ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಗಳ್ಳತನ ಪ್ರಕರಣ: ಪೊಲೀಸ್‌ ಅಧಿಕಾರಿ ಪುತ್ರ ಸೇರಿ ಇಬ್ಬರ ಬಂಧನ

ಕಣ್ಣಿಗೆ ಖಾರದಪುಡಿ ಬಿದ್ದರೂ ಛಲಬಿಡದ ವಿದ್ಯಾನಗರ ಪೊಲೀಸರು
Last Updated 30 ಏಪ್ರಿಲ್ 2019, 14:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರದ ಪೊಲೀಸರು ಬ್ರಾಡ್ಜ್‌ ಉತ್ತರ ಗೋವಾದ ಸಹಾಯಕ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಎಎಸ್‌ಐ) ರೋಹಿದಾಸ ಕೇರಕರ ಅವರ ಪುತ್ರ ಗೌರೇಶ ಮತ್ತು ಮಡಿವಾಳಪ್ಪ ಸುಣಗಾರ ಎಂಬುವರನ್ನು ಬಂಧಿಸಿದ್ದಾರೆ.

31 ವರ್ಷದ ಗೌರೇಶ ಸದ್ಯಕ್ಕೆ ಉಣಕಲ್‌ನ ಸಾಯಿನಗರದಲ್ಲಿ ವಾಸವಾಗಿದ್ದಾನೆ. ಮಡಿವಾಳಪ್ಪ ಹಳೇ ಹುಬ್ಬಳ್ಳಿ ನಿವಾಸಿ. ಒಟ್ಟು 100 ಗ್ರಾಂ ತೂಕದ ನಾಲ್ಕು ಚಿನ್ನದ ಸರಗಳು, ದ್ವಿಚಕ್ರ ವಾಹನ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಸಾಮಗ್ರಿ ಸೇರಿ ಒಟ್ಟು ₹ 4,15,500 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರಗಳ್ಳತನದ ಬಗ್ಗೆ ವಿದ್ಯಾನಗರ, ಹಳೇಹುಬ್ಬಳ್ಳಿ ಮತ್ತು ಅಶೋಕ ನಗರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. ‌ನಗರದಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ವಿಶೇಷ ತಂಡ ರಚಿಸಲಾಗಿತ್ತು.

ವಿದ್ಯಾನಗರ ಠಾಣೆಯ ಸಿಬ್ಬಂದಿ ರಮೇಶ ಹಲ್ಲೆ, ಬಿ.ಎಸ್‌. ಹಚ್ಚಡದ ಮತ್ತು ಆರ್‌.ಎಂ. ಹೊರಟ್ಟಿ ಅವರು ಸೋಮವಾರ ಬೆಳಗಿನ ಜಾವ ರಾಜೀವನಗರದಲ್ಲಿ ಗಸ್ತು ತಿರುಗುವ ವೇಳೆ ಆರೋಪಿಗಳನ್ನು ತಡೆದು ನಿಲ್ಲಿಸಿ, ಸಿಬ್ಬಂದಿಯ ನೆರವಿನಿಂದ ಬಂಧಿಸಿದ್ದಾರೆ.

ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಎಂ.ಎನ್‌. ನಾಗರಾಜ್‌ ‘ದ್ವಿಚಕ್ರದ ವಾಹನದ ಮೇಲೆ ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದ ಇಬ್ಬರನ್ನು ಹಿಡಿದು ನಿಲ್ಲಿಸಿ ವಿಚಾರಣೆ ಮಾಡುತ್ತಿದ್ದಾಗ ಆರೋಪಿಗಳು ನಮ್ಮ ಮೂವರು ಸಿಬ್ಬಂದಿ ಮೇಲೆ ನೈಲ್‌ ಕಟ್ಟರ್‌ ಎಸೆದು, ಖಾರದ ಪುಡಿ ಎರಚಿ ಓಡಿ ಹೋಗಲು ಪ್ರಯತ್ನಿಸಿದ್ದರು. ಕಣ್ಣಿಗೆ ಖಾರದಪುಡಿ ಬಿದ್ದರೂ ರಮೇಶ, ಹಚ್ಚಡದ ಮತ್ತು ಹೊರಟ್ಟಿ ಆರೋಪಿಗಳನ್ನು ಬೆನ್ನಟ್ಟಿ ಸೆರೆಹಿಡಿದರು’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

‘ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕಳೆದ 15 ದಿನಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ಬೆಳಿಗ್ಗೆ ವಾಕಿಂಗ್‌ ಮಾಡುವ ವಯಸ್ಸಾದ ಮಹಿಳೆಯರನ್ನು ಗುರಿಯಾಗಿರಿಸಿ ಕಳ್ಳತನ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರಿಂದ ಎರಡು ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ. ಇನ್ನೆರೆಡು ಸರಗಳನ್ನು ಮುತ್ತೂಟ್‌ ಫೈನಾನ್ಸ್ ಮತ್ತು ಐಐಎಫ್‌ಎಲ್‌ ಫೈನಾನ್ಸ್‌ನಲ್ಲಿ ಅಡವಿಟ್ಟಿರುವುದಾಗಿ ತಿಳಿಸಿದ್ದಾರೆ’ ಎಂದರು.

ಆರೋಪಿಗಳನ್ನು ತಡೆದು ನಿಲ್ಲಿಸಿದ ರಮೇಶ, ಹಚ್ಚಡದ ಮತ್ತು ಹೊರಟ್ಟಿ ಅವರಿಗೆ ನಾಗರಾಜ್‌ ತಲಾ ₹ 5,000 ಮತ್ತು ವಿದ್ಯಾನಗರ ಪೊಲೀಸ್‌ ಠಾಣೆಯ ತಂಡಕ್ಕೆ ₹ 10 ಸಾವಿರ ಬಹುಮಾನ ಘೋಷಿಸಿದರು. ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಡಿ.ಎಲ್‌. ನಾಗೇಶ, ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಆನಂದ ಒಣಕುದುರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT