ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ರಸ್ತೆಗೆ ಎರಡು ಸಲ ದುರಸ್ತಿ ಭಾಗ್ಯ!

ಬೆಳಿಗ್ಗೆ ಮಣ್ಣು ಹಾಕಿದ ಕಾಂಗ್ರೆಸ್ಸಿಗರು, ಮಧ್ಯಾಹ್ನ ಜಲ್ಲಿಪುಡಿ ಸುರಿದ ಪಾಲಿಕೆ
Last Updated 21 ಜೂನ್ 2021, 15:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ರವಿನಗರದ ಹದಗೆಟ್ಟ ರಸ್ತೆಗೆ ಸೋಮವಾರ ಎರಡು ಸಲ ದುರಸ್ತಿ ಭಾಗ್ಯ ಸಿಕ್ಕಿದೆ! ಬೆಳಿಗ್ಗೆ ಕಾಂಗ್ರೆಸ್‌ ಪಕ್ಷದಿಂದ ಹಾಗೂ ಮಧ್ಯಾಹ್ನ ಮಹಾನಗರ ಪಾಲಿಕೆ ವತಿಯಿಂದ ರಸ್ತೆಯನ್ನು ದುರಸ್ತಿ ಮಾಡಲಾಗಿದೆ.

ಗುಂಡಿಗಳಿಂದ ಆವೃತವಾಗಿ ಮಳೆ ನೀರು ನಿಂತಿದ್ದ ರಸ್ತೆಯ ಸ್ಥಿತಿ ಖಂಡಿಸಿ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿಜೂನ್ 18ರಂದು ಪ್ರತಿಭಟನೆ ನಡೆದಿತ್ತು. ಕಾರ್ಯಕರ್ತರು ಮಳೆ ನೀರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಕಟೌಟ್‌ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿಭಟನೆ ನಡೆದು ಎರಡು ದಿನವಾದರೂ ಪಾಲಿಕೆಯು ರಸ್ತೆಯನ್ನು ದುರಸ್ತಿ ಮಾಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಬೆಳಿಗ್ಗೆ ಲಾರಿಯಲ್ಲಿ ಮಣ್ಣು ತಂದು ರಸ್ತೆಗೆ ಸುರಿದರು. ಜೆಸಿಬಿ ಬಳಸಿ ರಸ್ತೆಯ ಗುಂಡಿಗಳನ್ನು ಮುಚ್ಚಿ ದುರಸ್ತಿ ಮಾಡಿದರು.

ವಿಷಯ ತಿಳಿದ ಪಾಲಿಕೆಯವರು ಮಧ್ಯಾಹ್ನದ ಹೊತ್ತಿಗೆ ರಸ್ತೆ ದುರಸ್ತಿಗೆ ಮುಂದಾದರು. ಕಾಂಗ್ರೆಸ್‌ನವರು ಅದಾಗಲೇ ರಸ್ತೆಗೆ ಹಾಕಿದ್ದ ಮಣ್ಣನ್ನು ಜೆಸಿಬಿಯಿಂದ ತೆರವುಗೊಳಿಸಿ, ಸಿಮೆಂಟ್ ಮಿಶ್ರಿತ ಜಲ್ಲಿಪುಡಿಯನ್ನು ಹಾಕಿ ಗುಂಡಿಗಳನ್ನು ಮುಚ್ಚಿದರು.

ಈ ಕುರಿತು ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ‘ಕಾಂಗ್ರೆಸ್‌ನವರು ರಸ್ತೆ ಗುಂಡಿಗಳನ್ನು ಮುಚ್ಚಲು ಮಣ್ಣು ಹಾಕಿದ್ದರಿಂದ, ರಸ್ತೆ ಕೆಸರಿನ ರಾಡಿಯಾಗಿತ್ತು. ಜನ ನಡೆದುಕೊಂಡು ಹೋಗುವುದಕ್ಕೂ ಆಗುತ್ತಿರಲಿಲ್ಲ. ಹಾಗಾಗಿ, ಪಾಲಿಕೆ ವತಿಯಿಂದ ರಸ್ತೆಗೆ ಹಾಕಿದ್ದ ಮಣ್ಣನ್ನು ತೆರವುಗೊಳಿಸಿ ಸಿಮೆಂಟ್ ಮಿಶ್ರಿತ ಜಲ್ಲಿಪುಡಿ ಹಾಕಿ ದುರಸ್ತಿ ಮಾಡಲಾಯಿತು’ ಎಂದರು.

‘ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ಹಾಗೂ ಸಾಮಗ್ರಿಗಳ ಕೊರತೆ ಎದುರಾಯಿತು. ಹಾಗಾಗಿ, ರಸ್ತೆಗಳ ದುರಸ್ತಿ ಕಾರ್ಯ ವಿಳಂಬವಾಗಿದೆ. ಸದರಿ ರಸ್ತೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT