ಗುರುವಾರ , ಅಕ್ಟೋಬರ್ 22, 2020
22 °C
ಅನೈತಿಕ ಸಂಬಂಧ; ಆತ್ಮಹತ್ಯೆ ಎಂದು ಹೇಳಿಕೆ ನೀಡಿದ್ದ ಶೋಭಾ

ಪತಿಯನ್ನೇ ಕೊಲೆಗೈದ ಪತ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಲಾಕ್‌ಡೌನ್‌ ಅವಧಿಯಲ್ಲಿ ತನ್ನ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆ ಎನ್ನುವ ಕಾರಣಕ್ಕೆ ಪತ್ನಿಯೇ ಗಂಡನನ್ನು ಕೊಲೆ ಮಾಡಿದ್ದಾಳೆ. ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಹಾಗೂ ಬಾಲಕ ಸೇರಿ ಈ ಕೃತ್ಯ ಎಸಗಿದ್ದಾರೆ. 

ರಾಣೆಬೆನ್ನೂರಿನ ಶ್ರೀನಿವಾಸ ಗಂಗಾಜಲ ತಾಂಡಾದ ಶೋಭಾ ಲಮಾಣಿ ಮತ್ತು ದಿಳ್ಳೆಪ್ಪ ಅಂತರವಳ್ಳಿ ಆರೋಪಿಗಳಾಗಿದ್ದು, ಹುಬ್ಬಳ್ಳಿ ರೈಲ್ವೆ ಪೊಲೀಸರು ಶುಕ್ರವಾರ (ಅ. 9) ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಇವರಿಬ್ಬರು ಬಾಲಕನ ಜೊತೆ ಸೇರಿ ಚಂದ್ರಪ್ಪ ಲಮಾಣಿಯನ್ನು ಮೇ 10ರಂದು ರಾಣೆಬೆನ್ನೂರಿನ ರೈಲ್ವೆ ನಿಲ್ದಾಣದ ಪಕ್ಕದ ಹೊಲದಲ್ಲಿ ಕೊಲೆ ಮಾಡಿ, ರೈಲ್ವೆ ಹಳಿ ಮೇಲೆ ಒಗೆದು ಹೋಗಿದ್ದರು.

ಏನಿದು ಪ್ರಕರಣ?: ರಾಣೆಬೆನ್ನೂರು ಚಳಿಗೇರಿ ರೈಲ್ವೆ ನಿಲ್ದಾಣದ ಹಳಿ ಮಧ್ಯ ಮೇ 10ರಂದು ಚಂದ್ರಪ್ಪ ಅವರ ಶವ ಪತ್ತೆಯಾಗಿದ್ದು, ಹುಬ್ಬಳ್ಳಿ ಸ್ಟೇಷನ್‌ ಮಾಸ್ಟರ್‌ ಬರುಣ್‌ಕುಮಾರ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿದ್ದರು. ಕಿಮ್ಸ್‌ ಶವಾಗಾರದಲ್ಲಿ ಮೃತದೇಹ ಇಡಲಾಗಿತ್ತು. 11ರಂದು ಅವರ ಪತ್ನಿ ಶೋಭಾ ಶವಾಗಾರಕ್ಕೆ ಬಂದು ಪತಿ ಮೃತದೇಹ ಗುರುತಿಸಿ, ಗಂಡನಿಗೆ ಕುಡಿಯುವ ಚಟವಿದ್ದು ಚಲಿಸುತ್ತಿರುವ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಳು.

ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆಯಿಂದಲೇ ಮೃತಪಟ್ಟಿದ್ದು ಎಂಬುದು ದೃಢವಾಗಿದೆ. ನಂತರ ರೈಲ್ವೆ ಪೊಲೀಸರು ಆತ್ಮಹತ್ಯೆ ಪ್ರಕರಣವನ್ನು ಕೊಲೆ ಎಂದು ಬದಲಾಯಿಸಿ ತನಿಖೆ ಕೈಗೊಂಡಿದ್ದರು.‌

ನಡೆದಿದ್ದೇನು?: ಕೂಲಿ ಕಾರ್ಮಿಕ ಚಂದ್ರಪ್ಪ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದರೆ, ಎರಡು–ಮೂರು ತಿಂಗಳು ಬರುತ್ತಿರಲಿಲ್ಲ. ಆ ವೇಳೆ ಅವರ ಪತ್ನಿ ಶೋಭಾ, ದಿಳ್ಳೆಪ್ಪ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಲಾಕ್‌ಡೌನ್‌ ಘೋಷಣೆಯಾದಾಗ ಕೆಲಸವಿಲ್ಲದೆ ಚಂದ್ರಪ್ಪ ಮನೆಯಲ್ಲಿದ್ದ. ಇದರಿಂದ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂದು ಶೋಭಾ, ದಿಳ್ಳೆಪ್ಪನ ಜೊತೆ ಚಂದ್ರಪ್ಪರ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಶವವನ್ನು ರೈಲ್ವೆ ಹಳಿ ಮೇಲೆ ಬಿಸಾಡಿ ಹೋಗಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿ ರೈಲ್ವೆ ಡಿವೈಎಸ್‌ಪಿ ಪುಷ್ಪಲತಾ ಅವರ ಮಾರ್ಗದರ್ಶನದಲ್ಲಿ ಸಿಪಿಐ ಜೆ.ಎಂ. ಕಾಲಿಮಿರ್ಚಿ, ಪಿಎಸ್‌ಐ ಸತ್ಯಪ್ಪ ಎಂ., ಬಿ.ಎನ್‌. ರಾಯನಗೌಡ್ರ, ಎಫ್‌.ಜಿ. ಫುಲ್ಲಿ, ಎಸ್‌.ಬಿ. ಪಾಟೀಲ, ಪ್ರವೀಣ ಪಾಟೀಲ, ರವಿ ವಾಲ್ಮಿಕಿ, ಆರ್‌.ಎಚ್‌. ಗುಳೇದ ಸೇರಿದಂತೆ ಇತರ ಸಿಬ್ಬಂದಿ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು