ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಜಲಿ ಅಂಬಿಗೇರ ಮನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ

Published 19 ಮೇ 2024, 16:01 IST
Last Updated 19 ಮೇ 2024, 16:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜ್ಯದಲ್ಲಿ ಜನರ ಜೀವಕ್ಕೆ ಗ್ಯಾರಂಟಿಯಿಲ್ಲ ಎನ್ನುವ ಸರ್ಕಾರ ಆಡಳಿತ ನಡೆಸುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಅಭಿವೃದ್ಧಿಯ ಸಮಾಧಿ, ಹತ್ಯೆ ಹಾಗೂ ಆತ್ಮಹತ್ಯೆ ಘಟನೆಗಳು ಟ್ರೇಡ್ ಮಾರ್ಕ್ ಆಗಿವೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ನಗರದ ವೀರಾಪುರ ಓಣಿಯಲ್ಲಿ ಈಚೆಗೆ ಕೊಲೆಯಾದ ಅಂಜಲಿ ಅಂಬಿಗೇರ ಅವರ ಮನೆಗೆ ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ನೇಹಾ ಕೊಲೆ ಪ್ರಕರಣ ನಡೆದಾಗಲೇ ರಾಜ್ಯ ಸರ್ಕಾರ ಗಂಭೀರವಾಗಿ ವರ್ತಿಸಬೇಕಿತ್ತು. ಜನರು ಹೋರಾಟ ಮಾಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಗೊಂಡು ಹೇಳಿಕೆ ನೀಡಿದ್ದರು. ಆಗ ಕೀಳುಮಟ್ಟದ ಹೇಳಿಕೆ ನೀಡಿದ್ದರಿಂದ ಕೊಲೆಗಡುಕರಿಗೆ ಹೆದರಿಕೆ ಇಲ್ಲದಂತಾಗಿದೆ. ಇದೀಗ ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಕೊಲೆಯಾಗಿದೆ’ ಎಂದು ಹೇಳಿದರು.

‘ಕಳೆದ 4 ತಿಂಗಳಲ್ಲಿ ರಾಜ್ಯದಲ್ಲಿ 430 ಕೊಲೆಗಳು ನಡೆದಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯ ಸರ್ಕಾರವು ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಹಣ ತಗೆದುಕೊಂಡ ಪರಿಣಾಮ ಇಂತಹ ಘಟನೆಗಳು ಮರುಕಳಿಸುತ್ತಿವೆ’ ಎಂದು ದೂರಿದರು.

‘ನೇಹಾ ಹಾಗೂ ಅಂಜಲಿ ಕೊಲೆ ಪ್ರಕರಣಗಳನ್ನು ತ್ವರಿತ ನ್ಯಾಯಾಲಯ ಮೂಲಕ ವಿಚಾರಣೆ ಮಾಡಬೇಕು. ಡ್ರಗ್ಸ್ ಮಾಫಿಯಾ ಕಂಡುಬರುವ ಕಡೆಗಳಲ್ಲಿ ಪೊಲೀಸ್ ಚೌಕಿಗಳನ್ನು ನಿರ್ಮಾಣ ಮಾಡಬೇಕು. ಡ್ರಗ್ಸ್ ಮಾಫಿಯಾ ಬಗ್ಗೆ ಸುಳಿವು ಕೊಟ್ಟವರ ಹೆಸರನ್ನು ಗೋಪ್ಯವಾಗಿ ಇಡಬೇಕು’ ಎಂದರು.

‘ಅಂಜಲಿ ಕುಟುಂಬಸ್ಥರು ದೂರು ಕೊಡಲು ಹೋದಾಗ ಕ್ರಮ ಕೈಗೊಳ್ಳದ ಅಧಿಕಾರಿಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಈ ಎರಡು ಪ್ರಕರಣಗಳ ತನಿಖೆಯನ್ನು ಸರ್ಕಾರವು ಸಿಬಿಐಗೆ ವಹಿಸಬೇಕು‘ ಎಂದು ಆಗ್ರಹಿಸಿದರು.

ಅಪರಾಧ ಹೆಚ್ಚಳಕ್ಕೆ ಪೊಲೀಸ್‌ ಇಲಾಖೆಯ ಭ್ರಷ್ಟಾಚಾರ ಕಾರಣ: ಅರವಿಂದ್ ಬೆಲ್ಲದ್‌

ಹುಬ್ಬಳ್ಳಿ: ‘ಪೊಲೀಸ್‌ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದರಿಂದ ಅಪರಾಧ ಚಟುವಟಿಕೆಗಳು ಮರುಕಳಿಸುತ್ತಿವೆ. ಹುಬ್ಬಳ್ಳಿಯಲ್ಲಿ ಮತ್ತೊಂದು ಅಹಿತಕರ ಘಟನೆ ನಡೆದಿರುವುದಕ್ಕೆ ಭ್ರಷ್ಟಾಚಾರವೇ ಕಾರಣ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು.

ನಗರದ ವೀರಾಪುರ ಓಣಿಯಲ್ಲಿ ಕೊಲೆಗೀಡಾದ ಅಂಜಲಿ ಅವರ ಮನೆಗೆ ಭಾನುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಪೊಲೀಸ್‌ ಇಲಾಖೆಯವರು ತಮಗೆ ಬೇಕಾಗಿರುವ ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಳ್ಳುವುದಕ್ಕೆ ರಾಜಕಾರಣಗಳಿಗೆ ಹಣ ನೀಡುತ್ತಿದ್ದಾರೆ. ಆ ಹಣವನ್ನು ಮತ್ತೆ ಸಂಗ್ರಹಿಸಿಕೊಳ್ಳಲು ಅಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ’ ಎಂದು ಆರೋಪಿಸಿದರು.

ನಾಳೆ ಹುಬ್ಬಳ್ಳಿಗೆ ಸಚಿವ ಪರಮೇಶ್ವರ
ಗೃಹ ಸಚಿವ ಜಿ.ಪರಮೇಶ್ವರ್ ಅವರು ಮೇ 20ರಂದು ಹುಬ್ಬಳ್ಳಿಗೆ ಆಗಮಿಸುವರು. ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಿಂದ ವಿಮಾನದ ಮೂಲಕ ಹೊರಟು ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿಗೆ ತಲುಪುವರು. ಸಂಜೆ 7ರವರೆಗೂ ವಿವಿಧ ಸಭೆಗಳಲ್ಲಿ ಪಾಲ್ಗೊಂಡು ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.

‘ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳಲ್ಲಿ ಗಾಂಜಾ ಮತ್ತು ಅಕ್ರಮವಾಗಿ ಮದ್ಯಮಾರಾಟ ಪ್ರಕರಣಗಳು ಹೆಚ್ಚಾಗುತ್ತಿವೆ. ಅಪರಾಧ ಪ್ರಕರಣಗಳನ್ನು ಮಟ್ಟಹಾಕಲು ಇಲಾಖೆಯ ಕೆಳಹಂತದ ಪೊಲೀಸರನ್ನು ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಮಾಡುವ ವ್ಯವಸ್ಥೆ ಬರಬೇಕು. ಇದರಿಂದ ಮಾತ್ರ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು’ ಎಂದು ಹೇಳಿದರು.

‘ಈಗ ಚುನಾವಣೆ ಮುಗಿದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು. ಹತ್ಯೆಗೀಡಾದ ಅಂಜಲಿ ಅವರ ಕುಟುಂಬಕ್ಕೆ ನೆರವಾಗಲು ಕೂಡಲೇ ಹುಬ್ಬಳ್ಳಿಯ ಸೋನಿಯಾಗಾಂಧಿ ನಗರದಲ್ಲಿ ಮನೆಯೊಂದನ್ನು ನಿರ್ಮಿಸಿ ಕೊಡಬೇಕು. ಅಂಜಲಿ ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ಇದೇ ಜಾಗದಲ್ಲಿ ಅಲ್ಪಸಂಖ್ಯಾತರಿದ್ದರೆ ಈಗಾಗಲೇ ಪರಿಹಾರ ಘೋಷಣೆ ಮಾಡಿರುತ್ತಿದ್ದರು. ಈ ವಿಚಾರದಲ್ಲಿ ಸರ್ಕಾರ ಕಣ್ಣೊರೆಸುವ ತಂತ್ರ ಬಿಡಬೇಕು’ ಎಂದು ಆಗ್ರಹಿಸಿದರು.

ಮಹಾನಗರ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಪ್ರಭು ನವಲಗುಂದಮಠ ಅನೂಪ ಬಿಜವಾಡ ಮಂಜುನಾಥ ಕಾಟ್ಕರ್‌ ಇದ್ದರು.

ಆರ್ಥಿಕ ನೆರವು

ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು ಹುಬ್ಬಳ್ಳಿಯಲ್ಲಿ ಕೊಲೆಗೀಡಾದ ಅಂಜಲಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಭಾನುವಾರ ಸಾಂತ್ವನ ಹೇಳಿದರು. ಇದೇ ವೇಳೆ ಅಂಜಲಿ ಅವರ ಅಜ್ಜಿ ಗಂಗಮ್ಮ ಅವರಿಗೆ ಆರ್ಥಿಕ ನೆರವು ನೀಡಿದರು.

‘ಹದಗೆಟ್ಟ ಕಾನೂನು ಸುವ್ಯವಸ್ಥೆ’

ಹುಬ್ಬಳ್ಳಿ: ‘ಮನೆಗೆ ನುಗ್ಗಿ ಯುವತಿಯನ್ನು ಕೊಲೆ ಮಾಡಿದ ಘಟನೆಯಿಂದ ಜನರು ಆತಂಕಗೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಆರೋಪಿಸಿದರು.

ಇಲ್ಲಿನ ವೀರಾಪುರ ಓಣಿಯಲ್ಲಿ ಮೃತ ಅಂಜಲಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಈ ಘಟನೆಗೆ ಸಂಬಂಧಿಸಿ ಡಿಸಿಪಿ ಹಾಗೂ ಇನ್‌ಸ್ಪೆಕ್ಟರ್‌ ತಲೆದಂಡ ಸರಿಯಾದ ಕ್ರಮವಲ್ಲ. ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು. ಗೃಹ ಇಲಾಖೆಯಿಂದ ಲೋಪ ಎಲ್ಲಿಯಾಗಿದೆ ಎಂಬುದನ್ನು ಪತ್ತೆ ಮಾಡಿ ಕ್ರಮ ಜರುಗಿಸಬೇಕು’ ಎಂದು ಹೇಳಿದರು.

‘ನಿದ್ರಾವಸ್ಥೆಯಲ್ಲಿ ನಾಯಕರು ’

ಹುಬ್ಬಳ್ಳಿ: ‘ನಗರದಲ್ಲಿ ಅಂಜಲಿ ಅಂಬಿಗೇರ ಕೊಲೆಯಾದ ಮೂರು ದಿನಗಳವರೆಗೂ ಕಾಂಗ್ರೆಸ್‌ ನಾಯಕರು ನಿದ್ರಾವಸ್ಥೆಯಲ್ಲಿದ್ದರು. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ ಬಳಿಕ ಕೊಲೆಗೀಡಾದ ಯುವತಿಯ ಕುಟುಂಬಸ್ಥರನ್ನು ಕಾಂಗ್ರೆಸ್‌ ನಾಯಕರು ಭೇಟಿ ಮಾಡಿದ್ದಾರೆ‘ ಎಂದು ಮಹಾನಗರ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ತಿಳಿಸಿದ್ದಾರೆ.

‘ಹಿಂದುಳಿದ ವರ್ಗದ ಯುವತಿಯ ಕೊಲೆಯಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೌಜನ್ಯಕ್ಕಾದರೂ ಒಂದು ಪ್ರತಿಕ್ರಿಯೆ ನೀಡಿಲ್ಲ. ಬಡ ಕುಟುಂಬಕ್ಕೆ ಅಂಜಲಿ ಆಧಾರಸ್ತಂಭವಾಗಿದ್ದಳು. ಈ ಬಡ ಕುಟುಂಬಕ್ಕೆ ನೆರವಿನ ಅಗತ್ಯವಿದೆ. ಕೂಡಲೇ ಆರೋಪಿಯ ಮೇಲೆ ಕಠಿಣ ಕ್ರಮ ಜರುಗಿಸಬೇಕು’ ಒತ್ತಾಯಿಸಿದ್ದಾರೆ.

ಅಮಾನತು ಆದೇಶ ಹಿಂಪಡೆಯಲು ಆಗ್ರಹ
‘ದಕ್ಷ ಅಧಿಕಾರಿ ಡಿಸಿಪಿ ರಾಜೀವ್‌ ಅವರನ್ನು ಅಮಾನತು ಮಾಡಿರುವ ಆದೇಶವನ್ನು ಹಿಂಪಡೆಯಬೇಕು‘ ಎಂದು ಸಮತಾ ಸೇನಾ ಕನ್ನಡ ರಕ್ಷಣಾ ಸೇನೆ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕೈಗಾರಿಕೋದ್ಯಮಿಗಳ ಸಂಘ ಒತ್ತಾಯಿಸಿವೆ. ‘ವೈಯಕ್ತಿಕ ನೆಲೆಗಟ್ಟಿನಲ್ಲಿ ನಡೆದ ನೇಹಾ ಮತ್ತು ಅಂಜಲಿ ಕೊಲೆ ಪ್ರಕರಣಗಳನ್ನು ಗುರಿಯಾಗಿಸಿಕೊಂಡು ದಕ್ಷ ಅಧಿಕಾರಿಯನ್ನು ಅಮಾನತು ಮಾಡಿರುವುದು ಸರಿಯಲ್ಲ’ ಎಂದು ಪದಾಧಿಕಾರಿಗಳಾದ ಗುರುನಾಥ ಉಳ್ಳಿಕಾಶಿ ಕವಿತಾ ನಾಯ್ಕರ ರೇವಣಸಿದ್ದಪ್ಪ ಹೊಸಮನಿ ಮಂಜಣ್ಣ ಉಳ್ಳಿಕಾಶಿ ರವಿ ಕದಂ ಸಂಜು ಹಂಜಗಿ ದೇವಣ್ಣ ಇಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು ಹುಬ್ಬಳ್ಳಿಯಲ್ಲಿ ಕೊಲೆಯಾದ ಅಂಜಲಿ ಅಂಬಿಗೇರ ಮನೆಗೆ ಭಾನುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು
ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು ಹುಬ್ಬಳ್ಳಿಯಲ್ಲಿ ಕೊಲೆಯಾದ ಅಂಜಲಿ ಅಂಬಿಗೇರ ಮನೆಗೆ ಭಾನುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT