ಹುಬ್ಬಳ್ಳಿ: ‘ಪ್ರಸ್ತುತ ದೇಶದ ರಕ್ಷಣೆ ವಿಷಯದಲ್ಲಿ ನಮ್ಮ ಶೌರ್ಯದ ಇತಿಹಾಸ ಪ್ರೇರಣೆಯಾಗಬೇಕು. ಇಂದಿನ ಆಧುನಿಕ ಕಾಲದಲ್ಲಿ ಹಿಂದೂಗಳ ಶೌರ್ಯ ಪ್ರಕಟವಾಗಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಹೇಳಿದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳದ ಹುಬ್ಬಳ್ಳಿ ಮಹಾನಗರ ಜಿಲ್ಲಾ ಘಟಕದ ವತಿಯಿಂದ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಶೌರ್ಯ ಜಾಗರಣ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ದೇಶದ ಸ್ವಾತಂತ್ರ್ಯಕ್ಕಾಗಿ 2,500 ವರ್ಷಗಳ ಕಾಲ ನಡೆದ ಹೋರಾಟಕ್ಕೆ ಇರುವಷ್ಟೇ ಮಹತ್ವ, ಸ್ವಾತಂತ್ರ ಸಿಗುವುದಕ್ಕೂ ಮುನ್ನ ಒಂದು ವರ್ಷ ಕ್ರಾಂತಿಕಾರಿಗಳಿಂದ ನಡೆದ ಹೋರಾಟಕ್ಕೂ ಅಷ್ಟೇ ಮಹತ್ವ ಇದೆ. ಕ್ರಾಂತಿಕಾರಿಗಳ ಹೋರಾಟ, ಬಲಿದಾನವನ್ನು ಸ್ಮರಿಸಬೇಕು’ ಎಂದರು.
‘ಸುಭಾಷ್‌ಚಂದ್ರ ಬೋಸ್ ಕ್ರಾಂತಿಕಾರಿಯಾಗಲು ವಿ.ಡಿ.ಸಾವರ್ಕರ್ ಕಾರಣ. ಸ್ವಾತಂತ್ರ್ಯ ಹೋರಾಟದಲ್ಲಿ ಆರು ಲಕ್ಷ ಕ್ರಾಂತಿಕಾರಿಗಳು ಭಾಗವಹಿಸಿದ್ದರು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಗಾಂಧೀಜಿ ಅವರ ಭಾವಚಿತ್ರದ ಜತೆಗೆ ಬೋಸ್ ಮತ್ತು ಸಾವರ್ಕರ್ ಅವರ ಭಾವಚಿತ್ರವನ್ನೂ ಇಡಬೇಕು’ ಎಂದು ಹೇಳಿದರು.
‘ಮತಾಂತರ, ಗೋಹತ್ಯೆ, ಲವ್ ಜಿಹಾದ್ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಹೊರಗಿನವರಷ್ಟೇ ನಾವೂ ಕಾರಣ. ಇದನ್ನು ಸರಿಪಡಿಸಿಕೊಳ್ಳಬೇಕು. ವಯಸ್ಸಾದ ಗೋವನ್ನು ಮಾರಾಟ ಮಾಡುವ ಬದಲು ಅದನ್ನು ಸಾಕಲು ಮುಂದೆ ಬರುವವರ ಸಂಖ್ಯೆಯೂ ಹೆಚ್ಚಾಗಬೇಕು’ ಎಂದರು.
‘ದೇಶದ ಇತಿಹಾಸ ಸೋಲಿನ ಇತಿಹಾಸವಲ್ಲ. ಅದು ಸಂಘರ್ಷದಿಂದ ಕೂಡಿದೆ. ಜಗತ್ತಿನಲ್ಲಿ ಆಗಿ ಹೋಗಿರುವ ಎಲ್ಲ ನಾಗರಿಕತೆಗಳೂ ನಾಶವಾಗಿವೆ. ಆದರೆ, ನಮ್ಮ ಶೌರ್ಯದ ಕಾರಣಕ್ಕಾಗಿ ಸಿಂಧೂ ನಾಗರಿಕತೆ ಮಾತ್ರ ಇಂದಿಗೂ ಉಳಿದಿದೆ’ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್‌ನ ಧರ್ಮಚಾರ್ಯ ಸಂಪರ್ಕ, ಮಂದಿರ, ಅರ್ಚಕ ಪ್ರಮುಖ ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿ, 2024ಕ್ಕೆ ವಿಶ್ವ ಹಿಂದೂ ಪರಿಷತ್‌ಗೆ 60 ವರ್ಷಗಳಾಗಲಿವೆ. ಇದು ವಿಶ್ವದಲ್ಲಿ ಅತಿ ದೊಡ್ಡ ಸಂಘಟನೆ. ದೇಶದ 70 ಸಾವಿರ ಗ್ರಾಮಗಳು, 32 ದೇಶಗಳಲ್ಲಿ ಸಂಘಟನೆ ಇದೆ ಎಂದರು.
ಸುರಕ್ಷತೆ, ಸಂಸ್ಕಾರ, ಸೇವೆಯ ದೃಷ್ಟಿಯಿಂದ ಸಂಘಟನೆ ಕೆಲಸ ಮಾಡುತ್ತಿದೆ. 85 ಸಾವಿರದಿಂದ 90 ಸಾವಿರ ಹಸುಗಳು ಕಸಾಯಿಖಾನೆಗೆ ಹೋಗುವುದನ್ನು ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ತಡೆದಿದ್ದಾರೆ. ನಮ್ಮ ಪರಂಪರೆ ಬಗ್ಗೆ ಜಾಗೃತಿ ಮೂಡಿಸಲು ಕಳೆದ ಸೆಪ್ಟೆಂಬರ್‌ನಲ್ಲಿ ಜಾಗೃತಿ ಯಾತ್ರೆ ಆರಂಭಿಸಲಾಗಿತ್ತು. ಅದು ಈ ಅಕ್ಟೋಬರ್‌ಗೆ ಜಾಗೃತಿ ಯಾತ್ರೆ ಮಾಡಲಾಗಿದೆ ಎಂದು ಹೇಳಿದರು.
ಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಮಹೇಶ ನಾಲವಾಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಗೋಳದ ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಹುಬ್ಬಳ್ಳಿ ಮಹಾನಗರದ ಅಧ್ಯಕ್ಷ ಸಂಜಯ ಬಡಸ್ಕರ, ರಘು ಯಲಕ್ಕನವರ, ರಮೇಶ ಕದಂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.