ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಗ್ ಬಳಕೆ; ಪೌರ ಕಾರ್ಮಿಕರಿಗೆ ತರಬೇತಿ

ಕಸ ವಿಲೇವಾರಿ ಮಾಹಿತಿ ದಾಖಲಿಸುವ ಉದ್ದೇಶ: ವರ್ಷಾಂತ್ಯಕ್ಕೆ ಅಳವಡಿಕೆ ಕಾರ್ಯ ಪೂರ್ಣ
Last Updated 2 ಡಿಸೆಂಬರ್ 2020, 2:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಸ ವಿಲೇವಾರಿಯ ಮಾಹಿತಿ ದಾಖಲಿಸುವ ಉದ್ದೇಶದಿಂದ ಅವಳಿ ನಗರಗಳ ಮನೆಮನೆಗೆ ಆರ್‌ಎಫ್‌ಐಡಿ (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌) ಟ್ಯಾಗ್‌ ಅಳವಡಿಸಲಾಗುತ್ತಿದ್ದು, ಇದರ ಬಳಕೆ ಬಗ್ಗೆ ಪೌರ ಕಾರ್ಮಿಕರಿಗೆ ವಾರ್ಡ್‌ವಾರು ತರಬೇತಿ ನೀಡಲಾಗುತ್ತಿದೆ.

ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಅವಳಿ ನಗರಗಳಲ್ಲಿ ಒಟ್ಟು 2.78 ಲಕ್ಷ ಮನೆಗಳಿಗೆ ಟ್ಯಾಗ್‌ ಅಳವಡಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 1.59 ಲಕ್ಷ ಮನೆಗಳಿಗೆ ಅಳವಡಿಸಲಾಗಿದೆ. ಡಿಸೆಂಬರ್‌ ಅಂತ್ಯದಲ್ಲಿ ಟ್ಯಾಗ್‌ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದ್ದು, ನಂತರ ಎಲ್ಲ ಮನೆಗಳ ತೆರಿಗೆ, ನೀರು ಮತ್ತು ವಿದ್ಯುತ್‌ ಬಿಲ್‌ ಪಾವತಿಯ ಮಾಹಿತಿಯನ್ನು ಟ್ಯಾಗ್‌ ಮೂಲಕವೇ ದಾಖಲಿಸುವ ವ್ಯವಸ್ಥೆ ಜಾರಿಗೆ ಬರಲಿದೆ.

ಮನೆಗಳಿಗೆ ಅಳವಡಿಸಿರುವ ರೀಡರ್‌ ಮೇಲೆ ಟ್ಯಾಗ್ ತೋರಿಸಿದರೆ ಆ ಮನೆಯ ತೆರಿಗೆ, ಆಯಾ ತಿಂಗಳ ವಿದ್ಯುತ್‌ ಮತ್ತು ನೀರಿನ ಬಿಲ್‌ ಪಾವತಿಯಾಗಿದೆಯೋ; ಇಲ್ಲವೊ ಎನ್ನುವ ಮಾಹಿತಿ ಗೊತ್ತಾಗುತ್ತದೆ. ಇದರ ಎಲ್ಲ ಮಾಹಿತಿ ನೀಲಿಜನ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ‘ಇಂಟಿಗ್ರೇಟೆಡ್‌ ಕಮಾಂಡ್‌ ಮತ್ತು ಕಂಟ್ರೋಲ್‌’ ಕೇಂದ್ರದಲ್ಲಿ ದಾಖಲಾಗಲಿದೆ.

ಸಂಪೂರ್ಣ ತಂತ್ರಜ್ಞಾನ ಆಧರಿತ ವ್ಯವಸ್ಥೆಯಾದ ಆರ್‌ಎಫ್‌ಐಡಿ ಬಳಕೆ ಬಗ್ಗೆ ಒಂದು ವಾರದಿಂದ ಪೌರ ಕಾರ್ಮಿಕರಿಗೆ ತರಬೇತಿ ಕೊಡಲಾಗುತ್ತಿದೆ. ಪ್ರತಿದಿನ ಬೆಳಿಗ್ಗೆ ನೌಕರಿಗೆ ಹಾಜರಾಗುವ ಮೊದಲು ಪೌರ ಕಾರ್ಮಿಕರು ಇದರ ಬಗ್ಗೆ ಮಾಹಿತಿ ಪಡೆದುಕೊಂಡು, ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡು ಕೆಲಸಕ್ಕೆ ಹೋಗಬೇಕಿದೆ. ಈ ತರಬೇತಿ ಇನ್ನು 15ರಿಂದ 20 ದಿನ ನಡೆಯುತ್ತದೆ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಯೋಜನೆಯ ವಿಶೇಷ ಅಧಿಕಾರಿ ಎಸ್‌.ಎಚ್‌. ನರೇಗಲ್.

ನೇಫಾನ್‌ ಟೆಕ್ನಾಲಜಿ ಕಾರ್ಪೊರೇಷನ್‌ ಲಿಮಿಟೆಡ್‌ ಸಿಬ್ಬಂದಿ ತರಬೇತಿ ನೀಡುತ್ತಿದ್ದು ರೀಡ್ ಮಾಡುವ ವಿಧಾನ, ರೀಡ್ ಮಾಡಿದಾಗ ‘ಬೀಪ್‌’ ಶಬ್ದ ಬಾರದಿದ್ದರೆ ಏನು ಮಾಡಬೇಕು? ಬ್ಯಾಟರಿ ಚಾರ್ಜ್‌ ಮಾಡುವ ಬಗೆ, ತಾಂತ್ರಿಕ ಸಮಸ್ಯೆಯಾದಾಗ ಯಾರನ್ನು ಸಂಪರ್ಕಿಸಬೇಕು ಎನ್ನುವುದರ ಬಗ್ಗೆ ಮಾಹಿತಿ ಕೊಡಲಾಗುತ್ತಿದೆ.

2018ರಲ್ಲಿ ಆರಂಭವಾದ ಈ ಕಾಮಗಾರಿಗಾಗಿ ಒಟ್ಟು ₹43 ಕೋಟಿ ವೆಚ್ಚ ಮಾಡಲಾಗಿದೆ. ಕಸ ಸಾಗಿಸುವ ಟಿಪ್ಪರ್‌ಗಳಿಗೆ ಟ್ರ್ಯಾಕಿಂಗ್‌ ಸೌಲಭ್ಯ ಕಲ್ಪಿಸಿದ್ದರಿಂದ ವಾಹನ ಯಾವ ಬಡಾವಣೆಯಲ್ಲಿ ಕಸ ವಿಲೇವಾರಿ ಮಾಡುತ್ತಿದೆ ಎನ್ನುವುದು ಕಮಾಂಡೊ ಕೇಂದ್ರದಲ್ಲಿ ದಾಖಲಾಗುತ್ತದೆ.

‘ಅವಳಿ ನಗರಗಳಲ್ಲಿ ಟ್ಯಾಗ್‌ ಅಳವಡಿಕೆ ಕಾರ್ಯ ಅಂತಿಮ ಹಂತ ತಲುಪಿದ್ದು, ಡಿಸೆಂಬರ್‌ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ. ಆ ವೇಳೆಗೆ ಟ್ಯಾಗ್ ಬಳಕೆಯಲ್ಲಿ ಪೌರ ಕಾರ್ಮಿಕರನ್ನು ಸಮರ್ಥರನ್ನಾಗಿಸುವ ಉದ್ದೇಶದಿಂದ ತರಬೇತಿ ನೀಡಲಾಗುತ್ತಿದೆ’ ಎಂದು ನರೇಗಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT