ಸೋಮವಾರ, ಆಗಸ್ಟ್ 2, 2021
20 °C
ವಿಶ್ವಯೋಗ ದಿನ 21ಕ್ಕೆ ಮನೆಯಲ್ಲೇ ಯೋಗ ಮಾಡಿ

ಧಾರವಾಡ: ಈ ಬಾರಿ ಸಾಮೂಹಿಕ ಯೋಗ ಇಲ್ಲ

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಿಶ್ವ ಯೋಗ ದಿನಕ್ಕೆ (ಜೂನ್‌ 21) ಇನ್ನೊಂದೇ ವಾರ. ಆದರೆ ಈ ಬಾರಿ ಕೊರೊನಾ ಹಾವಳಿಯಿಂದಾಗಿ ಸಾಮೂಹಿಕ ಯೋಗ ದಿನಾಚರಣೆ ಕಾರ್ಯಕ್ರಮ ಎಲ್ಲಿಯೂ ನಡೆಯುತ್ತಿಲ್ಲ. ಬದಲಿಗೆ ಮನೆಯಲ್ಲಿಯೇ ಜನರು ಯೋಗ ದಿನ ಆಚರಿಸಬೇಕಿದೆ.

ವಿಶ್ವದಾದ್ಯಂತ ಯೋಗದ ಮಹತ್ವ ಸಾರುವ ಉದ್ದೇಶದಿಂದ 2015ರಿಂದ ಪ್ರತಿ ವರ್ಷ ಜೂನ್‌ 21ರಂದು ಯೋಗ ದಿನ ಆಚರಿಸಲಾಗುತ್ತಿತ್ತು. ಪ್ರತಿ ವರ್ಷ ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಯೋಗಕ್ಕೆ ಇನ್ನಷ್ಟು ಉತ್ತೇಜನ ನೀಡಿದ್ದರು.

ಈ ವರ್ಷ 6ನೇ ಯೋಗ ದಿನಾಚರಣೆಗೆ ಕೊರೊನಾ ಸೋಂಕು ಅಡ್ಡಿಯಾಗಿದೆ. ಅದಕ್ಕಾಗಿ ಕೇಂದ್ರ ಆಯುಷ್‌ ಸಚಿವಾಲಯ, ‘ಮನೆಯಲ್ಲಿಯೇ ಯೋಗ’ (Yoga @Home) ಹಾಗೂ ಕುಟುಂಬದ ಜೊತೆ ಯೋಗ (Yoga with family) ನಡೆಸುವಂತೆ ಜನರಲ್ಲಿ ಮನವಿ ಮಾಡಿಕೊಂಡಿದೆ.

ಜೂನ್‌ 21ರಂದು ಬೆಳಿಗ್ಗೆ 7 ಗಂಟೆಯಿಂದ 45 ನಿಮಿಷ ಶಿಷ್ಟಾಚಾರದಂತೆ ಸಾರ್ವಜನಿಕರು ಮನೆಯಲ್ಲೇ ಯೋಗ ಮಾಡಬೇಕು. ಸಾಮಾನ್ಯ ಯೋಗಾಸನಗಳನ್ನು ಆಯುಷ್‌ ಸಚಿವಾಲಯದ ವೆಬ್‌ಸೈಟ್‌ ಯೋಗ ಪೋರ್ಟ್‌ಲ್‌ನಲ್ಲಿರುವ ವಿಡಿಯೊ ನೋಡಿಕೊಂಡು ಮಾಡಬಹುದು. ನುರಿತ ಯೋಗಪಟುಗಳು ಜನಸಾಮಾನ್ಯರಿಗೆ ಸಾಮಾಜಿಕ ಜಾಲತಾಣ ಬಳಸಿಕೊಂಡು ಆನ್‌ಲೈನ್‌ ಮೂಲಕ ಯೋಗ, ಯೋಗದ ಮಹತ್ವದ ಬಗ್ಗೆ ಉಪನ್ಯಾಸ ಆಯೋಜಿಸಬಹುದು.

ಯೋಗ ವಿಡಿಯೊ ಮಾಡಿರಿ

ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯುತ್ತಿಲ್ಲವಾದರೂ ಸಾರ್ವಜನಿಕರಿಗಾಗಿ ಆಯುಷ್‌ ಸಚಿವಾಲಯ ರಾಷ್ಟ್ರಮಟ್ಟದಲ್ಲಿ ‘ಆನ್‌ಲೈನ್‌ ವಿಡಿಯೊ ಬ್ಲಾಗಿಂಗ್‌ ಸ್ಪರ್ಧೆ’ ಆಯೋಜಿಸಿದೆ. 18 ವರ್ಷಕ್ಕಿಂತ ಕೆಳಗಿನವರು ಹಾಗೂ ಅದಕ್ಕಿಂತ ಮೇಲಿನ ಪುರುಷ ಹಾಗೂ ಮಹಿಳೆಯರು ಪ್ರತ್ಯೇಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ವೃತ್ತಿಪರ ಯೋಗಪಟುಗಳಿಗಾಗಿಯೂ ಪ್ರತ್ಯೇಕ ವಿಭಾಗವಿದೆ.

ಪ್ರಥಮ ಬಹುಮಾನ ₹1 ಲಕ್ಷ, ದ್ವಿತೀಯ ₹50 ಸಾವಿರ ಹಾಗೂ ತೃತೀಯ ₹25 ಸಾವಿರ ನೀಡಲಿದೆ. ಆಸಕ್ತರು 3 ನಿಮಿಷದ ವಿಡಿಯೊ ಸಿದ್ಧಪಡಿಸಿ, ಯೋಗಾಭ್ಯಾಸ ತಮ್ಮ ಬದುಕಿನಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸಿದೆ ಎನ್ನುವ ವಿವರ ಸೇರಿಸಿ ಜೂನ್‌ 21ರೊಳಗೆ ಅಪ್‌ಲೋಡ್‌ ಮಾಡಬೇಕು. (ಈ ಮೊದಲು ಜೂನ್ 15 ಕೊನೆಯ ದಿನವೆಂದು ಹೇಳಲಾಗಿತ್ತು)

ಇದಕ್ಕಾಗಿ ಯೂ ಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟರ್ ಸಾಮಾಜಿಕ ಜಾಲತಾಣ ಬಳಸಿಕೊಳ್ಳಬಹುದು. ಈ ವಿಡಿಯೊವನ್ನು ‘ಮೈ ಲೈಫ್‌ ಮೈ ಯೋಗ’ ಅಥವಾ ‘ಜೀವನ್ ಯೋಗ’ (ಉದಾಹರಣೆಗೆ #MyLifeMyYoga INDIA#FemaleAdult) ಹೆಸರಿನಲ್ಲಿ ಹ್ಯಾಷ್‌ ಟ್ಯಾಗ್ ಮಾಡಿ ಆಯುಷ್‌ ಸಚಿವಾಲಯದ innovate.mygov.in ಇದಕ್ಕೆ ಲಿಂಕ್‌ ಮಾಡಬೇಕು.

ಜೊತೆಗೆ ನಿಮ್ಮ ಇ–ಮೇಲ್‌, ಮೊಬೈಲ್‌ ನಂಬರ್‌, ವಿಳಾಸ ನೀಡಬೇಕು. ಯೋಗ ತಜ್ಞರು ಅವುಗಳನ್ನು ಪರಿಶೀಲಿಸಿದ ಬಳಿಕ ಆಯ್ಕೆಯಾದ ಯೋಗಪಟುಗಳಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು