ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರರಿಗೆ ಸರ್ಕಾರ ಏನು ಮಾಡಿದೆ?: ಬಹಿರಂಗ ಚರ್ಚೆಗೆ ಹೊರಟ್ಟಿ ಸವಾಲು

ಪ್ರಚಾರಕ್ಕೆ ಜೆಡಿಎಸ್‌ ಚಾಲನೆ
Last Updated 10 ಅಕ್ಟೋಬರ್ 2020, 10:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಜನರಿಗೆ ಸುಳ್ಳು ಭರವಸೆಗಳನ್ನು ಮಾತ್ರ ನೀಡುತ್ತಿವೆ. ಇಷ್ಟು ವರ್ಷಗಳ ಅವಧಿಯಲ್ಲಿ ಪದವೀಧರರಿಗೆ ಸರ್ಕಾರಗಳು ಏನು ಮಾಡಿವೆ ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಪ್ರಶ್ನಿಸಿದರು.

ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯತ್ವ ಸ್ಥಾನಕ್ಕೆ ನಡೆಯುವ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿ ಶಿವಶಂಕರ ಕಲ್ಲೂರ ಪರ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮಕ್ಕೂ ಮೊದಲು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ರಾಜ್ಯ ಸರ್ಕಾರ ಶಿಕ್ಷಕರ ಪರ ಯಾವ ಯೋಜನೆಗಳನ್ನೂ ರೂಪಿಸಿಲ್ಲ. ಶಿಕ್ಷಕರ ನೇಮಕಾತಿ ಮಾಡಿಕೊಂಡಿಲ್ಲ. ಈ ಕುರಿತು ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೂ ಸಿದ್ಧನಿದ್ದೇನೆ. ಚುನಾವಣೆಗೆ ಸಮಯ ಕಡಿಮೆಯಿರುವ ಕಾರಣ ವೇಗವಾಗಿ ಪ್ರಚಾರ ಮಾಡಬೇಕಿದೆ. ಪ್ರಾಮಾಣಿಕವಾಗಿ ಚುನಾವಣೆ ಎದುರಿಸುತ್ತೇವೆ’ ಎಂದರು.

‘ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಪದವೀಧರರು ನಿರಾಸಕ್ತಿ ತೋರುತ್ತಿದ್ದಾರೆ. ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಪಶ್ಚಿಮ ಕ್ಷೇತ್ರದಲ್ಲಿ ಅಂದಾಜು ನಾಲ್ಕು ಲಕ್ಷ ಪದವೀಧರರು ಇದ್ದಾರೆ. ಈಗ ಸರಿಯಾಗಿ ಒಂದು ಲಕ್ಷ ಪದವೀಧರರು ಕೂಡ ಹೆಸರು ನೋಂದಾಯಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್‌ ಅಭ್ಯರ್ಥಿ ಕಲ್ಲೂರ ಮಾತನಾಡಿ ‘ನನ್ನ ಮೇಲೆ ನಂಬಿಕೆಯಿಟ್ಟು ಸಾಮಾನ್ಯ ಕಾರ್ಯಕರ್ತನಿಗೆ ಚುನಾವಣೆಗೆ ಸ್ಪರ್ಧಿಸಲು ಪಕ್ಷ ಅವಕಾಶ ಕೊಟ್ಟಿದೆ. ಪದವೀಧರರು ಎಸ್‌.ವಿ. ಸಂಕನೂರ ಅವರನ್ನು ಹಿಂದಿನ ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಕ್ಕೆ ಯಾತನೆ ಅನುಭವಿಸಿದ್ದಾರೆ. ಆದ್ದರಿಂದ ಈ ಬಾರಿ ಹೊಸ ಅಭ್ಯರ್ಥಿಯತ್ತ ಒಲವು ಇದೆ. ಶಿಕ್ಷಣ ಸಚಿವರಾಗಿದ್ದಾಗ ಹೊರಟ್ಟಿ ಅವರು ಮಾಡಿದ ಕಾರ್ಯಗಳು ನನಗೆ ಶ್ರೀರಕ್ಷೆಯಾಗಲಿವೆ’ ಎಂದರು.

‘ಕಳೆದ ಎಂಟು ತಿಂಗಳಿಂದಲೇ ಪ್ರಚಾರ ಮಾಡಿದ್ದೇನೆ. ನಮಗೆ ಕಾಂಗ್ರೆಸ್‌ಗಿಂತ ಬಿಜೆಪಿ ವಿರುದ್ಧ ನೇರ ಸ್ಪರ್ಧೆಯಿದೆ’ ಎಂದರು.

ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ, ಮುಖಂಡರಾದ ರಾಜಣ್ಣ ಕೊರವಿ, ಬಿ.ಬಿ. ಗಂಗಾಧರಮಠ, ಗುರುರಾಜ ಹುಣಸಿಮರದ ಇದ್ದರು.

‘ಗೆಳೆತನ, ರಾಜಕೀಯ ಭಿನ್ನ’
ನಿಮ್ಮ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಸಂಕನೂರ ಕಳೆದ ಸಲ ನಿಮ್ಮ ವಿರುದ್ಧವೇ ಟೀಕೆ ಮಾಡಿದ್ದರಲ್ಲ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೊರಟ್ಟಿ ‘ನನಗೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಜೊತೆಗೂ ಒಡನಾಟವಿದೆ. ಗೆಳೆತನವೇ ಬೇರೆ, ರಾಜಕೀಯವೇ ಬೇರೆ’ ಎಂದರು.

ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಕಲ್ಲೂರ ಪರ ಪ್ರಚಾರ ಮಾಡುತ್ತೇನೆ ಎಂದರು.

**

ಸಂಕನೂರ ಅವರು ತಮ್ಮ ಬಗ್ಗೆ ‘ಸದನ ಶೂರ ಸಂಕನೂರ’ ಎಂದು ಪುಸ್ತಕ ಬರೆದಿದ್ದಾರೆ. ಇದನ್ನು ಓದಿದ್ದೇನೆ. ಅವರು ಸದನಶೂರ ಅಲ್ಲ; ಮನವಿ ಶೂರ.
-ಶಿವಶಂಕರ ಕಲ್ಲೂರ,ಜೆಡಿಎಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT