ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧೆ: ಕಾಂಗ್ರೆಸ್‌ನ ಮಂಜುನಾಥ ಕುನ್ನೂರ

Published 1 ಏಪ್ರಿಲ್ 2024, 20:38 IST
Last Updated 1 ಏಪ್ರಿಲ್ 2024, 20:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಮಾಜಿ ಸಂಸದ ಮಂಜುನಾಥ ಕುನ್ನೂರ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಹಾವೇರಿ ಅಥವಾ ಧಾರವಾಡದಿಂದ ಟಿಕೆಟ್ ಕೊಡುವಂತೆ ಅರ್ಜಿ ಹಾಕಿದ್ದೆ. ನನಗೆ ಅನ್ಯಾಯವಾಗಿದೆ. ಪಕ್ಷದಲ್ಲಿ ಕುಟುಂಬ ರಾಜಕಾರಣ, ಹಣಬಲ, ತೋಳ್ಬಲ ಹಾಗೂ ಪ್ರಭಾವ ಬಳಕೆ ಮಿತಿಮೀರಿದೆ. ಹಿರಿತನಕ್ಕೆ ಬೆಲೆ ಇಲ್ಲದಾಗಿದ್ದು, ಹೊಂದಾಣಿಕೆ ರಾಜಕಾರಣವೇ ಮುಂಚೂಣಿಯಲ್ಲಿದೆ. ಸ್ವತಂತ್ರವಾಗಿ ಸ್ಪರ್ಧಿಸುವಂತೆ ಹಿತೈಷಿಗಳು ಒತ್ತಡ ಹೇರಿದ್ದಾರೆ’ ಎಂದರು. 

‘ಧಾರವಾಡ, ಮೈಸೂರು, ಶಿವಮೊಗ್ಗ, ಹಾವೇರಿ ಕ್ಷೇತ್ರಗಳಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಚುನಾವಣೆಯಲ್ಲಿ ಪಾರದರ್ಶಕತೆ ಉಳಿದಿಲ್ಲ’ ಎಂದು ಹೇಳಿದರು.

ಯಾರ ಒತ್ತಡವೂ ನನ್ನ ಮೇಲಿಲ್ಲ:

‘ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಸಂಸದ ಪ್ರಲ್ಹಾದ ಜೋಶಿ ಅವರ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಹೀಗಾಗಿ ನೀವು ಜೋಶಿ ಅವರ ಒತ್ತಡದಂತೆ ಚುನಾವಣೆಗೆ ನಿಲ್ಲುತ್ತಿದ್ದೀರಾ’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಜೋಶಿ ನನ್ನ ಜೂನಿಯರ್. ಹುಬ್ಬಳ್ಳಿ–ಧಾರವಾಡಕ್ಕೆ ಈವರೆಗೆ ಕುಡಿಯುವ ನೀರು ತರಲು ಅವರಿಗೆ ಸಾಧ್ಯವಾಗಿಲ್ಲ. ನಾನೇನು ಅವರ ಮಾತು ಕೇಳುವುದು’ ಎಂದು ಮರುಪ್ರಶ್ನೆ ಹಾಕಿದರು.

‘ಟಿಕೆಟ್ ಹಂಚಿಕೆ ವಿಚಾರದಲ್ಲಿ ಲಿಂಗಾಯತ ಪಂಚಮಸಾಲಿಗಳಿಗೆ ಅನ್ಯಾಯವಾಗಿದೆ. ದಿಂಗಾಲೇಶ್ವರ ಶ್ರೀಗಳು ನಮ್ಮ ಸಮಾಜದವರು. ಒಂದೊಮ್ಮೆ ಅವರು ಚುನಾವಣೆಗೆ ನಿಂತರೆ ನಾನು ಸ್ಪರ್ಧೆಗಿಳಿಯುವುದಿಲ್ಲ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಮಂಜುನಾಥ ಕುನ್ನೂರ ಅವರು ಎರಡು ಬಾರಿ ಶಿಗ್ಗಾವಿ ಕ್ಷೇತ್ರದ ಶಾಸಕರು (1989 ಮತ್ತು 1994), ಒಂದು ಬಾರಿ ಧಾರವಾಡ ದಕ್ಷಿಣ ಕ್ಷೇತ್ರದ ಸಂಸದರಾಗಿ (2004–2009) ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT