ಶನಿವಾರ, ಜನವರಿ 28, 2023
20 °C

ಹಾಸ್ಟೆಲ್ ಸಮಸ್ಯೆ; ಉತ್ತರದ ವಿದ್ಯಾರ್ಥಿಗಳು ತತ್ತರ

ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ವಿದ್ಯಾಕಾಶಿ ಎಂದೇ ಪ್ರಸಿದ್ಧಿ ಪಡೆದ ಸಾಂಸ್ಕೃತಿಕ ನಗರಿ ಧಾರವಾಡಕ್ಕೆ ಶಿಕ್ಷಣ ಅರಸಿ ಬರುವವರ ಸಂಖ್ಯೆ ದೊಡ್ಡದು. ಕಾಲೇಜುಗಳಲ್ಲಿ ವ್ಯಾಸಂಗಕ್ಕೆ ಪ್ರವೇಶ ಸಿಕ್ಕರೂ, ವಸತಿ ಸೌಕರ್ಯಕ್ಕೆ ಹಾಸ್ಟೆಲ್‌ ಪ್ರವೇಶ ಸಿಗದೆ ವಿದ್ಯಾರ್ಥಿಗಳ ಭವಿಷ್ಯ ಈಗ ಅತಂತ್ರವಾಗಿದೆ.

ಕೇವಲ ಪದವಿ ನೀಡುವ ಕಾಲೇಜುಗಳು ಮಾತ್ರವಲ್ಲದೇ, ಸ್ಪಾರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ನೂರಕ್ಕೂ ಹೆಚ್ಚು ತರಬೇತಿ ಕೇಂದ್ರಗಳು ಇಲ್ಲಿವೆ. ಕಾಲೇಜು ಕಲಿಕೆಯ ಜತೆಗೆ ತರಬೇತಿ ಪಡೆಯುವ ಇಚ್ಛೆಯಿಂದ ಬಂದ ಬಹಳಷ್ಟು ಬಡ ಕುಟುಂಬದ ವಿದ್ಯಾರ್ಥಿಗಳು ಈಗ ಊಟ, ವಸತಿ ಸಿಗದೆ ಪರದಾಡುತ್ತಿದ್ದಾರೆ.

ಧಾರವಾಡದಲ್ಲಿ ವಿದ್ಯೆ ಅರಸಿ ಹೊರಗಿನಿಂದ ಸುಮಾರು 11 ಸಾವಿರ ವಿದ್ಯಾರ್ಥಿಗಳು ಬರುವ ಅಂದಾಜಿದೆ. ಹೀಗೆ ಬಂದವರಿಗೆ ಇಲ್ಲಿ ಲಭ್ಯವಿರುವುದು 2500 ಹಾಸ್ಟೆಲ್‌ ಸೀಟುಗಳು ಮಾತ್ರ. ಹಾಸ್ಟೆಲ್‌ ಸೌಲಭ್ಯ ಸಿಗದವರಿಗೆ ಇರುವ ಮತ್ತೊಂದು ಆಯ್ಕೆ ಇಕ್ಕಟ್ಟಾದ, ಭದ್ರತೆಯ ಖಾತ್ರಿ ಇಲ್ಲದ ಅನಧಿಕೃತ ಪಿಜಿಗಳು. ದುಬಾರಿಯಾದಿ ಈ ಪಿಜಿಗಳು ಬಡ ಕುಟುಂಬದವರಿಗೆ ಗಗನ ಕುಸುಮ. ಹೀಗಾಗಿ ಕೆಲ ವಿದ್ಯಾರ್ಥಿಗಳು ರಾತ್ರಿ ಬಾರ್‌ಗಳಲ್ಲಿ ಕೆಲಸ ಮಾಡಿ, ಅಲ್ಲಿಯೇ ಉಳಿದು, ಬೆಳಿಗ್ಗೆ ತರತಿಗಳಿಗೆ ಹಾಜರಾಗುತ್ತಿದ್ದಾರೆ. ಇನ್ನು ವಿದ್ಯಾರ್ಥಿನಿಯರ ಪಾಡು ಹೇಳತೀರದು.

ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಮಾತ್ರವಲ್ಲದೆ, ಹೆಚ್ಚು ಹಣವಿಲ್ಲದೆ ಗುಣಮಟ್ಟದ ಶಿಕ್ಷಣ ಸಿಗುವ ಧಾರವಾಡದಲ್ಲಿ ಕಲಿಯಲು ಬೆಂಗಳೂರು, ಮೈಸೂರು ಭಾಗದಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಲಿಯಲು ಬರುತ್ತಿದ್ದಾರೆ. ಹೀಗೆ ಬರುವವರಿಗೆ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ ಪಡೆಯುವುದೇ ದೊಡ್ಡ ಸವಾಲಾಗಿದೆ. ಅದರಲ್ಲೂ ಹಾಸ್ಟೆಲ್ ಸಿಗದ ವಿದ್ಯಾರ್ಥಿನಿಯರ ಗೋಳು ಹೇಳತೀರದಾಗಿದೆ. ದಶಕಗಳಿಂದ ವಿದ್ಯೆ ಹಾಗೂ ಅನ್ನ ದಾಸೋಹಗಳಿಗೆ ಹೆಸರುವಾಸಿಯಾದ ಮಠಗಳಲ್ಲೂ ಇಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳ ಪ್ರವೇಶ ಕಷ್ಟಸಾಧ್ಯ.

ಒಂದೆಡೆ ಕಾಲೇಜುಗಳಲ್ಲಿ ಹೊಸ ಹೊಸ ಕೋರ್ಸುಗಳು ಆರಂಭವಾಗುತ್ತಿವೆ. ಅದಕ್ಕೆ ತಕ್ಕಂತೆ ಸೀಟುಗಳ ಸಂಖ್ಯೆಯೂ ಏರುಮುಖವಾಗಿದೆ. ಹೀಗೆ ಏರುತ್ತಿರುವ ಸೀಟುಗಳಿಗೆ ಅನಗುಣವಾಗಿ ವಿದ್ಯಾರ್ಥಿ ನಿಲಯಗಳ ಸೌಕರ್ಯವಿಲ್ಲ. ಅಕ್ಕಪಕ್ಕದ ಜಿಲ್ಲೆಗಳು ಮತ್ತು ಗ್ರಾಮೀಣ ಪ್ರದೇಶದಿಂದ ಓದಲು ಬರುವ ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್‌ ಸೀಟಿಗಾಗಿ ಪರಿತಪಿಸುವಂತಾಗಿದೆ. ಸರ್ಕಾರಿ ವಿದ್ಯಾರ್ಥಿ ನಿಲಯಗಳ ಕೊರತೆಯಿಂದಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರವೇಶ ಸಿಕ್ಕದೇ ಬೀದಿಯಲ್ಲಿ ನಿಲ್ಲುವಂತಾಗಿದೆ. ಹಾಸ್ಟೆಲ್ ಸೀಟು ಪಡೆಯಲು ಶಾಸಕರು, ಮಂತ್ರಿಗಳು, ಹಿರಿಯ ಅಧಿಕಾರಿಗಳಿಂದಲೂ ಶಿಫಾರಸು ಮಾಡಿಸುವವರೆಗೂ ಧಾರವಾಡದಲ್ಲಿ ವಿದ್ಯಾರ್ಥಿ ನಿಲಯಗಳ ಕೊರತೆ ಎದುರಾಗಿದೆ.

ಈಡೇರದ ಹಾಸ್ಟೆಲ್ ಸಂಕೀರ್ಣದ ಭರವಸೆ

2018ರಿಂದಲೂ ಅವಳಿ ನಗರದಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಬೃಹತ್ ವಸತಿ ನಿಲಯ ಸಂಕೀರ್ಣ ಪ್ರಾರಂಭಿಸುವ ಮಾತುಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೊಳ್ಳುತ್ತಲೇ ಬಂದಿದೆ. ಆದರೆ ಇಂದಿಗೂ ಈ ಭರವಸೆ ಈಡೇರಿಲ್ಲ.

ಮತ್ತೊಂದೆಡೆ ಖಾಸಗಿ ಪಿ.ಜಿ.ಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುಮುಖವಾಗಿದ್ದು, ಇವುಗಳ ಲಾಭಿಯೂ ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚಳವಾಗದಕ್ಕೆ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ. ಹಾಸ್ಟೆಲ್ ಸಿಗದ ಬಹಳಷ್ಟು ವಿದ್ಯಾರ್ಥಿಗಳು ಸಪ್ತಾಪುರ, ಮಿಚಿಗನ್ ಕಾಂಪೌಂಡ್, ಚೆನ್ನಬಸವೇಶ್ವರ ನಗರ, ಶ್ರೀನಗರ, ಬಸವೇಶ್ವರ ನಗರ, ರಾಣಿ ಚೆನ್ನಮ್ಮ ನಗರ ಹೀಗೆ ಈ ಪ್ರದೇಶದ ಸುತ್ತಮುತ್ತ ನೂರಾರು ಪಿಜಿಗಳು ತಲೆ ಎತ್ತಿವೆ. ಇಲ್ಲಿರುವ ಮನೆಗಳ ಮಾಲೀಕರು ಬೇರೆ ಬಡಾವಣೆಗಳಲ್ಲಿ ಬಾಡಿಗೆ ಮನೆ ಪಡೆದು, ತಮ್ಮ ಮನೆಗಳನ್ನು ಪಿಜಿಗಳಾಗಿ ಪರಿವರ್ತಿಸಲು ನೀಡುತ್ತಿದ್ದಾರೆ. ಹೀಗೆ ಅಂಕೆಗೆ ಸಿಗದೆ ಬೆಳೆಯುತ್ತಿರುವ ಪಿಜಿಗಳೂ ಸರ್ಕಾರಿ ವ್ಯವಸ್ಥೆಯ ಹಾಸ್ಟೆಲ್‌ಗಳ ಬೆಳವಣಿಗೆಗೆ ಅಂಕುಶ ಹಾಕಿರುವ ಸಾಧ್ಯತೆಗಳೂ ಇವೆ ಎಂಬ ಆರೋಪಗಳೂ ಕೇಳಿಬರುತ್ತಿವೆ.

ಬಿಸಿಎಂ ಹಾಸ್ಟೆಲ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಬಯಸಿ ಈ ಬಾರಿ ಎಂಟು ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಸಮಾಜ ಕಲ್ಯಾಣ ಇಲಾಖೆಯ 200 ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ ನಿರ್ಮಾಣ ಕಾರ್ಯಕ್ಕೆ ಸದ್ಯ ಪ್ರಗತಿಯಲ್ಲಿದೆ.

ನಿರ್ಮಾಣವಾಗದ ₹20ಕೋಟಿ ವೆಚ್ಚದ ಹಾಸ್ಟೆಲ್

2022ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯಲ್ಲಿ ಪಂ. ದೀನದಯಾಳ್ ಉಪಾಧ್ಯಾಯ ಹೆಸರಿನ ವಸತಿ ನಿಲಯ ನಿರ್ಮಿಸಲು ಅನುದಾನ ಘೋಷಿಸಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಇದಕ್ಕೆ ಜಾಗ ಗುರುತಿಸಲಾಗಿದೆ. ಆದರೆ ಈವರೆಗೂ ಕಾಮಗಾರಿ ಆರಂಭಗೊಂಡಿಲ್ಲ.

‘ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯ ಕೇಳಿದರೆ ‘ಇಲ್ಲ’ ಎನ್ನುವಂತಿಲ್ಲ ಎಂಬುದು ಸರ್ಕಾರದ ಆದೇಶ. ಇದಕ್ಕೆ ಪೂರಕವಾಗಿ ಸಮಾಜ ಕಲ್ಯಾಣ ಇಲಾಖೆ ಬಾಡಿಗೆ ಕಟ್ಟಡವನ್ನು ಪಡೆದು ಹಾಸ್ಟೆಲ್ ನಡೆಸುತ್ತಿದೆ. ಆದರೆ ಅಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದ ಕಾರಣ, ಊಟವನ್ನು ಹಾಸ್ಟೆಲ್‌ನಲ್ಲಿ ಮಾಡಿ, ಬೇರೆಡೆ ವಸತಿ ಪಡೆಯಿರಿ ಎಂದು ವಾರ್ಡನ್‌ಗಳು ಹೇಳುತ್ತಿದ್ದಾರೆ. ಹಾಗಿದ್ದರೆ ಆ ವಿದ್ಯಾರ್ಥಿಗಳು ರಾತ್ರಿಯನ್ನು ಎಲ್ಲಿ ಕಳೆಯಬೇಕು. ಅವರ ಸುರಕ್ಷತೆಯ ಹೊಣೆ ಯಾರದ್ದು?’ ಎಂದು ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ಮಹಾಂತೇಶ ಬೀಳೂರು ಪ್ರಶ್ನಿಸಿದರು.

‘ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್‌ಗಳಿಗೆ 5618 ಸೀಟುಗಳ ಬೇಡಿಕೆ ಇದೆ. ಆದರೆ ಲಭ್ಯವಿರುವುದು 492 ಸೀಟುಗಳು ಮಾತ್ರ. ಇತ್ತೀಚೆಗೆ ಹಾಸ್ಟೆಲ್‌ ಸೀಟುಗಳಿಗೆ ಕೌನ್ಸಲಿಂಗ್ ನಡೆದಿದ್ದು, ಸುಮಾರು 1600 ವಿದ್ಯಾರ್ಥಿಗಳು ಹಾಜರಾಗಿದ್ದರು. ಆದರೆ 200ರಿಂದ 300 ವಿದ್ಯಾರ್ಥಿಗಳು ಮಾತ್ರ ಸೀಟು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಷಯದಲ್ಲಿ ರಾಜ್ಯದಲ್ಲೇ ಧಾರವಾಡದ ಪರಿಸ್ಥಿತಿ ಅತ್ಯಂತ ವಿಚಿತ್ರ. ಬೇರೆಡೆ ಸೀಟುಗಳಿಗೆ ತಕ್ಕಂತೆ ಹಾಸ್ಟೆಲ್‌ಗಳು ಮಂಜೂರಾಗುತ್ತವೆ. ಆದರೆ ಇಲ್ಲಿ ಹಾಗಾಗುತ್ತಿಲ್ಲ ಏಕೆ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ಶಂಕೆ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು