ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲುಕ್ಯರ ಕೃತಿಭವಾನಿ ಶಂಕರ ದೇವಾಲಯ

Last Updated 9 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿಯ ಉಣಕಲ್ ಗ್ರಾಮದ ಚಂದ್ರಮೌಳೇಶ್ವರ ದೇವಾಲಯಕ್ಕೆ ಹನ್ನೆರಡನೇ ಶತಮಾನದಲ್ಲಿ ಚಾಲುಕ್ಯರು ನಿರ್ಮಿಸಿದ್ದಾರೆ ಎಂಬ ಇತಿಹಾಸವಿದೆ. ಸರಿಸುಮಾರು ಅದೇ ಕಾಲಮಾನದಲ್ಲಿ ಚಾಲುಕ್ಯರೇ ನಿರ್ಮಿಸಿದ ಇನ್ನೊಂದುದೇವಾಲಯವು ಹಳೇ ಹುಬ್ಬಳ್ಳಿಯ ಕಿಲ್ಲಾ ಓಣಿಯಲ್ಲಿದೆ.

ಕಿಲ್ಲಾದಲ್ಲಿರುವ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣವಾದ ಈ ಭವಾನಿ ಶಂಕರ ಶಂಕರ ದೇವಾಲಯವು 900 ವರ್ಷಗಳಿಗೂ ಹೆಚ್ಚು ಹಳೆಯದು. ಆರಂಭದಲ್ಲಿ ಇದನ್ನು ತ್ರೈಪುರುಷ ದೇವಾಲಯ ಎಂದು ಕರೆಯಲಾಗುತ್ತಿತ್ತು. ನಂತರ ಪೇಶ್ವಗಳ ಆಳ್ವಿಕೆಯ ಕಾಲದಲ್ಲಿ ಭವಾನಿ ಶಂಕರ ದೇವಾಲಯ ಎಂದು ಮರುನಾಮಕರಣಗೊಂಡಿತು.

ಸುತ್ತಲಿನವರ ನಿರ್ಲಕ್ಷ್ಯದ ಕಾರಣ ಕೆಲವೇ ಕೆಲವು ವರ್ಷಗಳ ಹಿಂದೆ ಈ ದೇವಾಲಯವು ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿತ್ತು. ದೇವಸ್ಥಾನದ ಕುರಿತು ಪತ್ರಿಕೆಗಳಲ್ಲಿ ಲೇಖನ ಪ್ರಕಟವಾದ ನಂತರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಆಸಕ್ತಿಯಿಂದಾಗಿ ದೇವಾಲಯದ ಪುನರುಜ್ಜೀವನ ಪ್ರಕ್ರಿಯೆ ಆರಂಭಗೊಂಡಿತು. ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ದೇವಾಲಯದ ನವೀಕರಣ ನಡೆಸಲಾಯಿತು. ಹೊರ ಆವರಣವನ್ನು ಪುರಾತತ್ವ ಇಲಾಖೆಯು ಪುನರ್ ನಿರ್ಮಾಣ ಮಾಡಿತು. ಸದ್ಯ ಶ್ರೀ ಭವಾನಿ ಶಂಕರ ಹಾಗೂ ‍ಶ್ರೀ ನಾರಾಯಣ ದೇವ ಟ್ರಸ್ಟ್ ಈ ದೇವಾಲಯದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ.

ಗರ್ಭಗುಡಿಯಲ್ಲಿರುವ ಈಶ್ವರ ಲಿಂಗದ ಹಿಂಭಾಗದಲ್ಲಿ ಭವಾನಿ–ಶಂಕರ ಮೂರ್ತಿಗಳಿರುವುದು ಇಲ್ಲಿನ ವಿಶೇಷ. ದೇವಾಲಯದ ಒಳ ಆವರಣ ವಿವಿಧ ಮೂರ್ತಿಗಳಿಂದ ತುಂಬಿಕೊಂಡಿದೆ. ಸಪ್ತ ಮಾತೃಕೆಯರು, ಗಣಪತಿ, ವಿಷ್ಣು, ಪಾರ್ವತಿಯರ ಮೂರ್ತಿಯಿದೆ. ವಿಷ್ಣುವಿನ ಮೂರ್ತಿಯನ್ನು ಸಾಲಿಗ್ರಾಮದ ಶಿಲೆಯಿಂದ ನಿರ್ಮಿಸಲಾಗಿದೆ.

ಇಡೀ ದೇವಾಲಯವು ಕಲ್ಲಿನಿಂದ ನಿರ್ಮಾಣವಾಗಿದೆ. ದೇವಸ್ಥಾನದ ಗರ್ಭಗುಡಿಯ ಗೋಡೆಗಳನ್ನು ಎರಡು ಹಂತಗಳಲ್ಲಿ ಕಟ್ಟಲಾಗಿದೆ. ಎಂಥ ಬಿಸಿಲಿನ ದಿನಗಳಲ್ಲಿ ದೇವಾಲಯದ ಒಳಗಡೆ ಹೋದರೂ ತಂಪಾದ ಅನುಭವ ಆಗಿ ಹಾಯೆನಿಸುತ್ತದೆ. ಬಾದಾಮಿಯ ಗುಡ್ಡಗಳಿಂದ ಕಲ್ಲುಗಳನ್ನು ತರಿಸಲಾಗಿದೆ.

ಬಾಗಿಲುಗಳಿಗೆ ಚಾಲುಕ್ಯರ ಶೈಲಿಯ ಬಳ್ಳಿಯಾಕಾರದ ಸೂಕ್ಷ್ಮ ಕೆತ್ತನೆಗಳು ಹಾಗೂ ವಿವಿಧ ನೃತ್ಯ ಭಂಗಿಯ ಕೆತ್ತನೆಗಳನ್ನು ಕಾಣಬಹುದು.

ಸೂರ್ಯ ದೇವ

ಕೋನಾರ್ಕದಲ್ಲಿ ಸೂರ್ಯ ದೇವಾಲಯ ಪ್ರಸಿದ್ಧ. ಉಳಿದ ಭಾಗದಲ್ಲಿ ಸೂರ್ಯ ದೇವರಿಗೆ ಅಷ್ಟಾಗಿ ಪ್ರಾತಿನಿಧ್ಯ ನೀಡುವುದನ್ನು ಕಾಣುವುದಿಲ್ಲ. ಆದರೆ ಭವಾನಿ ಶಂಕರ ದೇವಾಲಯದಲ್ಲಿ ಸೂರ್ಯ ದೇವರ ಮೂರ್ತಿಯನ್ನೂ ಪ್ರತಿಷ್ಠಾಪಿಸಿರುವುದು ವಿಶೇಷ.

2014–15ರಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಮಾಡಿ, ಸಹಸ್ರಮಾನೋತ್ಸವ ಆಚರಣೆ ಮಾಡಲಾಗಿದೆ. ಶ್ರಾವಣ ಸೋಮವಾರ ಹಾಗೂ ಶಿವರಾತ್ರಿಯಂದು ಇಲ್ಲಿ ರುದ್ರಾಭಿಷೇಕ ನಡೆಯುತ್ತದೆ.

‘ಪಾಲಿಕೆ ವತಿಯಿಂದ ದೇವಸ್ಥಾನಕ್ಕೆ ಬೇಲಿ ನಿರ್ಮಿಸಲಾಗಿದೆ. ನೀರಿನ ಸಂಪರ್ಕವನ್ನೂ ಮಾಡಿಕೊಡಲಾಗಿದೆ. ಆದರೆ ಕಿಕ್ಕಿರಿದು ಮನೆಗಳಿಂದ ಸುತ್ತುವರಿದ ಈ ಐತಿಹಾಸಿಕ ದೇವಾಲಯವು ಪ್ರವಾಸಿಗರ ಸಂಪರ್ಕದಿಂದ ದೂರವೇ ಉಳಿದಿದೆ. ದೇವಾಲಯದ ಎದುರಿಗಿದ್ದ ಪುಷ್ಕರಿಣಿ ಸಂಪೂರ್ಣ ಮುಚ್ಚಿಹೋಗಿದೆ. ಇಲ್ಲಿಗೆ ಬರಲು ಸರಿಯಾದ ದಾರಿಯಿಲ್ಲ. ಇಲ್ಲೊಂದು ಪುರಾತನ ದೇವಾಲಯವಿದೆ ಎಂಬುದೇ ಜನರಿಗೆ ಮಾಹಿತಿ ಇಲ್ಲ. ಪ್ರತಿ ವರ್ಷ ದೇವಾಲಯದ ನಿರ್ವಹಣೆಗೆಂದು ಸರ್ಕಾರದಿಂದ ಕೊಡುವ ತಸ್ತೀಕ್ ಮೊತ್ತವೂ ಸಿಗುತ್ತಿಲ್ಲ. ಹೀಗಾಗಿ, ದೇವಸ್ಥಾನವನ್ನು ಸರ್ಕಾರವು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿ ಪ್ರವಾಸಿಗರ ಆಕರ್ಷಣೆಯ ತಾಣವನ್ನಾಗಿ ಮಾಡಬೇಕು’ ಎಂಬುದು ಸ್ಥಳೀಯ ನಿವಾಸಿ, ಸಾಮಾಜಿಕ ಕಾರ್ಯಕರ್ತ ನಾರಾಯಣ ಪಾಂಡುರಂಗಿ ಅವರ ಒತ್ತಾಯ.‌

ಮೂರ್ತಿಗಳಿಗೆ ವಜ್ರ ಲೇಪನ

ಸಪ್ತಮಾತೃಕೆಯರು ಹಾಗೂ ಪಾಣಿ ಪೀಠ, ವಿಷ್ಣುವಿನ ಮೂರ್ತಿಗಳು ಬಹಳ ಹಳೆಯದಾದ ಕಾರಣ ಸಹಜವಾಗಿಯೇ ಅವುಗಳ ಕೆಲವು ಭಾಗಗಳು ಮುಕ್ಕಾಗಿದ್ದವು. ಆ ಎಲ್ಲ ಮೂರ್ತಿಗಳಿಗೆ ವಜ್ರ ಲೇಪನ ಮಾಡಿಸಿ, ಪುನಃ ಪ್ರಾಣ ಪ್ರತಿಷ್ಠಾಪ‍ನೆ ಮಾಡಲಾಗಿದೆ.

‘ಮೂರ್ತಿಗಳ ಮುಕ್ಕಾದ ಭಾಗಕ್ಕೆ, ಕಲ್ಲಿನ ಪುಡಿಗಳನ್ನು ವಿಧಿ ವಿಧಾನದ ಪ್ರಕಾರ ಲೇಪನ ಮಾಡುವ ಪ್ರಕ್ರಿಯೆಯನ್ನು ವಜ್ರ ಲೇಪನ ಎನ್ನಲಾಗುತ್ತದೆ. ಈ ಕಾರ್ಯವನ್ನು ಪುಣೆಯಿಂದ ರಾಜಾಬಾಹು ಎಂಬ ಶಿಲ್ಪಿಯನ್ನು ಕರೆಯಿಸಿ ಮಾಡಿಸಲಾಗಿದೆ’ ಎಂದು ನಾರಾಯಣ ಪಾಂಡುರಂಗಿ ಅವರು ಮಾಹಿತಿ ನೀಡಿದರು.

ಸಾಮಾನ್ಯ ನೋಟಕ್ಕೆ ಮುಕ್ಕಾದ ಭಾಗಕ್ಕೆ ಕಲ್ಲಿನ ಪುಡಿ ತುಂಬಲಾಗಿದೆ ಎಂಬುದು ಗೋಚರಿಸುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಅಥವಾ ಯಾರಾದರೂ ಹೇಳಿದರೆ ಮಾತ್ರ ತಿಳಿಯುತ್ತದೆ. ಅಷ್ಟು ಅಚ್ಚುಕಟ್ಟಾಗಿರುತ್ತದೆ ವಜ್ರ ಲೇಪನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT