ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವರತ್ನ’ ಪುನಿತ್‌ಗೆ ಅದ್ಧೂರಿ ಸ್ವಾಗತ

ಯುವರತ್ನ ಚಿತ್ರ ಪ್ರಚಾರ; ಮೂರುವರೆ ತಾಸು ನಿಂತಲ್ಲೇ ನಿಂತು ಅಪ್ಪುವನ್ನು ಕಣ್ತುಂಬಿಸಿಕೊಂಡ ಅಭಿಮಾನಿಗಳು
Last Updated 22 ಮಾರ್ಚ್ 2021, 4:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಟ ಪುನೀತ್‌ ವೇದಿಕೆ ಕಾರ್ಯಕ್ರಮದಲ್ಲಿ ಇದ್ದ ಸಮಯ ಕೇವಲ 15 ರಿಂದ 20 ನಿಮಿಷಗಳು. ಆದರೆ, ಅವರನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಕಾದ ಸಮಯ ಬರೋಬ್ಬರಿ ಮೂರುವರೆ ತಾಸಿಗೂ ಹೆಚ್ಚು ಸಮಯ!!

ಏ. 1ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ‘ಯುವರತ್ನ’ ಚಿತ್ರದ ಪ್ರಚಾರ ಕಾರ್ಯಕ್ರಮ ನಗರದ ಗೋಕುಲ ರಸ್ತೆಯ ಓಯಾಸಿಸ್‌ ಮಾಲ್‌ ಎದುರು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ನಾಯಕ ನಟ ಪುನೀತ್‌ ರಾಜ್‌ಕುಮಾರ್‌ ಮಧ್ಯಾಹ್ನ 3ಕ್ಕೆ ಬಂದು, ಪ್ರಚಾರ ನಡೆಸಲಿದ್ದಾರೆ ಎನ್ನುವ ಸುದ್ದಿ ತಿಳಿದ ಅಭಿಮಾನಿಗಳು, ಓಯಾಸಿಸ್‌ ಮಾಲ್‌ ಎದುರು ತಂಡೋಪ ತಂಡವಾಗಿ ಬಂದಿದ್ದರು.

ಅಪ್ಪುವನ್ನು ಕಣ್ತುಂಬಿಸಿಕೊಳ್ಳಲು ಬಿಸಿಲನ್ನೂ ಲೆಕ್ಕಿಸದೆ ಮಧ್ಯಾಹ್ನ 2ಗಂಟೆಗೇ ಬಂದು ರಸ್ತೆಯಲ್ಲಿ ಜಮಾಯಿಸಿ ನಿಂತಿದ್ದರು. ಮಕ್ಕಳು, ವೃದ್ಧರು, ಯುವಕ–ಯುವತಿಯರು ಎನ್ನದೆ ಎಲ್ಲರೂ ಅಪ್ಪುವನ್ನು ನೋಡಲು ಕಾತರರಾಗಿದ್ದರು. ಸಂಜೆ 5.40ರ ವೇಳೆಗೆ ಅಲ್ಲಿಯೇ ಹಾಕಲಾಗಿದ್ದ ಪುಟ್ಟ ವೇದಿಕೆಗೆ ಪುನೀತ್‌ ಬರುತ್ತಿದ್ದಂತೆ, ಪಟಾಕಿಗಳ ಸದ್ದು ಜೋರಾಗಿತ್ತು. ಅಪ್ಪು.. ಅಪ್ಪು.. ಅಪ್ಪು.. ಘೋಷಣೆ ಮುಗಿಲು ಮುಟ್ಟಿತ್ತು. ಕೆಲವು ಯುವಕರಂತೂ ಹುಚ್ಚೆದ್ದು ಕುಣಿದು, ಕುಪ್ಪಳಿಸಿದರು.

ಎರಡು ಕ್ರೇನ್‌ ಮೂಲಕ ಪುಷ್ಪವೃಷ್ಟಿಗೈದು ನಟ ಪುನೀತ್‌ ಅವರನ್ನು ಸ್ವಾಗತಿಸಲಾಯಿತು. 300ಕ್ಕೂ ಹೆಚ್ಚು ಸೇಬುವಿನಿಂದ ಮಾಡಿದ ಬೃಹತ್‌ ಹಾರವನ್ನು ಅಪ್ಪುಗೆ ಹಾಕಿ ಅಭಿನಂದಿಸಿದರು. ಅದೇ ವೇಳೆ ಮುಂಭಾಗದಲ್ಲಿದ್ದ ಸಾವಿರಾರು ಅಭಿಮಾನಿಗಳ ಮೊಬೈಲ್‌ಗಳಲ್ಲಿ ಫೊಟೊ ಸೆರೆಯಾಗುತ್ತಿದ್ದವು. ಯುವರತ್ನ ಚಿತ್ರದ ಡೈಲಾಗ್‌ ಹಾಗೂ ಹಳೆಯ ಚಿತ್ರದ ಹಾಡು ಹೇಳಿ ಪುನೀತ್‌ ಅಭಿಮಾನಿಗಳನ್ನು ರಂಜಿಸಿದರು. ಕೆಲವರು ಡಾ. ರಾಜ್‌ಕುಮಾರ್‌ ಅವರ ಭಾವಚಿತ್ರ ತಂದು, ಅದಕ್ಕೆ ಪುನೀತ್‌ ಅವರ ಹಸ್ತಾಕ್ಷರ ಹಾಕಿಸಿಕೊಂಡರೆ, ಮತ್ತೆ ಕೆಲವರು ಸಿದ್ಧಾರೂಢ ಅಜ್ಜರ ಫೊಟೊ ಕೊಟ್ಟು ಶುಭ ಹಾರೈಸಿದರು.

ವೇದಿಕೆ ಕಾರ್ಯಕ್ರಮ ಮುಗಿಸಿ ತೆರಳುವಾಗ ಅಭಿಮಾನಿಗಳು ಒಮ್ಮೆಲೆ ಮುಗಿಬಿದ್ದು ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದಾಗ, ಪೊಲೀಸರು ಭದ್ರತೆ ದೃಷ್ಟಿಯಿಂದ ಅವರನ್ನು ತಡೆದರು. ಆ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ, ಕೆಲವರು ಆಯತಪ್ಪಿ ಬಿದ್ದ ಘಟನೆಯೂ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಪುನೀತ್‌ ರಾಜ್‌ಕುಮಾರ್‌, ‘ಧಾರವಾಡ ಕೆಸಿಡಿ ಕಾಲೇಜು ಹಾಗೂ ಸುತ್ತಮುತ್ತ 40 ದಿನ ಯುವರತ್ನ ಚಿತ್ರದ ಚಿತ್ರೀಕರಣ ನಡೆದಿದೆ. ಚಿತ್ರದ ಟ್ರೇಲರ್‌ಗೆ ನಿರೀಕ್ಷೆ ಮೀರಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. 1ರಂದು ಚಿತ್ರ ಬಿಡುಗಡೆಯಾಗಲಿದ್ದು, ಇಲ್ಲಿ ತೋರಿದ ಪ್ರೀತಿ, ವಿಶ್ವಾಸ ಚಿತ್ರ ಮಂದಿರದಲ್ಲೂ ತೋರಿಸಬೇಕು’ ಎಂದು ವಿನಂತಿಸಿದರು.

ಐವತ್ತು ವರ್ಷಗಳಿಂದ ನಮ್ಮ ಕುಟುಂಬವನ್ನು ಪ್ರೀತಿಸುತ್ತ, ಪೋಷಿಸುತ್ತಿದ್ದೀರಿ. ನನಗೆ ಹುಬ್ಬಳ್ಳಿ ಭಾಷೆ, ಊಟ ಹಾಗೂ ಜನರು ತುಂಬಾ ಇಷ್ಟ. ಸಿದ್ಧಾರೂಢ ಸ್ವಾಮೀಜಿ ನಮ್ಮ ಕುಟುಂಬದ ಗುರುಗಳು. ನಗರದ ಚನ್ನಮ್ಮ ವೃತ್ತದಲ್ಲಿ ಅಪ್ಪಾಜಿ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಚಿತ್ರದ ಚಿತ್ರಿಕರಣ ನಡೆದಿದ್ದು, ಸದಾ ಕನ್ನಡಿಗರ ಹೃದಯದಲ್ಲಿ ಆ ಹಾಡು ನೆಲೆಸಿದೆ’ ಎಂದು ಅಭಿಪ್ರಾಯ ಪಟ್ಟರು.

ಚಿತ್ರ ನಿರ್ದೇಶಕ ಸಂತೋಷ ಆನಂದರಾಮ್‌, ನಟರಾದ ರವಿಶಂಕರ ಗೌಡ, ಧನಂಜಯ ಹಾಗೂ ಶಿವಾನಂದ ಮುತ್ತಣ್ಣವರ, ರಜತ್‌ ಉಳ್ಳಾಗಡ್ಡಿಮಠ, ಪ್ರಭು ನವಲಗುಂದಮಠ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT