ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ರೈಲ್ವೆ ದರಕ್ಕೆ ಬೆಚ್ಚಿ ಬಿದ್ದ ಪ್ರಯಾಣಿಕರು

ಕೂಲಿ ಕಾರ್ಮಿಕರಿಗೆ ಹೊರೆ, ಪ್ರಯಾಣ ದರ ಇಳಿಸಲು ಆಗ್ರಹ
Last Updated 22 ಜುಲೈ 2021, 16:48 IST
ಅಕ್ಷರ ಗಾತ್ರ

ಗುಡಗೇರಿ: ಕೋವಿಡ್ ಎರಡನೇ ಅಲೆ ಕ್ಷೀಣಿಸುತ್ತಿದ್ದಂತೆ ಸಾರಿಗೆ ಸಂಪರ್ಕ ಆರಂಭಗೊಂಡಿದ್ದು, ಅದರ ಜೊತೆಗೆ ರೈಲು ಸಂಚಾರವು ಹಂತ ಹಂತವಾಗಿ ಹೆಚ್ಚಾಗುತ್ತಿದೆ. ಆದರೆ, ಬಡವರ ಸಾರಿಗೆ ಎಂದೇ ಕರೆಯಿಸಿಕೊಳ್ಳುವ ರೈಲ್ವೆ ಪ್ರಯಾಣದ ದರ ನೋಡಿ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ಕೂಲಿ ಹಾಗೂ ಇನ್ನಿತರ ಕೆಲಸ ಅರಿಸಿ ಕಾರ್ಮಿಕರು ನಿತ್ಯ ಜಿಲ್ಲೆಯ ಸುತ್ತಮುತ್ತಲಿನ ಊರುಗಳಿಂದ ಹುಬ್ಬಳ್ಳಿಗೆ ತೆರಳುತ್ತಾರೆ. ವಾಣಿಜ್ಯ ನಗರಿ ಎನ್ನುವ ಹೆಗ್ಗಳಿಕೆ ಹೊಂದಿರುವ ಹುಬ್ಬಳ್ಳಿಗೆ ತೆರಳುವ ಬಹುತೇಕ ಕಾರ್ಮಿಕರು ಪ್ರಯಾಣಕ್ಕೆ ರೈಲು ಸಂಚಾರವನ್ನೇ ನಂಬಿಕೊಂಡಿದ್ದಾರೆ.

ಕೋವಿಡ್ ಮುಂಚೆ ಗುಡಗೇರಿಯಿಂದ ಹುಬ್ಬಳ್ಳಿಗೆ ₹10 ದರವಿತ್ತು. ಈಗ ₹30 ಪಾವತಿಸಬೇಕಾಗಿದೆ. ಗುಡಗೇರಿಯಿಂದ ಸಂಶಿಗೆ ಬಂದರೂ ₹30 ದರವೇ ಇದೆ.

ಕೋವಿಡ್‌ನಿಂದಾಗಿ ಅನೇಕ ಕೂಲಿ ಕಾರ್ಮಿಕರಿಗೆ ದುಡಿಮೆಯಿಲ್ಲ. ಹಿಂದೆ ಗಳಿಸಿದ ಆದಾಯದಲ್ಲಿಯೇ ಅಷ್ಟಿಷ್ಟು ಉಳಿಸಿಕೊಂಡು ಲಾಕ್‌ಡೌನ್‌ ಅವಧಿಯಲ್ಲಿ ಜೀವನ ನಡೆಸಿದ್ದರು. ಈಗ ಪ್ರಯಾಣದ ದರವೂ ಇಳಿಕೆಯಾಗದ ಕಾರಣ ಕಾರ್ಮಿಕರಿಗೆ ಹೊರೆಯಾಗಿದೆ.

ರೈಲ್ವೆ ಇಲಾಖೆ ಮೊದಲು ಮಾಸಿಕ ಪಾಸ್‌ಗಳನ್ನು ವಿತರಿಸುತ್ತಿತ್ತು. ಗುಡಗೇರಿಯಿಂದ ಹುಬ್ಬಳ್ಳಿಗೆ ಮಾಸಿಕ ₹180 ಪಾವತಿಸಿದರೆ ಸಾಕಿತ್ತು. ಆದರೆ, ಈಗ ಪಾಸ್‌ಗಳನ್ನು ನೀಡುವುದನ್ನು ನಿಲ್ಲಿಸಲಾಗಿದೆ. ಕಳಸೂರು, ಸವಣೂರ, ಯಲವಿಗಿ, ಕಳಸ, ಗುಡಗೇರಿ, ಸಂಶಿ, ಕುಂದಗೋಳದ ಜನರು ನಿತ್ಯ ನೂರಾರು ಸಂಖ್ಯೆಯಲ್ಲಿ ಕೂಲಿ ಕೆಲಸಕ್ಕೆ ಅರಸಿ ಹುಬ್ಬಳ್ಳಿಗೆ ಹೋಗುತ್ತಿದ್ದರು. ಪ್ರಯಾಣ ದರ ಹೆಚ್ಚಾಗಿ, ಕೂಲಿಯೂ ಗಿಟ್ಟದ ಕಾರಣ ಬಹಳಷ್ಟು ಕಾರ್ಮಿಕರು ಇರುವ ಊರಿನಲ್ಲಿಯೇ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ.

ಪಾಸ್‌ಗೂ ಕತ್ತರಿ: ಬಿಪಿಎಲ್‌ ಪಡಿತರದಾರರಿಗೆ ಮಾಸಿಕ ₹25ಕ್ಕೆ ಪಾಸ್‌ ನೀಡಲಾಗುತ್ತಿತ್ತು. ಇದರಿಂದ ಸಾಕಷ್ಟು ಕಾರ್ಮಿಕರಿಗೆ ಅನುಕೂಲವೂ ಆಗಿತ್ತು. ಈಗ ಇದನ್ನೂ ರದ್ದುಪಡಿಸಲಾಗಿದ್ದು, ರೈಲ್ವೆ ಇಲಾಖೆಗೆ ಕಾರ್ಮಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಕೂಲಿ ಕಾರ್ಮಿಕ ಲಕ್ಷ್ಮಣ ಗೋವಿಂದಪ್ಪನವರ ಪ್ರಜಾವಾಣಿ ಜೊತೆ ಮಾತನಾಡಿ ‘ನಮ್ಮಂತ ನೂರಾರು ಕೂಲಿ ಕಾರ್ಮಿಕರು ರೈಲು ಸಂಚಾರವನ್ನೇ ನೆಚ್ಚಿಕೊಂಡಿದ್ದೇವೆ. ಈಗ ಅದರ ಬೆಲೆಯೂ ಇಳಿದಿಲ್ಲ. ಹೀಗಾದರೆ ಕೂಲಿ ಕಾರ್ಮಿಕರ ಪರಿಸ್ಥಿತಿ ಏನು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT