ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನಬೆಟಗೇರಿ: ನೀರಿಗಾಗಿ ಗ್ರಾಮಸ್ಥರ ಪರದಾಟ

15 ದಿನಕ್ಕೊಮ್ಮೆ ನೀರು ಪೂರೈಕೆ; ನಿತ್ಯ 12 ಲಕ್ಷ ಲೀಟರ್ ನೀರಿನ ಅಗತ್ಯತೆ
ರಮೇಶ ಓರಣಕರ
Published 18 ಮೇ 2024, 6:48 IST
Last Updated 18 ಮೇ 2024, 6:48 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿಯಲ್ಲಿ 10–15 ದಿನಕ್ಕೊಮ್ಮೆ ಮಲಪ್ರಭಾ ನದಿಯಿಂದ ಕುಡಿಯವ ನೀರು ಪೂರೈಕೆಯಾಗುತ್ತಿದೆ. ನೀರು ಸಮರ್ಪಕವಾಗಿ ಬಾರದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಹೆಬ್ಬಳ್ಳಿ 18,000 ಜನಸಂಖ್ಯೆ ಹೊಂದಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 12 ವಾರ್ಡ್‌ಗಳಿದ್ದು, 32 ಸದಸ್ಯರು ಇದ್ದಾರೆ. ಗ್ರಾಮದಲ್ಲಿ 1.50 ಲಕ್ಷ  ಮತ್ತು 20 ಸಾವಿರ ಸಾಮರ್ಥ್ಯದ ಮೇಲ್ಮಟ್ಟದ ಹಾಗೂ ತಳಮಟ್ಟದ ಆರು ನೀರಿನ ಟ್ಯಾಂಕ್‌ಗಳಿವೆ. ನಿತ್ಯ 12 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇದ್ದು, ಸದ್ಯ ಅಮ್ಮಿನಬಾವಿ ಜಾಕ್‌ವೆಲ್‌ನಿಂದ 9 ಲಕ್ಷ ಲೀಟರ್ ಮಾತ್ರ ಕುಡಿಯುವ ನೀರು ಪೂರೈಕೆಯಾಗುತ್ತಿದೆ.

ಹೆಬ್ಬಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಕ್ಕೆ ಇಲ್ಲಿಂದ ಸರಬರಾಜಾಗುವ ನೀರಿನ ಸಂಪ್‌ನ ಪೈಪ್‌ಗೆ ಎರಡು ಮಷಿನ್ ಅಳವಡಿಸಲಾಗಿದ್ದು, ಇದರಲ್ಲಿ ಒಂದು ಸರಿಯಾಗಿದ್ದು, ಇನ್ನೊಂದು ಕೆಟ್ಟಿದೆ. ಅಧಿಕಾರಿಗಳು ಇದನ್ನು ಗಮನಿಸಿ ಸರಿಪಡಿಸಲು ಕ್ರಮ ಕೈಗೊಳ್ಳದೇ ಇರುವುದು ಬೇಸರ ತರಿಸಿದೆ  ಎಂದು ಜನರು ಹೇಳಿದರು.

ಸವದತ್ತಿಯ ಮಲಪ್ರಭಾ ಡ್ಯಾಂನಲ್ಲಿ ನೀರು ತಳಮಟ್ಟ ತಲುಪಿದ್ದು, ಸರಿಯಾಗಿ ನೀರಿನ ಪೂರೈಕೆಯಾಗುತ್ತಿಲ್ಲ ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳಾದ ನಾವು ಜನರಿಗೆ ಏನು ಉತ್ತರ ಹೇಳಬೇಕೆಂದು ತಿಳಿಯದಾಗಿದೆ. ನೀರಿನ ಸಮಸ್ಯೆಗೆ ಪರಿಹಾರ ಹುಡುಕಿ ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯರು ಆಗ್ರಹಿಸಿದ್ದಾರೆ.

ಗ್ರಾಮದ ರವಿವಾರ ಪೇಟೆಯ ನೀರಿನ ಟ್ಯಾಂಕ್‌ಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಈ ಹಿಂದೆ ಗ್ರಾಮದ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಸಲಾಗುತ್ತಿತ್ತು. ಎಂಟು ತಿಂಗಳಿಂದ ಅದು ಬದಲಾಗಿದ್ದು, ರವಿವಾರ ಪೇಟೆ ಜನರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.

‘ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಗ್ರಾಮದ ಟ್ಯಾಂಕ್‌ಗೆ ನೀರು ಪೂರೈಕೆಗಾಗಿ ಅಳವಡಿಸಿದ್ದ ಮುಖ್ಯ ಪೈಪ್‌ ಲೈನ್ ಹಾಳಾಗಿದ್ದು, ಬದಲಿ ಪೈಪ್ ಹಾಕಬೇಕಿದೆ. ನೀರಿನ ಟ್ಯಾಂಕ್‌ನಲ್ಲಿ ಕಡಿಮೆ ಪ್ರಮಾಣದ ನೀರು ಸಂಗ್ರಹವಾಗುತ್ತಿದೆ. ಅದು ಶಿಥಿಲಾವಸ್ಥೆಯಲ್ಲಿದ್ದು, ನೆಲಸಮ ಮಾಡಿ ಹೆಚ್ಚಿನ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಬೇಕಿದೆ ಎಂದು ಹೆಬ್ಬಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಸುರೇಶ ಬನ್ನಿಗಿಡದ ‘ಪ್ರಜಾವಾಣಿ’ಗೆ ತಿಳಿಸಿದರು.

ಶೀಘ್ರದಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ
‘ಹೆಬ್ಬಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ.  ಅಮ್ಮಿನಬಾವಿಯಿಂದ ಹೆಬ್ಬಳ್ಳಿವರೆಗೆ ಅಳವಡಿಸಲಾದ ಕೆಲ ಪೈಪ್‌ಗಳು ಹಾಳಾಗಿದ್ದು, ಅಲ್ಲಲ್ಲಿ ಒಡೆದು ನೀರು ಪೋಲಾಗುತ್ತಿದೆ. ವಿದ್ಯುತ್‌ ಅಭಾವ ಹಾಗೂ ಇನ್ನಿತರೆ ಸಮಸ್ಯೆಗಳು ಸಹ ಎದುರಾಗುತ್ತಿವೆ. ಶೀಘ್ರದಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಸು, ನೀರು ಸಮರ್ಪಕ ಒದಗಿಸಲು ಕ್ರಮ ಜರುಗಿಸಲಾಗುವುದು’ ಎಂದು ಧಾರವಾಡದ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿ ಆರ್.ಎಂ.ಸೊಪ್ಪಿನಮಠ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT