ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಯುಸಿಎಂಎಸ್: ಮುಗಿಯದ ಗೋಳು

ತಾಂತ್ರಿಕ ಸಮಸ್ಯೆ: ಮೂರು ಬಾರಿ ದಾಖಲಾತಿ ದಿನಾಂಕ‌ ಮುಂದೂಡಿದ ಕವಿವಿ
Last Updated 22 ಆಗಸ್ಟ್ 2022, 4:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ (ಯುಯುಸಿಎಂಎಸ್)‌ ವೆಬ್‌ಸೈಟ್‌ನ ತಾಂತ್ರಿಕ ಸಮಸ್ಯೆಯಿಂದಾಗಿ 2022-23ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ದಾಖಲಾತಿ ವಿಳಂಬವಾಗುತ್ತಿದ್ದು, ದಾಖಲಾತಿಗೆ ಕೊನೆಯ ದಿನಾಂಕ ಆ.16 ಎಂದು ಸೂಚಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಸೆ.1 ರವರೆಗೆ ವಿಸ್ತರಿಸಿ ಸುತ್ತೋಲೆ ಹೊರಡಿಸಿದೆ.ದಿನಾಂಕ ಮುಂದೂಡಿಕೆಯಾಗಿದ್ದು ಇದು ಮೂರನೇ ಬಾರಿ.

‘ಹೆಚ್ಚಿನ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿ ಸಮಸ್ಯೆ ಎದುರಾಯಿತು. ಸಮಸ್ಯೆ ಮುಂದುವರಿದರೆ ನಿಗದಿತ ದಿನಾಂಕದೊಳಗೆ ದಾಖಲಾತಿ ಆಗುವುದಿಲ್ಲ ಎಂದು ದಿನಾಂಕ ವಿಸ್ತರಿಸಿದ್ದೇವೆ’ ಎಂದು
ಕವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಯುಯುಸಿಎಂಎಸ್‌ನಲ್ಲಿ ದಾಖಲಾತಿ ಅರ್ಜಿ ಭರ್ತಿ ಮಾಡುವಾಗ ಎಚ್ಚರ ಅಗತ್ಯ. ವಿಷಯಗಳ ಆಯ್ಕೆ, ಶುಲ್ಕ ಪಾವತಿ ಯುಯುಸಿಎಂಎಸ್ ಮೂಲಕ ಮಾಡಬೇಕು. ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಇರುವುದು ನಿಜ. ಕಳೆದ ವರ್ಷಕ್ಕಿಂತ ಈ ಬಾರಿ ದಾಖಲಾತಿ ಪ್ರಮಾಣ ತೀರಾ ಕಡಿಮೆ ಆಗಿದೆ ಎಂದು ಉಪನ್ಯಾಸಕರೊಬ್ಬರು ತಿಳಿಸಿದರು.

ಉತ್ತಮ ಸಾಫ್ಟ್‌ವೇರ್: ಆರಂಭಿಕ ಹಂತದಲ್ಲಿ ಸಮಸ್ಯೆ ಸಹಜ. ಒಂದು ಬಾರಿ ವ್ಯವಸ್ಥೆ ಸರಿಯಾದರೆ ಯುಯುಸಿಎಂಎಸ್ ಅತ್ಯುತ್ತಮ ಸಾಫ್ಟ್‌ವೇರ್ ಆಗಿ ಕೆಲಸ ಮಾಡುತ್ತದೆ. ವಿಶ್ವವಿದ್ಯಾಲಯಕ್ಕೆ, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೂ ಬಳಕೆ ಆಗುತ್ತದೆ ಎನ್ನುತ್ತಾರೆ ಪ್ರೊ.ಸಿ.ಕೃಷ್ಣಮೂರ್ತಿ.

ನಡೆಯದ ಪ್ರಯೋಗ: ಇಲಾಖೆ ಸಾಫ್ಟ್‌ವೇರ್ ಪರಿಚಯಿಸಿದ್ದೇನೋ ನಿಜ. ಅದರ ಸಾಧಕ- ಬಾಧಕಗಳ ಕುರಿತು ಯಾವುದೇ ಪರಿಶೀಲನೆ ನಡೆಸದೆ ನೇರವಾಗಿ ಬಳಕೆಗೆ ಸೂಚಿಸಿದ್ದರಿಂದ ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಒಂದು ವಿಶ್ವವಿದ್ಯಾಲಯಕ್ಕೆ ಮೊದಲು ಪ್ರಯೋಗ ಮಾಡಿ, ನಂತರ ಎಲ್ಲ ವಿವಿಗಳಿಗೆ ಸೂಚಿಸಬಹುದಿತ್ತು ಎಂಬುದು ಉಪನ್ಯಾಕರೊಬ್ಬರ ನುಡಿ.

ಇಲಾಖೆ ಕೈಯಲ್ಲಿ ಜುಟ್ಟು: ಯುಯುಸಿಎಂಎಸ್ ಅನ್ನು ಉನ್ನತ ಶಿಕ್ಷಣ ಇಲಾಖೆ ನೇರವಾಗಿ ನಿರ್ವಹಣೆ ಮಾಡುವುದರಿಂದ ಅದರಲ್ಲಿ ಉಂಟಾಗುವ ಸಮಸ್ಯೆಗಳ ಮುಂದೆ ವಿಶ್ವವಿದ್ಯಾಲಯಗಳು ಅಸಹಾಯಕ ಆಗುತ್ತವೆ. ‘ಯುಯುಸಿಎಂಎಸ್ ನ ಸಮಸ್ಯೆಗಳಿಗೆ ನಾವೇನೂ ಮಾಡಲು ಆಗುವುದಿಲ್ಲ. ಸಮಸ್ಯೆಗಳ‌ ಮಾಹಿತಿಯನ್ನು ಪಟ್ಟಿ ಮಾಡಿ ಇಲಾಖೆಗೆ ಒದಗಿಸುತ್ತೇವೆ. ಇಲಾಖೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತದೆ. ಮುಂದಿನ ದಿನಗಳಲ್ಲಿ ನಿರ್ವಹಣೆಯ ಅವಕಾಶ ಆಯಾ ವಿವಿಗಳಿಗೆ ಸಿಗಬಹುದು’ ಎನ್ನುತ್ತಾರೆ ಕವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೃಷ್ಣಮೂರ್ತಿ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದಾಖಲಾತಿಗಾಗಿ ಸ್ಥಳೀಯ ಸೈಬರ್‌ಗಳ ಮೊರೆ ಹೋಗುತ್ತಿದ್ದು, ಸರ್ವರ್ ಸಮಸ್ಯೆಯಿಂದಾಗಿ ಹಲವು ಬಾರಿ ಅಲೆದಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT