ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾತ್ಕಾಲಿಕ ಗರ್ಭನಿರೋಧಕ ಕ್ರಮವೇ ಸೂಕ್ತ: ಡಾ. ರತ್ನಮಾಲಾ ದೇಸಾಯಿ

ಎಫ್‌ಪಿಎಐ ರಾಷ್ಟ್ರೀಯ ಅಧ್ಯಕ್ಷ ಡಾ. ರತ್ನಮಾಲಾ ದೇಸಾಯಿ ಸಲಹೆ
Last Updated 31 ಮಾರ್ಚ್ 2023, 6:32 IST
ಅಕ್ಷರ ಗಾತ್ರ

ಧಾರವಾಡ: ‘ಕಿರಿದಾಗುತ್ತಿರುವ ಕುಟುಂಬ ರಚನೆಯಲ್ಲಿ ಶಾಶ್ವತ ಸಂತಾನಹರಣ ವಿಧಾನಕ್ಕಿಂತ ತಾತ್ಕಾಲಿಕ ವಿಧಾನವೇ ಹೆಚ್ಚು ಸೂಕ್ತ’ ಎಂದು ಭಾರತೀಯ ಕುಟುಂಬ ಕಲ್ಯಾಣ ಸಂಸ್ಥೆಯ (ಎಫ್‌ಪಿಎಐ) ರಾಷ್ಟ್ರೀಯ ಅಧ್ಯಕ್ಷೆ ಡಾ. ರತ್ನಮಾಲಾ ದೇಸಾಯಿ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು ಬಿಲ್‌ ಮತ್ತು ಮಿಲಿಂಡಾ ಗೇಟ್ಸ್ ಪ್ರತಿಷ್ಠಾನ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಎಫ್‌ಪಿಎಐ ಸಹಯೋಗದೊಂದಿಗೆ ಆಯೋಜಿಸಿರುವ ಸಬ್‌ಡರ್ಮಿನಲ್ ಸಿಂಗಲ್ ರಾಡ್‌ ಗರ್ಭನಿರೋಧಕ ವಿಧಾನ ಕುರಿತ ತರಬೇತುದಾರರಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಒಂದು ಅಥವಾ ಎರಡು ಮಕ್ಕಳನ್ನು ಹೊಂದಿರುವ ಶಾಶ್ವತ ಸಂತಾನಹರಣ ಕ್ರಿಯೆಗೆ ಒಳಗಾದ ಮಹಿಳೆ, ಆಕಸ್ಮಿಕವಾಗಿ ಆ ಮಕ್ಕಳನ್ನು ಕಳೆದುಕೊಂಡರೆ, ಮುಂದೆ ಮರಳಿ ಸಂತಾನ ಹೊಂದುವ ಭಾಗ್ಯದಿಂದಲೇ ವಂಚಿತರಾಗುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ತಾತ್ಕಾಲಿಕ ವಿಧಾನಗಳನ್ನು ಅನುಸರಿಸುವುದರಿಂದ ಸಂತಾನ ಹೊಂದುವ ಅವಕಾಶ ಇರುತ್ತದೆ’ ಎಂದರು.

‘ಎಡ ತೋಳಿನ ಒಳಭಾಗದ ಚರ್ಮದೊಳಗೆ ಸೇರಿಸುವ ಸಬ್‌ಡರ್ಮಿನಲ್ ಸಿಂಗಲ್ ರಾಡ್‌ ಗರ್ಭನಿರೋಧಕ ಸಾಧನವು ಕಳೆದ 30 ವರ್ಷಗಳಿಂದ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಬಳಕೆಯಲ್ಲಿದೆ. ಪಕ್ಕದ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾದಲ್ಲೂ ಈ ಸಾಧನದ ಬಳಕೆ ಇದೆ. 2018ರಲ್ಲಿ ಭಾರತದಲ್ಲಿ ಪರಿಚಯಿಸಲಾದ ಈ ಸಾಧನದ ಅಳವಡಿಕೆ ಹಾಗೂ ಜಾಗೃತಿ ಮೂಡಿಸುವ ಜವಾಬ್ದಾರಿ ಎಫ್‌ಪಿಎಐಗೆ ಲಭಿಸಿದೆ’ ಎಂದು ತಿಳಿಸಿದರು.

‘ಬೆಂಕಿ ಕಡ್ಡಿ ಗಾತ್ರದ ಒಂದು ಸಣ್ಣ ಕಡ್ಡಿಯನ್ನು ಎಡತೋಳಿನ ಒಳಭಾಗದಲ್ಲಿ ಚುಚ್ಚುಮದ್ದು ನೀಡುವ ಮಾದರಿಯ ಸಾಧನದಿಂದ ಸುಲಭವಾಗಿ ಸೇರಿಸಲಾಗುವುದು. ಇದರಲ್ಲಿ ಪಾಲಿ ವಿನೈಲ್ ಅಸಿಟೇಟ್‌ ಎಂಬ ಸಾಧನದಲ್ಲಿ ಪ್ರೊಜೆಸ್ಟೊಜೆನ್ ಎಂಬ ಹಾರ್ಮೋನು ಇರಲಿದೆ. ಒಮ್ಮೆ ಅಳವಡಿಸಿದರೆ ಮೂರು ವರ್ಷಗಳ ಕಾಲ ಇದು ಕಾರ್ಯ ನಿರ್ವಹಿಸಲಿದೆ. ಪ್ರತಿ ದಿನ ಈ ಹಾರ್ಮೋನು ಬಿಡುಗಡೆಯಾಗುವುದರಿಂದ ಗರ್ಭಧಾರಣೆ ಆಗದು. ಕೆಲವರಿಗೆ ಋತುಸ್ರಾವದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆಯನ್ನು ಹೊರತುಪಡಿಸಿ ಇದರಿಂದ ಅಡ್ಡಪರಿಣಾಮಗಳೇನೂ ಇಲ್ಲ ಎಂಬುದು ಈವರೆಗಿನ ಸಂಶೋಧನೆ ಸಾಬಿತುಪಡಿಸಿದೆ’ ಎಂದು ಡಾ. ರತ್ನಮಾಲಾ ವಿವರಿಸಿದರು.

ತರಬೇತುದಾರರಾದ ಡಾ. ಸುನೀತಾ ಸಿಂಗಾಲ್ ಮಾತನಾಡಿ, ‘ದೇಶದಲ್ಲಿ ದೆಹಲಿ ನಂತರ ಎರಡನೇ ತರಬೇತಿ ಧಾರವಾಡದಲ್ಲಿ ನಡೆಯುತ್ತಿದೆ. ಇಲ್ಲಿ ದೆಹಲಿ, ಗುಜರಾತ್, ತಮಿಳುನಾಡು ಹಾಗೂ ಕರ್ನಾಟಕದ 11 ಜನ ಪಾಲ್ಗೊಂಡಿದ್ದಾರೆ. ಇಂತದ್ದೇ ತರಬೇತಿ ಮುಂದಿನ ದಿನಗಳಲ್ಲಿ ಕೊಲ್ಕತ್ತಾದಲ್ಲಿ ನಡೆಯಲಿದೆ. ದೇಶದಲ್ಲಿ ಒಟ್ಟು 30 ತರಬೇತುದಾರರನ್ನು ಸಜ್ಜುಗೊಳಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ. ಅವರು ಇತರರನ್ನು ತರಬೇತುಗೊಳಿಸಲಿದ್ದಾರೆ’ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಟೀಲ ಶಶಿ, ಡಾ. ಕಮಲಾ ಆಪ್ಟೆ, ಡಾ. ರಾಜನ್ ದೇಶಪಾಂಡೆ, ಡಾ. ಎಂ.ಎನ್.ತಾವರಗೇರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT