ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಭಯದಲ್ಲಿದ್ದ ಬಾಲಕಿಯನ್ನು ಕರೆತಂದ ಸಿಬ್ಬಂದಿ

Last Updated 27 ಜೂನ್ 2020, 12:46 IST
ಅಕ್ಷರ ಗಾತ್ರ

ಧಾರವಾಡ: ಕೊರೊನಾ ಭೀತಿಯಿಂದ ಮೊದಲ ಪತ್ರಿಕೆ ಬರೆಯದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ದೂರವಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸಿಬ್ಬಂದಿ, ಶನಿವಾರ ನಡೆದ ಗಣಿತ ಪರೀಕ್ಷೆ ಬರೆಯಲು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಳ್ನಾವರದ ಸರ್ವೋದಯ ಶಿಕ್ಷಣ ಟ್ರಸ್ಟ್‌ನ ಬಾಲಿಕಾ ಪ್ರೌಢಶಾಲೆಯ ಗೀತಾ ಕುಳೆ ಎಂಬ ವಿದ್ಯಾರ್ಥಿನಿ ಜೂನ್ 25ರಂದು ನಡೆದ ಪರೀಕ್ಷೆ ಬರೆದಿರಲಿಲ್ಲ. ಕೊರೊನಾ ಭಯದಿಂದ ಆಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲು ಆಕೆಯ ಪಾಲಕರು ನಿರಾಕರಿಸಿದ್ದರು ಎಂಬ ಮಾಹಿತಿ ಪಡೆದ ಸಿಬ್ಬಂದಿ, ಇವರ ಮನವೊಲಿಸಿ ಶನಿವಾರ ನಡೆದ ಗಣಿತ ಪರೀಕ್ಷೆಯನ್ನು ಬರೆಯಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಇಲಾಖೆಯ ಉಪನಿರ್ದೇಶಕ ಮೋಹನ ಹಂಚಾಟೆ, ‘ಕೊರೊನಾ ಸೋಂಕು ತಗುಲದಂತೆ ಮತ್ತು ಭೀತಿ ಕಾಡದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನೂ ಇಲಾಖೆ ತೆಗೆದುಕೊಂಡಿದೆ. ಹೀಗಿದ್ದರೂ ಈ ವಿದ್ಯಾರ್ಥಿನಿ ಪರೀಕ್ಷೆಯಿಂದ ದೂರ ಉಳಿದಿದ್ದು ಕಂಡುಬಂದಿದ್ದರಿಂದ, ಪೊಲೀಸರ ನೆರವಿನೊಂದಿಗೆ ಇಲಾಖೆ ಸಿಬ್ಬಂದಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್‌ ಮನೆಗೆ ತೆರಳಿ ಮನವೊಲಿಸುವ ಪ್ರಯತ್ನ ನಡೆಸಿದರು. ಮುಖಗವಸು ಹಾಗೂ ಸ್ಯಾನಿಟೈಸರ್ ಬಳಸಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿರುವುದನ್ನು ಆಕೆಯ ಪಾಲಕರ ಗಮನಕ್ಕೆ ತರಲಾಯಿತು’ ಎಂದು ತಿಳಿಸಿದರು.

‘ವಿದ್ಯಾರ್ಥಿನಿಯನ್ನು ಸರ್ಕಾರಿ ವಾಹನದಲ್ಲಿ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಕರೆತರಲಾಯಿತು. ಪ್ರತ್ಯೇಕ ಕೊಠಡಿಯಲ್ಲಿ ಒಬ್ಬಳೇ ಪರೀಕ್ಷೆ ಬರೆದ ಗೀತಾಳನ್ನು ಮತ್ತೆ ಕಾರಿನಲ್ಲಿ ಮನೆಗೆ ತಲುಪಿಸುವ ಮೂಲಕ ಆಕೆ ಮತ್ತು ಅವರ ಪಾಲಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಹಂಚಾಟೆ ತಿಳಿಸಿದರು.

ಜಿಲ್ಲೆಯಲ್ಲಿ ಶನಿವಾರ ನಡೆದ ಪರೀಕ್ಷೆಯಲ್ಲಿ ಒಟ್ಟು 1010 ವಿದ್ಯಾರ್ಥಿಗಳು ಗೈರಾಗಿದ್ದರು. ಕಂಟೇನ್ಮೆಂಟ್ ಪ್ರದೇಶದ 90 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಹಾಗೆಯೇ ಇತರೆ ಜಿಲ್ಲೆಯ 333 ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದರೆ, ಜಿಲ್ಲೆಯ 464 ವಿದ್ಯಾರ್ಥಿಗಳು ಇತರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT