ಶುಕ್ರವಾರ, ಫೆಬ್ರವರಿ 28, 2020
19 °C
ಟೈಕಾನ್‌ ಸಮಾವೇಶ: ಸಾಧಕ ಉತ್ಸಾಹಿಗಳಲ್ಲಿ ಸ್ಫೂರ್ತಿ ತುಂಬಿದ ಸಾಧಕರು

‘ಇಂಗ್ಲಿಷ್‌ ಬರಲ್ಲ ಅನ್ನೋದು ಸಾಧನೆಗೆ ತೊಡಕಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ’ನನಗೆ ದೊಡ್ಡ ಸಾಧನೆಯ ಗುರಿಯಿದೆ. ಅದನ್ನು ಮುಟ್ಟುವ ಛಲವೂ ಇದೆ; ಆದರೆ, ಇಂಗ್ಲಿಷ್‌ ಬರಲ್ಲ ಎನು ಮಾಡಬೇಕು?, ಅಂದುಕೊಂಡ ಕೆಲಸ ಮಾಡಿ ಮುಗಿಸಲು ಸಾಧ್ಯವಾಗುತ್ತಿಲ್ಲ; ಇದಕ್ಕೆ ಪರಿಹಾರವೇನು?‘

–ಹೀಗೆ ಹಲವಾರು ಪ್ರಶ್ನೆ ಹಾಗೂ ಗೊಂದಲಗಳಿಗೆ ಉತ್ತರದ ನಿರೀಕ್ಷೆಯಲ್ಲಿದ್ದ ನವೋದ್ಯಮಿಗಳಿಗೆ ಮತ್ತು ಯುವಜನತೆಗೆ ಸಾಧಕರು ಗೆಲುವಿನ ಗುಟ್ಟು ಹೇಳಿಕೊಟ್ಟರು. ಭಾನುವಾರ ನಡೆದ ಟೈಕಾನ್‌ ಸಮಾವೇಶದಲ್ಲಿ ಸಾಧಕರು ತಾವು ನಡೆದು ಬಂದ ದಾರಿ, ಎದುರಿಸಿದ ಸವಾಲುಗಳನ್ನು ಸಾಧಕರ ಮುಂದೆ ತೆರೆದಿಟ್ಟು ಸಾಧನೆಗೆ ಸುಲಭ ದಾರಿ ಇಲ್ಲೇ ಇದೆ ನೋಡಿ ಎಂದು ಸ್ಫೂರ್ತಿ ತುಂಬಿದರು.

ಚೆನ್ನೈನ ಕೆವಿನ್‌ಕೇರ್‌ ಸಂಸ್ಥೆ ಸಂಸ್ಥಾಪಕ ಸಿ.ಕೆ. ರಂಗನಾಥನ್‌ ’ನನ್ನ ತಂದೆ ಗಣಿತದ ಶಿಕ್ಷಕರಾಗಿದ್ದರು. ಆದರೆ, ಗಣಿತದಲ್ಲಿ ನಾನು ತುಂಬಾ ದುರ್ಬಲನಾಗಿದ್ದೆ. ಮುಂದೆ ಇದೇ ವಿಷಯದಲ್ಲಿ ಹೆಚ್ಚು ಗಮನ ಹರಿಸಿ ಜ್ಞಾನ ಹೆಚ್ಚಿಸಿಕೊಂಡೆ. ಇದು ಒಂದು ಉದಾಹರಣೆಯಷ್ಟೇ. ಯಾವುದೇ ವಿಷಯ ಕಠಿಣವಾದರೂ ಅದರ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದರೆ ಅದು ಸುಲಭವಾಗಿ ಬಿಡುತ್ತದೆ. ಸಾಕಷ್ಟು ಕೌಶಲ, ಬುದ್ಧಿವಂತಿಕೆ, ಸಾಹಸ ಮನೋಭಾವ, ಧೈರ್ಯ ಎಲ್ಲವೂ ಇದ್ದು ಇಂಗ್ಲಿಷ್‌ ಬರಲ್ಲ ಎನ್ನುವ ಕಾರಣಕ್ಕೆ ಅನೇಕ ಜನ ಕೊರಗುತ್ತಿದ್ದಾರೆ. ಈ ಸಣ್ಣ ವಿಷಯ ದೊಡ್ಡ ಗುರಿ ಸಾಧನೆಗೆ ತೊಡಕಾಗಬಾರದು‘ ಎಂದರು.

'ನಿತ್ಯ ಪತ್ರಿಕೆಗಳನ್ನು ಓದುವುದು, ನಾಲ್ಕೈದು ವಾಕ್ಯಗಳನ್ನು ರಚಿಸುವುದು. ಹೊಸ ಪದಗಳನ್ನು ಕಲಿಯುವುದು ಮಾಡುತ್ತ ಹೋದರೆ ಇಂಗ್ಲಿಷ್‌ ಸುಲಭವಾಗಿ ಬಿಡುತ್ತದೆ. ಇವುಗಳ ಜೊತೆ ಕೌಶಲ, ನಾಯಕತ್ವ ಮತ್ತು ಜ್ಞಾನ ಸಂಪಾದನೆ ರೂಢಿಸಿಕೊಂಡರೆ ಯಶಸ್ಸು ಕಷ್ಟವಲ್ಲ' ಎಂದು ಸಲಹೆ ನೀಡಿದರು.

ಜಿವಿಕೆ ಪವರ್‌ ಸಂಸ್ಥೆಯ ನಿರ್ದೇಶಕ ಇಸಾಕ್‌ ಜಾರ್ಜ್‌ ಮಾತನಾಡಿ ’ವೈದ್ಯನಾಗಬೇಕು ಎನ್ನುವುದು ನನ್ನ ಪೋಷಕರ ಕನಸಾಗಿತ್ತು. ಇದಕ್ಕಾಗಿ ಎಂಬಿಬಿಎಸ್‌ಗೆ ಪ್ರವೇಶ ಪಡೆದು ಅರ್ಧದಲ್ಲಿಯೇ ತೊರೆದುಬಿಟ್ಟೆ. ನನ್ನ ಸಾಧನೆಯ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ನೀವೂ ಕೂಡ ಆಸಕ್ತಿ ಕ್ಷೇತ್ರಗಳತ್ತ ಗಮನ ಹರಿಸಿ‘ ಎಂದು ಕಿವಿಮಾತು ಹೇಳಿದರು.

ಜಿವಿಕೆ ಸಂಸ್ಥೆ ಹುಬ್ಬಳ್ಳಿ–ಧಾರವಾಡದಲ್ಲಿ ಹೂಡಿಕೆ ಮಾಡುತ್ತದೆಯೇ ಎಂದು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ’ಸಂಸ್ಥೆಯ ಪ್ರಮುಖರಾದ ರೆಡ್ಡಿ ಅವರಿಗೆ ಈ ವಿಷಯವನ್ನು ಗಮನಕ್ಕೆ ತರುತ್ತೇನೆ‘ ಎಂದಷ್ಟೇ ಭರವಸೆ ನೀಡಿದರು.

ಬೆಳಗಾವಿ ಜಿಲ್ಲೆಯಲ್ಲಿ ಕೆಲವೆಡೆ ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಹಳ್ಳಿಯ ಜನರಿಗೆ ನೀರಿನ ಸೌಲಭ್ಯ ಒದಗಿಸಿಕೊಟ್ಟ ಸಾಧನೆಯ ಕಥೆಯಲ್ಲಿ ಪ್ಯಾಸ್‌ ಫೌಂಡೇಷನ್‌ನ ಅಧ್ಯಕ್ಷ ಮಾಧವ ಪ್ರಭು ಹಾಗೂ ಪ್ರತಿನಿಧಿ ಪ್ರೀತಿ ಖೇಡೆ ವಿವರಿಸಿದರು.

ಶಿವ ಖೇರಾ ಮಾತಿನ ಮೋಡಿ

ಸುಮಾರು 45 ನಿಮಿಷ ಮಾತನಾಡಿದ ಹೆಸರಾಂತ ಲೇಖಕ ಶಿವ ಖೇರಾ ತಮ್ಮ ಭಾಷಣದ ಕೊನೆಯ ತನಕವೂ ಸಭಿಕರನ್ನು ತಮ್ಮ ಮಾತಿನ ಮೋಡಿಯಲ್ಲಿ ಸೆರೆ ಹಿಡಿದಿಟ್ಟುಕೊಂಡರು. ಯಶಸ್ಸಿಗಾಗಿ ಶ್ರಮ, ಗುರಿ, ಬದ್ಧತೆ ಅಗತ್ಯ ಎಂದು ಒತ್ತಿ ಹೇಳಿದರು.

’ಯಶಸ್ವಿ ವ್ಯಕ್ತಿ ಸಾಧನೆಗೆ ಭಿನ್ನವಾಗಿ ಯೋಚಿಸುವುದಿಲ್ಲ; ಬೇರೆಯವರು ಸಾಧಕನ ಬಗ್ಗೆ ವಿಭಿನ್ನವಾಗಿ ಯೋಚಿಸುವಂತೆ ಮಾಡುತ್ತಾರೆ. ಜಗತ್ತಿನಲ್ಲಿ ಸಮಯ ಬಂದು ಹೋಗುವುದಿಲ್ಲ. ಬಂದು ಹೋಗುವುದು ಮನುಷ್ಯ ಮಾತ್ರ. ಸಮಯ ಸದಾ ಕಾಲ ಇಲ್ಲೇ ಇರುತ್ತದೆ‘ ಎಂದರು.

ಕಾರ್ಯಕ್ರಮ ಮುಗಿದ ಬಳಿಕವೂ ಶಿವ ಖೇರಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬಿದ್ದರು. ಖೇರಾ ಅವರ ’ಫ್ರೀಡಂ ಈಸ್ ನಾಟ್‌ ಫ್ರೀ‘, ‘ಯು ಕ್ಯಾನ್‌ ವಿನ್‌‘ ಕೃತಿಗಳು ಶರವೇಗದಲ್ಲಿ ಮಾರಾಟವಾದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು