ಕಲ್ಯಾಣ ನಗರದ ಐದನೇ ಅಡ್ಡರಸ್ತೆಯಲ್ಲಿರುವ ಮಠದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ 9.30 ರವರೆಗೆ ಸ್ವಾಮೀಜಿಯವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗೆ 11 ಗಂಟೆಗೆ ಕೇಶ್ವಾಪುರ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಆಶ್ರಮದ ಮೂಲಗಳು ತಿಳಿಸಿವೆ.
1988ರಲ್ಲಿ ತಮ್ಮ ಕಾಲೇಜು ದಿನಗಳಲ್ಲಿ ಬೆಂಗಳೂರಿನ ರಾಮಕೃಷ್ಣ ಮಠದ ಸಂಪರ್ಕಕ್ಕೆ ಬಂದ ಅವರು, ವಿವೇಕಾನಂದ ಯುವಕ ಸಂಘದ ಸದಸ್ಯರಾಗುವ ಮೂಲಕ ತಮ್ಮನ್ನು ಆಶ್ರಮದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
ಸ್ವಾಮಿ ಪುರುಷೋತ್ತಮಾನಂದಜಿ ಮಹಾರಾಜ್ ಅವರಿಂದ ಸ್ಫೂರ್ತಿಗೊಂಡು, ಅವರ ಮಾರ್ಗದರ್ಶನದಲ್ಲಿ 1992ರಲ್ಲಿ ಬೆಂಗಳೂರಿನಲ್ಲಿ ರಾಮಕೃಷ್ಣ ಸಂಕೀರ್ತನ ಸಭೆಯನ್ನು ಪ್ರಾರಂಭಿಸಿದರು. ಇದರ ಉದ್ದೇಶ ಭಜನೆ - ಸಂಕೀರ್ತನೆಗಳ ಮೂಲಕ ದಿವ್ಯತ್ರಯರ (ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದ, ಶಾರದಾಮಾತೆ) ಸಂದೇಶವನ್ನು ಮನೆ ಮನೆಗೂ ತಲುಪಿಸುವುದಾಗಿತ್ತು.
2000ರಲ್ಲಿ ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಬಂದು ಅಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದರು. ನಂತರ ಸ್ವಾಮಿ ಪುರುಷೋತ್ತಮಾನಂದಜಿಯವರ ಆದೇಶದಂತೆ ಹುಬ್ಬಳ್ಳಿಗೆ ಬಂದ ಅವರು, 2002ರ ಮೇ 13ರಂದು ರಾಮಕೃಷ್ಣ ವಿವೇಕಾನಂದ ಆಶ್ರಮವನ್ನು ಸ್ಥಾಪಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ದಿವ್ಯತ್ರಯರ ಸಂದೇಶ ಪ್ರಚಾರ ಮಾಡಲು ಶ್ರಮಿಸಿದ್ದ ಇವರ ಜೀವನದಿಂದ ಅನೇಕ ಯುವಕರು ಪ್ರಭಾವಿತರಾಗಿದ್ದಾರೆ.