ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಣಕಲ್‌ ಕೆರೆ ಉಕ್ಕೇರಿದಾಗ...

Last Updated 16 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಮನುಷ್ಯ ಕನಸುಗಳ ಕಾಣುವ ಹಗಲು ರಾತ್ರಿಯಲ್ಲಿ
ಭೋರ್ಗರೆದನು ಮಳೆರಾಯ ಭೋರ್ಗರೆದನು ಮಳೆರಾಯ...
ಮನುಷ್ಯನ ಮೇಲೆ ಆಗಿರುವುದು ಅತಿವೃಷ್ಟಿ
ಮನುಷ್ಯನಿಂದ ಪ್ರಕೃತಿ ಮೇಲೆ ಬಿದ್ದಿರುವುದು ವಕ್ರದೃಷ್ಟಿ...

ಅದೊಂದು ದಿನ ಹಾಯಾಗಿ ನಿದ್ರೆಯಿಂದ ಎಚ್ಚರಾದ ಜನರಿಗೆ ತಮ್ಮ ಕೆಲಸ ಕಾರ್ಯಗಳಿಗೆ ಸಿದ್ಧತೆ ನಡೆಸಿಕೊಂಡು ಮನೆಯಿಂದ ಇನ್ನೇನು ಹೊರಗೆ ಕಾಲು ಇಡುತ್ತಿದ್ದಂತೆ, ಮಳೆ ಸುಪ್ರಭಾತ ಹಾಡಿತ್ತು. ಮಳೆಯ ಆಗಮನದಿಂದ ಸಂತಸದಲ್ಲಿದ್ದ, ಜನರಿಗೆ ಕೆಲವೇ ಗಂಟೆಗಳಲ್ಲಿ ಭಯಾನಕ ಚಿತ್ರಣ ಕಣ್ಣೇದುರು ತಾಂಡವವಾಡಿತು.

ಎಲ್ಲರ ಮನದಲ್ಲಿ ಆತಂಕ. ಹುಬ್ಬಳ್ಳಿಯ ಕೆಲವು ಸ್ಥಳಗಳಿಂದ ಮೊಬೈಲ್‌ ಕರೆಗಳ ಮೇಲೆ ಕರೆಗಳು. ‘ಕೆಂಪಗೇರಿಯಲ್ಲಿ ಮನೆ ಬಿದ್ದಾವು, ‘ದೇವಿ ನಗರದಲ್ಲಿ ಮನೆ ಒಳಗ ನೀರ ಬಂದಾವ್‌...’.

ನಮ್ಮ ಭಾಗದಲ್ಲಿ ಈ ಪರಿಯ ಮಳೆ ಸುರಿದಿದ್ದು, ನೋಡಿದ್ದು ಇದೇ ಮೊದಲ ಬಾರಿ. ಎಷ್ಟೇ ಬೆಚ್ಚಗಿನ ಜಾಕೆಟ್‌ ಧರಿಸಿದರೂ ಅದರೊಳಗೆ ನೀರು ಬರುವುದು ಕಡಿಮೆ ಆಗಿರಲಿಲ್ಲ. ಅಷ್ಟು ಮಳೆ! ಮಳೆ ನೀರು ಮುಖದಿಂದ ಜಾರಿ ಕ್ಯಾಮೆರಾ ಮೇಲೆ ಬೀಳುತ್ತಿತ್ತು. ಸೊಂಟದವರೆಗೆ ನೀರಿನಲ್ಲಿ ಹೋಗಿ ಚಿತ್ರಗಳನ್ನು ತೆಗೆಯುತ್ತಿದ್ದರೆ ಆ ನೀರಿನ ರಭಸ ಹಿಂದೆ ಹಿಂದೆ ತಳ್ಳುತ್ತಿತ್ತು.

ಅಷ್ಟೊತ್ತಿಗೆ ಉಣಕಲ್‌ ಕೆರೆ ತುಂಬಿ ಕೋಡಿ ಬೀಳುವ ಸಂತಸದಲ್ಲಿದ್ದ ಮಹಾನಗರದ ಜನರಿಗೆ ಮುಂದೇನಾಗುತ್ತದೆ ಎಂಬ ಕಲ್ಪನೆಯಿರಲಿಲ್ಲ. ಫೋಟೊ ಕ್ಲಿಕ್ಕಿಸುತ್ತಲೇ ಕೆಲ ಹಿರಿಯರನ್ನು ಮಾತನಾಡಿಸಿದಾಗ, ‘ಸುಮಾರು 7-8 ವರ್ಷಗಳಿಂದ ಕೋಡಿ ಹರಿಯದ, ಉಣಕಲ್‌ ಕೆರೆ ಈ ಬಾರಿ ಹರಿಯುವ ಸಂತಸ ತಂದೈತಿ’ ಎಂದು ಖುಷ್‌ಖುಷಿಯಿಂದ ಹೇಳಿದರು. ಅದೇ ನಂತರದಲ್ಲಿ ಉಣಕಲ್‌ ನಿವಾಸಿಗಳು ಕೆರೆಗೆ ಬಾಗಿನವನ್ನೂ ಅರ್ಪಿಸಿದರು.

ಮೊದ ಮೊದಲು ಸಮಾಧಾನವಾಗಿ ಪ್ರಾರಂಭವಾಗ ಉಣಕಲ್‌ ಹರಿವು ಪ್ರಾರಂಭವಾಯಿತು. ಮುಂದೆ ಕೋಡಿ ಹರಿದು ಹುಬ್ಬಳ್ಳಿಯ ಮುಖ್ಯ ರಾಜಕಾಲುವೆಯಲ್ಲಿ ರಭಸ ಪಡೆದು, ದೇವಿನಗರ ಪ್ರದೇಶ ಆವರಿಸಿ, ರುದ್ರನರ್ತನ ಪ್ರಾರಂಭಿಸಿತು. ನೋಡನೋಡುತ್ತಿದ್ದಂತೆಯೇ ಮನೆಯಲ್ಲಿರುವ ಸಿರಿಧಾನ್ಯಗಳು, ತಯಾರಿಸಿಟ್ಟ ಅಡುಗೆ, ಬಟ್ಟೆಬರೆ ಹಾಸಿಗೆ, ಓದುವ ಮಕ್ಕಳ ಪುಸ್ತಕ, ಕಾಗದ ಪತ್ರಗಳು ನೀರು ಪಾಲಾಗಿದ್ದವು. ಮಗು ಮಲಗಿದ್ದ ಬೆಚ್ಚಗಿನ ತೂಗು ಜೋಳಿಗೆಯವರೆಗೂ ಮಳೆಯ ನೀರು ಏರಿತು.

ನಡು ಮಟ್ಟದ ನೀರಿನಲ್ಲಿ ಸಂಪೂರ್ಣ ಒದ್ದೆಯಾದ ಬಟ್ಟೆಗಳಲ್ಲಿ ನಡುಗುತ್ತಿದ್ದ ಮಕ್ಕಳು ಹಾಗೂ ವೃದ್ಧರನ್ನು ಕಂಡು ಒಂದೆಡೆ ಜೀವ ಮರುಗುತ್ತಿತ್ತು. ಅವರದೊಂದೇ ಕೂಗು ‘ಸರ್ ನಮ್ಮ ಮನೆ ನೋಡಿ', ಸರ್ ನಮ್ಮ ಮನೆ ನೋಡಿ’.

ಮತ್ತೆ ಒಂದು ಪೋನ್‌ ಕರೆ... ‘ಹುಬ್ಬಳ್ಳಿಯ ಸುತ್ತಮುತ್ತಲಿನ ಸ್ಥಳಗಳಲ್ಲಿ ಸುಮಾರು ಮನೆಗಳು ಮಳೆಯಿಂದ ನೆಲಕ್ಕುರುಳಿವೆ’. ಮಳೆಯಲ್ಲೇ ಅಲ್ಲಿಗೆ ಧಾವಿಸಿ ನೋಡುವಷ್ಟರಲ್ಲಿ ಮನೆಯ ಗೋಡೆಗಳು ಕುಸಿದು ಅಡುಗೆ ಪಾತ್ರೆ, ಸಾಮಾನು–ಸರಂಜಾಮುಗಳೆಲ್ಲ ಚೆಲ್ಲಾಪಿಲ್ಲಿ. ಕಣ್ಮುಂದೇ ಒಂದಷ್ಟು ತೇಲಿ ಹೋಗುತ್ತಿದ್ದವು. ಒಂದು ಕಡೆ ಮನೆ ಬಿದ್ದ ಸಂಕಟ ತಾಳಲಾರದೆ ಅಳುತ್ತಿದ್ದ ಮಕ್ಕಳು, ಮಹಿಳೆಯರು. ಅಸಹಾಯಕ ಸ್ಥಿತಿಯಲ್ಲಿ ಮನೆಯನ್ನು ವೀಕ್ಷಿಸುತ್ತಿದ್ದ ಪುರುಷರು... ಈ ಎಲ್ಲ ದಶ್ಯಗಳನ್ನು ನೋಡುತ್ತಿದ್ದಾಗ ಅರಿವಿಲ್ಲದೆ ಇಳಿದ ಕಣ್ಣೀರು ಮಳೆ ನೀರಲ್ಲಿ ಲೀನವಾಯಿತು.

ಕೆಲವರು ಈ ಜಗತ್ತು ವಿನಾಶದ ಅಂಚಿಗೆ ಬಂದಿರಬಹುದೆ? ಜಲಪ್ರಳಯವೇ ಆಗಬಹುದೇ ಎಂಬ ಪ್ರಶ್ನೆಗಳನ್ನು ಹಾಕುತ್ತಿದ್ದರೆ ಇನ್ನೂ ಕೆಲವರು ನಾವು ಮಾಡಿದ ಕಸ ಕಡ್ಡಿಗಳು ಮನೆಯ ಒಳಗೆ ಬಂದು ನೆಲೆಸಿವೆ ಎನ್ನುತ್ತಿದ್ದರು. ಪರಿಸರ ಏನೇ ಮಾಡಿದರೂ ಒಳ್ಳೆಯದನ್ನೇ ಮಾಡುತ್ತದೆ ಎನ್ನುವ ಜನ ಒಂದು ಕಡೆ. ‘ಒಂದು ಮನೆಯೂ ಉಳಿಯಲ್ಲಿಲ್ಲಾ.. ಒಂದು ಹೊಲಾನೂ ಉಳಿಯಲ್ಲಿಲ್ಲಾ. ಎಲ್ಲ ಕಡೆಗೂ ನೀರೇ ನೀರು.

ಚಿತ್ರ–ಬರಹ: ಈರಪ್ಪ ನಾಯ್ಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT