ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಹುಮ್ಮಸ್ಸಿಗೆ ಪದಕದ ಬಲ...

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 11 ಡಿಸೆಂಬರ್ 2019, 2:44 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳ ಕ್ರೀಡಾ ಭವಿಷ್ಯಕ್ಕೆ ದಿಕ್ಸೂಚಿ ಬರೆಯುವ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜುಗಳ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಧಾರವಾಡದ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಮೊದಲ ದಿನವೇ ದಾಖಲೆ ನಿರ್ಮಾಣವಾದವು.

ಈ ಕ್ರೀಡಾಕೂಟದಲ್ಲಿ ಉತ್ತಮ ಸಾಮರ್ಥ್ಯ ತೋರಿದ ಅಥ್ಲೀಟ್‌ಗಳಿಗೆ ಅಂತರ ವಾರ್ಸಿಟಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸುತ್ತದೆ. ಅಖಿಲ ಭಾರತ ಮಟ್ಟದಲ್ಲಿ ಗಮನ ಸೆಳೆಯಲು ವೇದಿಕೆ ಕೂಡ ಸಿಗುತ್ತದೆ. ಆದ್ದರಿಂದ ಅಥ್ಲೀಟ್‌ಗಳು ಪದಕಗಳನ್ನು ಗೆಲ್ಲಲು ಭಾರಿ ಉತ್ಸಾಹ ತೋರಿದರು. ಇದರಿಂದ ಸ್ಪರ್ಧೆಯೂ ಕಠಿಣವಾಗಿತ್ತು.

ಮೊದಲ ದಿನವಾದ ಸೋಮವಾರ ಪುರುಷರ 10,000 ಮೀಟರ್‌ ಓಟದ ಸ್ಪರ್ಧೆಯಲ್ಲಿ ಧಾರವಾಡದ ಜೆಎಸ್‌ಎಸ್ ಬನಶಂಕರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ನವೀನ ಪಾಟೀಲ 32 ನಿಮಿಷ 33.60 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ಇದೇ ವಿಭಾಗದಲ್ಲಿ ಅಳ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪೀಶಪ್ಪ ದೊಡ್ಡಗೌಡ ಬೆಳ್ಳಿ ಮತ್ತು ಧಾರವಾಡದ ಜೆಎಸ್‌ಎಸ್ ಬನಶಂಕರಿ ಕಾಲೇಜಿನ ಚೇತನ ಕಂಚು ಗೆದ್ದರು.

ಪುರುಷರ 200 ಮೀಟರ್‌ ಓಟದ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಎಸ್‌.ಕೆ. ಕಲಾ ಮತ್ತು ಎಚ್‌ಎಸ್‌ಕೆ ಕಲಾ ಇನ್‌ಸ್ಟಿಟ್ಯೂಟ್‌ನ ಎಸ್‌. ವಿನಾಯಕ (21.78ಸೆ.) ಚಿನ್ನ ಗೆಲ್ಲುವ ಮೂಲಕ ಎರಡು ವರ್ಷಗಳ ಹಿಂದಿನ ದಾಖಲೆ ಮುರಿದರು. ಜೆಎಸ್‌ಎಸ್‌ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್‌ನ ಕೌಶಿಕ್‌ ಬೆಳ್ಳಿ ಮತ್ತು ಹುಬ್ಬಳ್ಳಿಯ ಕೆಎಸ್‌ಎಸ್‌ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕಾರ್ತಿಕ ಪಿ. ಹೊಸಮನಿ ಕಂಚು ಗೆದ್ದರು.

ಪುರುಷರ ಹೈಜಂಪ್‌ನಲ್ಲಿ ಹೊನ್ನಾವರದ ಎಂಪಿಇ ಎಸ್‌ಡಿಎಂ ಕಾಲೇಜಿನ ನಾಗರಾಜ ಗೌಡ (1.90 ಮೀಟರ್‌) ಚಿನ್ನ ಜಯಿಸಿದರು. ಈ ಮೂಲಕ ಎರಡು ವರ್ಷಗಳ ಹಿಂದಿನ ತಮ್ಮದೇ ದಾಖಲೆ (1.89 ಮೀಟರ್‌) ಉತ್ತಮಪಡಿಸಿಕೊಂಡರು.

ಈ ವಿಭಾಗದ ಬೆಳ್ಳಿ ಜೆಎಸ್‌ಎಸ್‌ ಮಂಜುನಾಥೇಶ್ವರ ಕಾಲೇಜಿನ ಡೆನ್ನಿಸ್‌ ಕರ್ಮಾಕರ್‌ ಪಾಲಾದರೆ, ಕಂಚಿನ ಪದಕಕ್ಕೆ ಹೊನ್ನಾವರದ ಎಸ್‌ಡಿಎಂ ಕಾಲೇಜಿನ ಸಂದೀಪ ಭಟ್‌ ಕೊರಳೊಡ್ಡಿದರು.

ಜಾವಲಿನ್‌ ಎಸೆತದಲ್ಲಿ ಧಾರವಾಡದ ಜೆಎಸ್‌ಎಸ್‌ ಮಂಜುನಾಥೇಶ್ವರ ಕಾಲೇಜಿನ ಶಾರೂಖ್‌
ತಾರಿಹಾಳ 61.02 ಮೀಟರ್ ದೂರ ಎಸೆದು ಚಿನ್ನದ ಒಡೆಯರಾದರು.

ಮಹಿಳಾ ವಿಭಾಗದ 10,000 ಮೀಟರ್‌ ಓಟದಲ್ಲಿ ಗದಗಿನ ಕೆಎಲ್‌ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕೆ. ಮೇಘನಾ (ಕಾಲ: 45:25.88ಸೆ.), 100 ಮೀಟರ್‌ ಹರ್ಡಲ್ಸ್‌ನಲ್ಲಿ ಭಟ್ಕಳದ ಶ್ರೀಗುರು ಸುಧೀಂದ್ರ ಕಾಲೇಜಿನ ಚಂದ್ರಿಕಾ ಎಸ್‌. ಮೊಘೇರ (18.45ಸೆ.), 200 ಮೀಟರ್‌ ಓಟದಲ್ಲಿ ಧಾರವಾಡದ ಜೆಎಸ್‌ಎಸ್‌ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್‌ನ ಎಂ. ಮೇಘಾ (ಕಾಲ: 26.37), 800 ಮೀಟರ್‌ ಓಟದಲ್ಲಿ ಧಾರವಾಡದ ಕರ್ನಾಟಕ ವಿಜ್ಞಾನ ಕಾಲೇಜಿನ ಪಲ್ಲವಿ ಅಪ್ಪಿನಬೈಲ್‌ (2:41.64ಸೆ.), ಜಾವಲಿನ್‌ ಎಸೆತದಲ್ಲಿ ಕುಮಟಾದ ಎ.ವಿ. ಬಾಳಿಗಾ ಕಾಲೇಜಿನ ವಿ. ಭಂಡಾರಿ ವೈಭವಿ (29.25 ಮೀ.) ಚಿನ್ನದ ಪದಕಗಳನ್ನು ಬಾಚಿಕೊಂಡರು.

ಲಾಂಗ್‌ಜಂಪ್‌ನಲ್ಲಿ ಕಲಘಟಗಿಯ ಜಿಎನ್‌ಡಬ್ಲ್ಯುಎಸ್‌ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅಕ್ಷತಾ ದೊಡ್ಡಮನಿ 4.93 ಮೀಟರ್‌ ಜಿಗಿದು ಸ್ವರ್ಣ ಸಾಧನೆ ಮಾಡಿದರೆ, ಶಾಟ್‌ಪಟ್‌ನಲ್ಲಿ ವೈಭವಿ ಭಂಡಾರಿ 9.60 ಮೀಟರ್‌ ಎಸೆದು ಚಿನ್ನ ತಮ್ಮದಾಗಿಸಿಕೊಂಡರು. ಹೀಗೆ ಅನೇಕ ಅಥ್ಲೀಟ್‌ಗಳು ಪದಕಗಳನ್ನು ಜಯಿಸುವ ಸಲುವಾಗಿ ಸಾಕಷ್ಟು ಪೈಪೋಟಿ ನಡೆಸಿದರು. ಇನ್ನು ಒಂದು ದಿನ ಸ್ಪರ್ಧೆ ಬಾಕಿ ಉಳಿದಿದ್ದು, ಮತ್ತಷ್ಟು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT