ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಲ್‌ ವಿಡಿಯೊ; ವ್ಯಾಕ್ಸಿನ್‌ ಅಡ್ಡ ಪರಿಣಾಮವಲ್ಲ: ಡಿಎಚ್‌ಒ

Last Updated 9 ಜೂನ್ 2021, 16:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‌ ವ್ಯಾಕ್ಸಿನ್‌ ಹಾಕಿಸಿಕೊಂಡ ಭುಜದ ಭಾಗದಲ್ಲಿ ಎಲ್‌ಇಡಿ ಬಲ್ಬ್‌(ಎಸಿಡಿಸಿ–ರಿಚಾರ್ಜೇಬಲ್‌) ದೀಪ ಹೊತ್ತಿಕೊಂಡು ವೈರಲ್‌ ಆಗಿದ್ದ ವಿಡಿಯೊಕ್ಕೆ ತಾರ್ಕಿಕ ಅಂತ್ಯ ದೊರೆತಿದೆ.

ಗೋಕುಲ ರಸ್ತೆಯ ಬಸವೇಶ್ವರ ನಗರದ ಸುಮಂತ್‌ ಕುಲಕರ್ಣಿ ಮತ್ತು ಅವರ ಸಹೋದರಿ ದೀಕ್ಷಾ ಮಂಗಳವಾರ ಕೋವಿಡ್‌ ಲಸಿಕೆ ಹಾಕಿಸಿಕೊಂಡು ಬಂದಿದ್ದರು. ನಂತರ ಸುಮಂತ್‌ ಲಸಿಕೆ ಹಾಕಿದ ಭಾಗದಲ್ಲಿ ಎಲ್‌ಇಡಿ ಬಲ್ಬ್‌ ಹಿಡಿದಾಗ ದೀಪ ಉರಿದಿತ್ತು. ಆ ವಿಡಿಯೊ ಕೆಲವು ಜಾಲತಾಣದಲ್ಲಿ ಹರಿದಾಡಿ, ವೈರಲ್‌ ಆಗಿತ್ತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಧಾರವಾಡ ಡಿಎಚ್‌ಒ ಯಶವಂತ ಮದೀನಕರ್‌, ‘ಪರಿಶೀಲನೆಗಾಗಿ ವೈದ್ಯಾಧಿಕಾರಿ, ಎಂಜಿನಿಯರ್‌ ಹಾಗೂ ಪೊಲೀಸರ ತಂಡವನ್ನು ಸುಮಂತ್‌ ಮನೆಗೆ ಕಳುಹಿಸಲಾಗಿತ್ತು. ಲಸಿಕೆ ಹಾಕಿದ ತೋಳಿನ ಭಾಗದಲ್ಲಿ ದೀಪ ಉರಿಯಲಿಲ್ಲ. ಅದು ರಿಚಾರ್ಜೇಬಲ್‌ ಆಗಿದ್ದರಿಂದ, ತೇವಾಂಶವಿದ್ದ ಜಾಗದಲ್ಲಿ ಅಥವಾ ದೇಹದ ಭಾಗ ಗಟ್ಟಿಯಾಗಿ ಉಜ್ಜಿದಾಗ ಅಲ್ಲಿ ಎಲೆಕ್ಟ್ರೊಮ್ಯಾಗ್ನೆಟ್‌ (ವಿದ್ಯುತ್ಕಾಂತೀಯ ಶಕ್ತಿ) ಉತ್ಪತ್ತಿಯಾಗುತ್ತದೆ. ದೀಪ ಹೊತ್ತಿದ್ದು ಈ ಕಾರಣಕ್ಕೆ.ಲಸಿಕೆಯಿಂದಲ್ಲ’ ಎಂದು ಸ್ಪಷ್ಟ ಪಡಿಸಿದರು.

‘ದೇಹಕ್ಕೆ ಎಲ್‌ಇಡಿ ಬಲ್ಬ್‌ ಹಿಡಿದರೆ ಲೈಟ್‌ ಆಗುವ ವಿಡಿಯೊ ವಾಟ್ಸ್‌ಆ್ಯಪ್‌, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಇವೆ. ಅಂತಹ ವಿಡಿಯೊ ನನ್ನ ಮೊಬೈಲ್‌ಗೆ ಬಂದಿತ್ತು. ವ್ಯಾಕ್ಸಿನ್‌ ಹಾಕಿಸಿಕೊಂಡ ನಂತರ ಕುತೂಹಲಕ್ಕಾಗಿ ಈ ಪ್ರಯೋಗ ಮಾಡಿದೆ. ದೀಪ ಹೊತ್ತಿಕೊಂಡಿತು. ಸ್ನೇಹಿತರಿಗೆ ವಿಡಿಯೊ ಕಳಿಸಿದ್ದೆ. ಅದು ವೈರಲ್‌ ಆಗಬಹುದು ಎಂಬ ನಿರೀಕ್ಷೆ ಇರಲಿಲ್ಲ’ ಎಂದು ಸುಮಂತ್‌ ಹೇಳಿದರು.

‘ತೇವಾಂಶವಿದ್ದ ದೇಹದ ಭಾಗದಲ್ಲಿ ಚಾರ್ಜ್‌ ಆಗಿರುವ ಎಲ್‌ಇಡಿ ಬಲ್ಬ್‌ ಇಟ್ಟರೆ ಅದು ಹೊತ್ತಿಕೊಳ್ಳುತ್ತದೆ. ಈಗಾಗಲೇ ಆ ಕುರಿತು ವೈದ್ಯರು, ಎಂಜಿನಿಯರ್‌ ಮತ್ತು ಪೊಲೀಸರು ಬಂದು ಪರಿಶೀಲಿಸಿ ಹೋಗಿದ್ದಾರೆ. ಕುತೂಹಲಕ್ಕಾಗಿ ಮಾಡಿರುವ ಪ್ರಯೋಗವನ್ನೇ ಹೀಗೆಲ್ಲ ಪ್ರಚಾರ ಮಾಡುವುದು ಸರಿಯಲ್ಲ’ ಎಂದು ಸ್ಥಳೀಯ ನಿವಾಸಿಗಳಾದ ನವೀನ ವಸ್ತ್ರದ, ಪುರಣಗಿ ಮತ್ತು ಸಿದ್ದಣ್ಣ ಜಾಬಿನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT