬಗ್ಗೆ ಕೇಳಿದಾಗ ಜನರಿಂದ ಬರುವ ಪ್ರತಿಕ್ರಿಯೆಗಳು ಹೀಗಿರುತ್ತವೆ.

ಹುಬ್ಬಳ್ಳಿಯಿಂದ ಆರಂಭಗೊಂಡು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ, ಪ್ರೇರಣಾ ಕಾಲೇಜು, ನವನಗರ, ಉಣಕಲ್ ಕೆರೆ, ರಾಯಾಪುರ ಹಾಗೂ ಎಸ್‍ಡಿಎಂ ಮೆಡಿಕಲ್ ಕಾಲೇಜು ಬಳಿ ಸ್ಕೈವಾಕ್‌ಗಳನ್ನು ನಿರ್ಮಿಸಲಾಗಿದೆ. ಕೆಲವೆಡೆ ಜನರು ಅನಿವಾರ್ಯವಾಗಿ ಇವುಗಳನ್ನು ಬಳಸುತ್ತಿದ್ದರೆ, ಮತ್ತೆ ಕೆಲವೆಡೆ ಇವುಗಳನ್ನು ಲೆಕ್ಕಿಸದೆ, ವಾಹನದಟ್ಟಣೆ ನಡುವೆಯೂ ರಸ್ತೆ ದಾಟುವ ಪರಿಪಾಠ ಮುಂದುವರಿಯುತ್ತಿದೆ.

ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದ ಸ್ಕೈವಾಕ್‌ ನಿರ್ಜೀವವಾದಂತಿದೆ. ಸ್ಕೈವಾಕ್‌ ಕೆಳಗೆ ರಸ್ತೆ ದಾಟಲು ವ್ಯವಸ್ಥೆ ಇರುವುದರಿಂದ ಜನರು ಆ ಮೂಲಕವೇ ಸಾಗುತ್ತಾರೆ. ಸ್ಕೈವಾಕ್‌ನತ್ತ ಯಾರೂ ಕಿರುಗಣ್ಣನ್ನೂ ಹಾಯಿಸುತ್ತಿಲ್ಲ. ಪ್ರೇರಣಾ ಕಾಲೇಜು ಬಳಿಯ ಸ್ಕೈವಾಕ್‌ನಲ್ಲಿ ಲಿಫ್ಟ್ ಹಾಳಾಗಿದೆ. ಆದರೂ ಅನ್ಯ ಮಾರ್ಗವಿಲ್ಲದೆ ವಿದ್ಯಾರ್ಥಿಗಳು, ಜನರು ಸ್ಕೈವಾಕ್‌ ಬಳಸುತ್ತಿದ್ದಾರೆ. ಉಣಕಲ್ ಕೆರೆ ಬಳಿಯೂ ಸ್ಕೈವಾಕ್‌ ಬಳಕೆ ಅಷ್ಟಕಷ್ಟೆ. ನಿಲ್ದಾಣದ ಮುಂದೆ ರಸ್ತೆ ದಾಟಲು ವಿಸ್ತಾರ ಜಾಗವಿದೆ. ಇಲ್ಲಿನ ತಿರುವಿನಿಂದ ವಾಹನಗಳು ಅತಿವೇಗವಾಗಿ ಸಾಗುತ್ತಿದ್ದರೂ, ಜನ ಮಾತ್ರ ಕಾದು ರಸ್ತೆ ದಾಟುತ್ತಾರೆ. ಈ ನಿಲ್ದಾಣದಿಂದ ಸ್ಕೈವಾಕ್‌ ಒಂದು ಬದಿ ಸಂಪರ್ಕಿಸುವ ಮಾರ್ಗವೂ ಬಂದ್ ಆಗಿದೆ.

ರಾಯಾಪುರದ ಬಳಿ ಇರುವ ಸ್ಕೈವಾಕ್‌ಗಳನ್ನು ಬಳಸುವ ಮಂದಿ ಬೆರಳೆಣಿಕೆಯಷ್ಟು. ರಸ್ತೆ ದಾಟಲೆಂದೇ ಇಲ್ಲಿ ಪ್ರತ್ಯೇಕ ಹಾದಿ ಇದೆ. ವೇಗವಾಗಿ ನುಗ್ಗಿಬರುವ ವಾಹನಗಳನ್ನೂ ಲೆಕ್ಕಿಸದೆ, ಜನರು ರಸ್ತೆ ದಾಟುತ್ತಾರೆ. ಖಾಸಗಿ ಬಸ್ಸುಗಳಿಗೆ ಇದು ತಾತ್ಕಾಲಿಕ ನಿಲ್ದಾಣವೂ ಆಗಿದೆ. ಇಲ್ಲಿಯೂ ಲಿಫ್ಟ್ ಕೆಟ್ಟುಹೋಗಿದೆ.

ಇತರೆ ಸ್ಕೈವಾಕ್‌ಗಳಿಗಿಂತ ನವನಗರದ ಬಳಿಯ ಸ್ಕೈವಾಕ್‌ ಬಳಸುವವರ ಸಂಖ್ಯೆ ಹೆಚ್ಚು. ಲಿಫ್ಟ್ ಸಂಪರ್ಕ ಉತ್ತಮವಾಗಿದೆ. ಆದರೂ ರಸ್ತೆ ದಾಟುವ ಜನರ ಸಂಖ್ಯೆಯೂ ಕಡಿಮೆ ಇಲ್ಲ. ಎಸ್‍ಡಿಎಂ ವೈದ್ಯಕೀಯ ಕಾಲೇಜು ಬಳಿ ಲಿಫ್ಟ್ ಉತ್ತಮವಾಗಿದೆ. ನಿಲ್ದಾಣದ ಮುಂದಿನ ರಸ್ತೆಯನ್ನು ಬಳಸುವವರೇ ಬಹುಪಾಲು. ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಇರುವುದರಿಂದ ಜನರ ನಿರಾತಂಕವಾಗಿ ರಸ್ತೆ ದಾಟುತ್ತಾರೆ.

‘ಸುತ್ತರಿದು ಹೋಗೋರ‍್ಯಾರು?’

ಹುಬ್ಬಳ್ಳಿ-ಧಾರವಾಡದ ಚತುಷ್ಪಥದಲ್ಲಿ ಬಿಆರ್‍ಟಿಎಸ್‍ಗಾಗಿಯೇ ಪ್ರತ್ಯೇಕ ಮಾರ್ಗ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ವಾಹನಗಳು ಅತ್ಯಂತ ವೇಗವಾಗಿ ಸಾಗುತ್ತಿರುತ್ತವೆ. ನಾಲ್ಕು ರಸ್ತೆಯ ಮೇಲೆ ಸೇತುವೆಗಳನ್ನು ನಿರ್ಮಿಸಲಾಗಿದೆ. ಅಷ್ಟು ಮೇಲಕ್ಕೆ ಹತ್ತಿ, ಸುತ್ತುವರಿದು ಮತ್ತೊಂದು ಬದಿಗೆ ತೆರಳುವುದು ದುಸ್ತರ ಎಂಬುದು ಪಾದಚಾರಿಗಳ ಮಾತು.

‘ಮೂರ್ನಾಲ್ಕು ತಿರುವುಗಳಲ್ಲಿ ಸುತ್ತಿ, ಬಳಿಕ ಮತ್ತೊಂದು ಬದಿಗೆ ಹೋಗಲು ಸಮಯ ಬೇಕು. ಅದರ ಅರ್ಧಕ್ಕಿಂತಲೂ ಕಡಿಮೆ ಸಮಯದಲ್ಲಿ ರಸ್ತೆ ದಾಟಬಹುದು. ವಾಹನಗಳು ಸಾಗುವಾಗ ಕೊಂಚ ಕಾದರೆ ಸಾಕು. ನಿರಾಯಾಸವಾಗಿ ಮತ್ತೊಂದು ಬದಿ ಸೇರುತ್ತೇವೆ’ ರಾಯಾಪುರದ ಬಳಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ತಿಳಿಸಿದರು.

‘ರಾಯಾಪುರ ಒಳಗೊಂಡು ಇತರೆಡೆ ಲಿಫ್ಟ್ ಇದ್ದರೂ, ಹಾಳಾಗಿವೆ. ನವನಗರ, ಎಸ್‍ಡಿಎಂ ಮೆಡಿಕಲ್ ಕಾಲೇಜು ಬಳಿ ಮಾತ್ರ ಚಾಲ್ತಿಯಲ್ಲಿವೆ. ವಯಸ್ಸಾದವರು, ಮಕ್ಕಳು ಹೇಗೆ ತಾನೆ ಸ್ಕೈವಾಕ್‌ ಹತ್ತುತ್ತಾರೆ. ಅವರಿಗೆ ಹತ್ತಲಾಗುವುದಿಲ್ಲ. ನಮಗೆ ಸಮಯವಿಲ್ಲ. ಹೀಗಾಗಿ ಸ್ಕೈವಾಕ್‌ ಬಳಸುವರ ಸಂಖ್ಯೆ ತೀರಾ ವಿರಳ’ ಎಂದು ಹೇಳಿದರು.

‘ಸ್ಕೈವಾಕ್‌ಯನ್ನು ಬಳಸಲೇಬೇಕೆಂಬ ನಿಯಮವೇನೂ ಇಲ್ಲ. ನಮ್ಮ ಸುರಕ್ಷತೆಗಾಗಿ ಅವುಗಳನ್ನು ನಿರ್ಮಿಸಲಾಗಿದೆ ಎಂಬುದನ್ನು ಒಪ್ಪುತ್ತೇವೆ. ಆದರೆ ರಸ್ತೆ ದಾಟಲು ಎರಡು ಆಯ್ಕೆಗಳೂ ಇವೆ. ಸ್ಕೈವಾಕ್‌ ಅಲ್ಲದೆ, ಇರುವ ಚಿಕ್ಕ ಜಾಗದಲ್ಲೇ, ವಾಹನ ಸಂಚಾರದತ್ತ ಗಮನಹರಿಸಿಯೇ ಮತ್ತೊಂದು ಬದಿ ಸೇರುತ್ತೇವೆ. ಲಿಫ್ಟ್ ಸರಿಪಡಿಸಿದರೆ ಸ್ಕೈವಾಕ್‌ ಬಳಸುವವರ ಸಂಖ್ಯೆಯೂ ಹೆಚ್ಚುತ್ತದೆ’ ಎಂದರು.

‘ನಿಜವಾಗಿ ಅಗತ್ಯವಿರುವೆಡೆ ಸ್ಕೈವಾಕ್‌ಗಳನ್ನು ನಿರ್ಮಿಸಿದರೆ ಜನರು ಸಹಜವಾಗಿ ಬಳಸುತ್ತಾರೆ. ಆಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಕ್ಕೂ ಪ್ರಯೋಜವಾಗುತ್ತದೆ. ಇಲ್ಲವಾದರೆ ಅಷ್ಟೊಂದು ಹಣ ನೀರಿನಲ್ಲಿ ಹೋಮ ಮಾಡಿದಂತೆಯೇ ಆಗುತ್ತದೆ’ ಎಂದೂ ಸಲಹೆ ನೀಡಿದರು.

3 ಹೆಚ್ಚುವರಿ ಸ್ಕೈವಾಕ್

‘ಈಗಿರುವ 6 ಸ್ಕೈವಾಕ್‌ಗಳ ಜತೆಗೆ ಹೆಚ್ಚುವರಿಯಾಗಿ 3 ಸ್ಕೈವಾಕ್‌ ನಿರ್ಮಿಸಲಾಗುತ್ತದೆ. ಬಿಬಿಪಿ, ಈಶ್ವರನಗರ ಹಾಗೂ ಧಾರವಾಡದ ಜಿಎಸ್‍ಎಸ್ ಕಾಲೇಜಿನ ಬಳಿ ₹3 ಕೋಟಿ ವೆಚ್ಚದಲ್ಲಿ ಸ್ಕೈವಾಕ್‌ ಒಳಗೊಂಡ ನಿಲ್ದಾಣ ವ್ಯವಸ್ಥೆ ನಿರ್ಮಿಸಲಾಗುತ್ತದೆ’ ಎಂದು ಬಿಆರ್‌ಟಿಎಸ್‌ನ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ ಕೇರಿ ತಿಳಿಸಿದರು.

‘ಈಗಿರುವ ಸ್ಕೈವಾಕ್‌ಗಳನ್ನು ಹೆಚ್ಚು ಜನರು ಬಳಸುವಂತೆ ನೋಡಿಕೊಳ್ಳಲಾಗುವುದು. ಇನ್ನೊಂದು ತಿಂಗಳೊಳಗೆ ಲಿಫ್ಟ್‌ಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುತ್ತದೆ’ ಎಂದು ಹೇಳಿದರು.

ಸ್ಕೈವಾಕ್‌ ಮರೆತ ಯುವಕ ರಸ್ತೆ ಮಧ್ಯೆ ಬಿದ್ದ

ಸ್ಕೈವಾಕ್‌ ಬಳಕೆ ಕುರಿತು ರಿಯಾಲಿಟಿ ಚೆಕ್ ನಡೆಸುತ್ತಿರುವಾಗಲೇ ನವನಗರದ ಬಳಿ ರಸ್ತೆ ದಾಟುತ್ತಿದ್ದ ಯುವಕನೊಬ್ಬ ಆಯತಪ್ಪಿ ನೆಲಕ್ಕುರುಳಿದ ಘಟನೆ ನಡೆಯಿತು. ನವನಗರದ ಸ್ಕೈವಾಕ್‌ ಲಿಫ್ಟ್ ಸಕ್ರಿಯವಾಗಿದೆ. ಅಲ್ಲದೆ, ರಸ್ತೆ ದಾಟಲು ಅನ್ಯ ಮಾರ್ಗವೂ ಇಲ್ಲ. ಹೀಗಿದ್ದೂ ಬಹುತೇಕರು ರಸ್ತೆ ವಿಭಜಿಸುವ ಕಬ್ಬಿಣದ ಸರಳುಗಳನ್ನು ಹತ್ತಿ, ಅಲ್ಲಿಂದ ಜಿಗಿದು ಮುಂದೆ ಸಾಗುತ್ತಾರೆ. ಅದೇ ರೀತಿ ಮೊಬೈಲ್‍ನಲ್ಲಿ ಮಾತನಾಡುತ್ತಾ, ಕಬ್ಬಿಣದ ಸರಳುಗಳಿಂದ ಜಿಗಿಯುತ್ತಿರುವಾಗ ಯುವಕ ರಸ್ತೆಮೇಲೆ ಬಿದ್ದ. ಮೊಬೈಲ್ ಒಂದಷ್ಟು ದೂರ ಎಗರಿ ಬಿದ್ದಿತು. ಆ ಸಮಯಕ್ಕೆ ವಾಹನಗಳು ಕೊಂಚ ದೂರ ಇದ್ದದ್ದರಿಂದ ಅಪಾಯ ತಪ್ಪಿತು. ಬಿದ್ದವನು ತಕ್ಷಣ ಮೇಲೆದ್ದು, ಸಾವರಿಸಿಕೊಂಡು ರಸ್ತೆ ದಾಟಿದ. ಯುವಕ ಬಿದ್ದ ಸಮಯದಲ್ಲಿ ವಾಹನ ದಟ್ಟಣೆ ಇದ್ದಿದ್ದರೆ ಅನಾಹುತ ಕಟ್ಟಿಟ್ಟಬುತ್ತಿ ಎಂಬಂತಿತ್ತು ಅಲ್ಲಿನ ಪರಿಸ್ಥಿತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು