ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್ಸಿ: ಹುಬ್ಬಳ್ಳಿಯ ಕೃಪಾ ಜೈನ್‌ಗೆ 440ನೇ ರ‍್ಯಾಂಕ್‌

Published 16 ಏಪ್ರಿಲ್ 2024, 16:28 IST
Last Updated 16 ಏಪ್ರಿಲ್ 2024, 16:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಯುಪಿಎಸ್ಸಿಯಲ್ಲಿ 440ನೇ ರ‍್ಯಾಂಕ್‌ ಪಡೆಯುವ ಮೂಲಕ ಇಲ್ಲಿನ ರಾಜನಗರದ ನಿವಾಸಿ ಕೃಪಾ ಜೈನ್  ಜಿಲ್ಲೆಗೆ ಹೆಸರು ತಂದಿದ್ದಾರೆ. 

ಇವರ ತಂದೆ ಅಭಯ ಪಾರ್ಲೆಚಾ ಇಲ್ಲಿನ ಎಪಿಎಂಸಿಯಲ್ಲಿ ದಿನಸಿ ಹೋಲ್‌ಸೇಲ್‌ ವ್ಯಾಪಾರಸ್ಥರಾಗಿದ್ದಾರೆ. ತಾಯಿ ಇಂದಿರಾ ಗೃಹಿಣಿ. ಮೂಲತಃ ಹೊಸಪೇಟೆಯವರು. ಬಹಳ ವರ್ಷಗಳ ಹಿಂದೆಯೇ  ಹುಬ್ಬಳ್ಳಿಗೆ ಬಂದು ನೆಲೆಯೂರಿದ್ದಾರೆ. ಕೃಪಾ ಜೈನ್‌ ಹುಬ್ಬಳ್ಳಿಯಲ್ಲಿಯೇ ಜನಿಸಿದ್ದಾರೆ. ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು  ಡಿ.ಕೆ. ಪಬ್ಲಿಕ್‌ ಸ್ಕೂಲ್‌ನಲ್ಲಿ ಪೂರೈಸಿದ್ದಾರೆ. ಕೆಎಲ್‌ಇ ಸಂಸ್ಥೆಯ ಪ್ರೇರಣಾ ಕಾಲೇಜಿನಲ್ಲಿ 2016ರಲ್ಲಿ ಪಿಯುಸಿ (ವಿಜ್ಞಾನ)  ಓದಿದ್ದಾರೆ. ಪಿಯುಸಿಯಲ್ಲಿ ಜಿಲ್ಲೆಗೆ ರ್‍ಯಾಂಕ್‌ ಪಡೆದಿದ್ದರು. ನಂತರ ಬೆಂಗಳೂರಿನ ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿ.ಇ. ಪೂರ್ಣಗೊಳಿಸಿ, ಸಿಸ್ಕೊ ನೆಟ್‌ವರ್ಕಿಂಗ್‌ ಕಂಪನಿಯಲ್ಲಿ ಕೆಲಸಮಯ ಕೆಲಸ ಮಾಡಿದರು.

ಐ.ಎ.ಎಸ್‌ ಮಾಡಲೇಬೇಕೆಂಬ ಸೆಳೆತ ಜೋರಾಗಿದ್ದರಿಂದ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು, ದೆಹಲಿಗೆ ತೆರಳಿ ಅಧ್ಯಯನ ಮಾಡಿದರು. 2022ರಲ್ಲಿ ಯುಪಿಎಸ್ಸಿಯಲ್ಲಿ ರ್‍ಯಾಂಕ್‌ ಪಡೆದು, ಇಂಡಿಯನ್‌ ರೈಲ್ವೇಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ಹುದ್ದೆಗಿಟ್ಟಿಸಿದ್ದರು. ಪುನಃ ಕಳೆದ ವರ್ಷ ಪರೀಕ್ಷೆ  ಬರೆದು, 440ನೇ ರ‍್ಯಾಂಕ್‌ ಪಡೆದಿದ್ದಾರೆ.

ಕಾಲೇಜಿನಲ್ಲಿ ಸೆಳೆತ:

‘ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಓದುತ್ತಿರುವಾಗ ರೋಟರ‍್ಯಾಕ್ಟ್‌ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. ಬೇರೆ ಬೇರೆ ಸಮುದಾಯದವರ ಜೊತೆ ಬೆರೆಯುತ್ತಿದ್ದೆ. ಸಮುದಾಯ ಸೇವೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಜನಸೇವೆಗಾಗಿ ಏನಾದರೂ ಮಾಡಬೇಕು ಎಂದೆನಿಸಿ, ಐ.ಎ.ಎಸ್‌ ಕಡೆ ವಾಲಿದೆ’ ಎಂದು ಕೃಪಾ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿ.ಇ. ಮುಗಿಸಿದ ನಂತರ ಹುಬ್ಬಳ್ಳಿಯಲ್ಲಾಗಲಿ, ಬೆಂಗಳೂರಿನಲ್ಲಾಗಲಿ ಯುಪಿಎಸ್ಸಿಗೆ ತಯಾರಿ ನಡೆಸಲು ಬೇಕಾದಂತಹ ವಾತಾವರಣ ಇರಲಿಲ್ಲ. ಅದಕ್ಕಾಗಿ, ದೆಹಲಿಗೆ ತೆರಳಿದೆ. ಅಲ್ಲಿ ವಿಷಯ ತಜ್ಞರ ಜೊತೆ ಸಮಾಲೋಚಿಸಿ, ಸ್ಟಡಿ ಸರ್ಕಲ್‌ನಲ್ಲಿ ಸೇರಿಕೊಂಡು ಅಧ್ಯಯನ ಮಾಡಿದೆ. ದಿನಕ್ಕೆ 10–12 ತಾಸು ಅಧ್ಯಯನ ಮಾಡುತ್ತಿದ್ದೆ. ಯಾವುದೇ ಕೋಚಿಂಗ್‌ಗೆ ಹೋಗಲಿಲ್ಲ. ಸ್ವ–ಅಧ್ಯಯನ ಮಾಡಿದೆ. ನನಗೆ ಐ.ಎ.ಎಸ್ ಮಾಡಬೇಕೆಂಬ ಆಸೆ ಇದೆ. ಈ ನನ್ನ ರ‍್ಯಾಂಕ್‌ಗೆ ಐ.ಎ.ಎಸ್‌ ಸಿಗದಿದ್ದರೆ ಮತ್ತೊಮ್ಮೆ ಪರೀಕ್ಷೆ ಬರೆಯುವೆ’ ಎಂದು ಹೇಳಿದರು.

‘ಈ ಫಲಿತಾಂಶ ನೋಡಿ ಖುಷಿಯಾಗಿದೆ. ನನಗಿಂತಲೂ ಹೆಚ್ಚು ಪಾಲಕರಿಗೆ ಖುಷಿಯಾಗಿದೆ. ಸಮುದಾಯ ಸೇವೆ ಮಾಡಲು ಯುಪಿಎಸ್ಸಿ ಉತ್ತಮ ಆಯ್ಕೆ. ಅದಕ್ಕಾಗಿ ಅದನ್ನು ಆಯ್ಕೆ ಮಾಡಿಕೊಂಡಿದ್ದೇನೆ’
– ಕೃಪಾ ಜೈನ್‌ ಯುಪಿಎಸ್ಸಿ 440 ರ‍್ಯಾಂಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT