ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ

ದುರ್ಗದಬೈಲ್‌, ಜನತಾ ಬಜಾರ್‌ ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ
Published : 16 ಆಗಸ್ಟ್ 2024, 4:45 IST
Last Updated : 16 ಆಗಸ್ಟ್ 2024, 4:45 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ಬೆಲೆ ಏರಿಕೆ ಬಿಸಿಯ ನಡುವೆಯೂ ನಗರದ ದುರ್ಗದಬೈಲ್‌, ಜನತಾ ಬಜಾರ್‌ ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಜೋರಾಗಿತ್ತು.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಹೂ, ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡರೂ ಖರೀದಿಯಲ್ಲಿ ಕೊರತೆ ಇರಲಿಲ್ಲ. ಇನ್ನೂ ಕಳೆದ ವಾರಕ್ಕೆ ಹೋಲಿಸಿದರೆ ಹೂ, ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೇರಿರುವುದು ಗ್ರಾಹಕರ ಕೈ ಸುಡುವಂತೆ ಮಾಡಿದೆ.

ಹಬ್ಬಕ್ಕೆ ಬೇಕಾದ ಬಾಳೆದಿಂಡು, ಮಾವಿನ ತೋರಣ, ತೆಂಗು, ರೆಡಿಮೇಡ್‌ ಹೂಗಳು, ಉಡಿ ತುಂಬುವ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳ ಖರೀದಿ ಜೋರಾಗಿತ್ತು.

ಹಬ್ಬಕ್ಕೆ ಅಗತ್ಯವಾಗಿ ಬೇಕಾಗುವ ಹಣ್ಣುಗಳ ದರದಲ್ಲಿ ಏರಿಕೆ ಕಂಡು ಬಂತು. ಕೆ.ಜಿ ಸೇಬು ₹300, ಪಚ್ಚಬಾಳೆ ₹40ರಿಂದ ₹50, ಮೋಸಂಬಿ ₹250, ಸೀತಾಫಲ ₹300ರಿಂದ ₹350, ದಾಳಿಂಬೆ ₹220ರಂತೆ ಮಾರಾಟವಾದವು.

ಬಾಳೆಹಣ್ಣಿನ ದರ ಏರಿಕೆ: ‘ಏಲಕ್ಕಿ ಬಾಳೆಹಣ್ಣು ಕೆ.ಜಿಗೆ ₹100ರಿಂದ ₹120ರ ವರೆಗೆ ಮಾರಾಟವಾಯಿತು. ಕೆಲವೆಡೆ ವಿಪರೀತ ಮಳೆಯಾದ ಕಾರಣ ಮಾರುಕಟ್ಟೆಯಲ್ಲಿ ಅಗತ್ಯದಷ್ಟು ದಾಸ್ತಾನಿಲ್ಲ. ಹಾಗಾಗಿ ದರ ಏರಿಕೆಯಾಗಿದೆ. ಸದ್ಯ ಬೆಂಗಳೂರು, ಮಂಗಳೂರು, ಮಹಾರಾಷ್ಟ್ರದಿಂದ ಹಣ್ಣುಗಳು ಬಂದಿವೆ. ಕಳೆದ ವಾರ ಪಚ್ಚಬಾಳೆ ಕ್ವಿಂಟಲ್‌ಗೆ ₹1,800 ದರವಿತ್ತು. ಈ ವಾರ ₹2,500 ಇದೆ. ಇಷ್ಟು ಕೊಟ್ಟು ಖರೀದಿ ಮಾಡುತ್ತೇವೆಂದರೂ ದಾಸ್ತಾನಿಲ್ಲ. ಶೇ 40ರಷ್ಟು ಹಣ್ಣುಗಳ ದರ ದಿಢೀರ್‌ ಏರಿಕೆಯಾಗಿದೆ’ ಎಂದು ಹುಬ್ಬಳ್ಳಿ– ಧಾರವಾಡ ಬೀದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಾಫರ್‌ ಮುಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು. 

₹600 ತಲುಪಿದ ಕನಕಾಂಬರ ದರ: ಕೆ.ಜಿ ಕನಕಾಂಬರ 600, ಬಟನ್‌ ರೋಜ್‌ ₹300ರಿಂದ ₹600, ಚೆಂಡು ಹೂ 550, ಸೇವಂತಿಗೆ ಹಾಗೂ ಕಾಕಡ ಮಲ್ಲಿಗೆ ಮಾರಿಗೆ ₹80ರಿಂದ ₹100, ಡಚ್‌ ಗುಲಾಬಿ ಕಟ್ಟು (20 ಹೂಗಳು) ₹300ರಿಂದ ₹350ರಂತೆ ಮಾರಾಟವಾದವು. 

ಸಣ್ಣ ಗಾತ್ರದ ಕೇದಿಗೆ ಕಟ್ಟು ₹80, ಮಧ್ಯಮ ₹100 ಹಾಗೂ ದೊಡ್ಡ ಗಾತ್ರಕ್ಕೆ ₹200ರಿಂದ ₹250 ತನಕ ದರವಿತ್ತು. ತರಕಾರಿ, ಸೊಪ್ಪಿನ ದರದಲ್ಲೂ ತುಸು ಏರಿಕೆ ಇತ್ತು.

ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಹುಬ್ಬಳ್ಳಿಯ ಜನತಾ ಬಜಾರ್‌ನಲ್ಲಿ ಸಾರ್ವಜನಿಕರು ಗುರುವಾರ ವಿವಿಧ ಹಣ್ಣುಗಳನ್ನು ಖರೀಸಿದರು– ಪ್ರಜಾವಾಣಿ ಚಿತ್ರ
ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಹುಬ್ಬಳ್ಳಿಯ ಜನತಾ ಬಜಾರ್‌ನಲ್ಲಿ ಸಾರ್ವಜನಿಕರು ಗುರುವಾರ ವಿವಿಧ ಹಣ್ಣುಗಳನ್ನು ಖರೀಸಿದರು– ಪ್ರಜಾವಾಣಿ ಚಿತ್ರ
ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಹುಬ್ಬಳ್ಳಿಯ ಜನತಾ ಬಜಾರ್‌ನಲ್ಲಿ ಮಹಿಳೆಯರು ಗುರುವಾರ ಬಾಳೆದಿಂಡುಗಳ ಖರೀದಿಯಲ್ಲಿ ತೊಡಗಿದ್ದರು– ಪ್ರಜಾವಾಣಿ ಚಿತ್ರ
ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಹುಬ್ಬಳ್ಳಿಯ ಜನತಾ ಬಜಾರ್‌ನಲ್ಲಿ ಮಹಿಳೆಯರು ಗುರುವಾರ ಬಾಳೆದಿಂಡುಗಳ ಖರೀದಿಯಲ್ಲಿ ತೊಡಗಿದ್ದರು– ಪ್ರಜಾವಾಣಿ ಚಿತ್ರ

ಮಳಿಗೆಗಳಲ್ಲಿ ಜನದಟ್ಟಣೆ 

ಸಿಹಿ ತಿಂಡಿ ಅಲಂಕಾರಿಕ ವಸ್ತುಗಳ ಅಂಗಡಿ ಬಟ್ಟೆ ಒಡವೆ ಅಂಗಡಿ ದಿನಸಿ ಅಂಗಡಿಗಳಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚು ಜನರು ಕಂಡು ಬಂದರು. ಮಹಿಳೆಯರು ಯುವತಿಯರು ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಹೊಸ ಸೀರೆ ಬಟ್ಟೆಗಳನ್ನು ಬಳೆಗಳನ್ನು ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡಿದರು.

ಮಾರುಕಟ್ಟೆಯಲ್ಲಿರುವ ವರಮಹಾಲಕ್ಷ್ಮಿ ಪೂಜೆಗೆ ಅವಶ್ಯವಿರುವ ಮಹಾಲಕ್ಷ್ಮಿಯ ಆಕರ್ಷಕ ಮೂರ್ತಿಗಳು ಜನರನ್ನು ಸೆಳೆಯುತ್ತಿದ್ದವು. ಮೂರ್ತಿಗಳು ₹180 ರಿಂದ ₹2 ಸಾವಿರ ವರೆಗೂ ಮಾರಾಟವಾಗುತ್ತಿದ್ದವು. ಬೆಳ್ಳಿ ಮುಖವಾಡ: ₹3 ಸಾವಿರದಿಂದ ₹15 ಸಾವಿರದ ವರೆಗಿನ ಮುಖವಾಡಗಳು ಪಟ್ಟಣದ ಆಭರಣದ ಅಂಗಡಿಗಳಲ್ಲಿ ಮಾರಾಟವಾದವು. 100 ಗ್ರಾಂ ನಿಂದ ಅರ್ಧ ಕೆಜಿಗೂ ಹೆಚ್ಚು ತೂಕದ ಮುಖವಾಡಗಳನ್ನು ಅಂಗಡಿಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಅಲ್ಲದೆ ಅಲಂಕಾರಿಕ ವಸ್ತುಗಳಿಂದ ತಯಾರಿಸಿದ ಲಕ್ಷ್ಮಿ ಮೂರ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದವು. ಪಟ್ಟಣದ ಬಳೆ ಅಂಗಡಿಗಳಲ್ಲಿ ನೂಕು ನುಗ್ಗಲಿತ್ತು.

ಬೆಲೆ ಏರಿಕೆಯಿದ್ದರೂ ಹಬ್ಬ ಮಾಡಲೇಬೇಕಲ್ಲವೆ. ಖರೀದಿಯಲ್ಲಿ ತುಸು ಹೆಚ್ಚು ಕಮ್ಮಿ ಮಾಡಿಕೊಂಡು ಆಚರಿಸೋಣ ಅಂತ ತೀರ ಅಗತ್ಯ ವಸ್ತುಗಳನ್ನು ಖರೀದಿಸಿದ್ದೇವೆ.
-ಶೃತಿ ಬಿ., ಹುಬ್ಬಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT