ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ‘ಯುವನಿಧಿ’ ನೋಂದಣಿಗೆ ತಾಂತ್ರಿಕ ಅಡ್ಡಿ

Published : 4 ಸೆಪ್ಟೆಂಬರ್ 2024, 5:52 IST
Last Updated : 4 ಸೆಪ್ಟೆಂಬರ್ 2024, 5:52 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ರಾಷ್ಟ್ರೀಯ ಶೈಕ್ಷಣಿಕ ಠೇವಣಿ (ಎನ್‌ಎಡಿ) ಪೋರ್ಟಲ್‌ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿ ಭರ್ತಿ ಮಾಡದ ಕಾರಣ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು ಹೊರಹೋದ ವಿದ್ಯಾರ್ಥಿಗಳು ‘ಯುವನಿಧಿ’ಯಿಂದ ವಂಚಿತರಾಗಿದ್ದಾರೆ.

‘ಯುವನಿಧಿ’ ಯೋಜನೆಯನ್ವಯ 2022–23ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಮುಗಿಸಿದ ವಿದ್ಯಾರ್ಥಿಗಳು 6 ತಿಂಗಳಾದರೂ ಕೆಲಸ ಸಿಗದಿದ್ದವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು. ಜತೆಗೆ ಅರ್ಜಿ ಸಲ್ಲಿಸುವವರ ಶೈಕ್ಷಣಿಕ ಮಾಹಿತಿಯನ್ನು ರಾಷ್ಟ್ರೀಯ ಶೈಕ್ಷಣಿಕ ಠೇವಣಿಯಲ್ಲಿ ಆಯಾ ವಿಶ್ವವಿದ್ಯಾಲಯಗಳು ದಾಖಲು ಮಾಡಿರಬೇಕು. ಆದರೆ, ತಾಂತ್ರಿಕ ದೋಷದಿಂದ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮಾಹಿತಿ ದಾಖಲಾಗಿಲ್ಲ.

ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯ ಸೇರಿ ಹಲವು ವಿಶ್ವವಿದ್ಯಾಲಯಗಳು ಈಗಾಗಲೇ ಎನ್‌ಎಡಿಯಲ್ಲಿ ಭರ್ತಿ ಮಾಡಿದ್ದು, ಅಲ್ಲಿಯ ವಿದ್ಯಾರ್ಥಿಗಳು 2 ತಿಂಗಳಿಂದ ‘ಯುವನಿಧಿ’ ಯೋಜನೆಯ ಲಾಭ ಪಡೆಯುತ್ತಿದ್ದಾರೆ.

‘ಪದವಿ ಪಡೆದು ವರ್ಷ ಮುಗಿಸಿದರೂ ನಮ್ಮ ಅಂಕಗಳ ಮಾಹಿತಿ ಎನ್‌ಎಡಿ ಪೋರ್ಟಲ್‌ನಲ್ಲಿ ದಾಖಲಿಸಿಲ್ಲ. ಇದರಿಂದ ‘ಯುವನಿಧಿ’ ಯೋಜನೆಯಡಿ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇವೆ. ಕುಲಸಚಿವರಿಗೆ ಲಿಖಿತ ಮನವಿಯನ್ನೂ ನೀಡಿದ್ದೇವೆ ಆದರೂ ಪ್ರಯೋಜನವಾಗಿಲ್ಲ. ತಾಂತ್ರಿಕ ದೋಷ ಎನ್ನುತ್ತಾರೆ. ತಿಂಗಳಿಗೆ ₹3 ಸಾವಿರ ಸಿಕ್ಕರೆ ಸಹಾಯವಾಗುತ್ತದೆ’ ಎಂದು ಕವಿವಿಯಿಂದ ಸ್ನಾತಕೋತ್ತರ ಪದವಿ ಪಡೆದು ತೇರ್ಗಡೆ ಹೊಂದಿದ ಆದೆಪ್ಪಾ ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

‘ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾದ ತಿಂಗಳು ಸೆಪ್ಟೆಂಬರ್‌ ಬದಲು ಆಗಸ್ಟ್ ಎಂದು ತಪ್ಪಾಗಿದೆ. ಯುಯುಸಿಎಂಎಸ್‌ ಪೊರ್ಟಲ್‌ನಲ್ಲಿ ಅದನ್ನು ಸರಿ ಮಾಡಿದ ತಕ್ಷಣ ಎನ್‌ಎಡಿಯಲ್ಲಿ ವಿದ್ಯಾರ್ಥಿಗಳ ಮಾಹಿತಿ ದಾಖಲಿಸಲಾಗುವುದು’ ಎಂದು ವಿ.ವಿಯ ನ್ಯಾಡ್ ನೋಡಲ್ ಅಧಿಕಾರಿ ರಾಜಶೇಖರ್ ತಿಳಿಸಿದರು.

‘ಕರ್ನಾಟಕ ವಿಶ್ವವಿದ್ಯಾಲಯದವರು ಪರೀಕ್ಷೆ ನಡೆದ ತಿಂಗಳನ್ನು ಭರ್ತಿ ಮಾಡುವಲ್ಲಿ ವ್ಯತ್ಯಾಸ ಮಾಡಿದ್ದರಿಂದ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳ ಪರೀಕ್ಷೆ ಬರೆದ ತಿಂಗಳು ಸ್ವಯಂಚಾಲಿತವಾಗಿ ದಾಖಲಾಗುವಂತೆ ತಂತ್ರಾಂಶವನ್ನು ನವೀಕರಿಸಲಾಗುತ್ತಿದ್ದು, ಶೀಘ್ರವೇ ಸರಿ ಮಾಡಲಾಗುವುದು’ ಎಂದು ಯುಯುಸಿಎಂಎಸ್‌ನ ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT