ಶುಕ್ರವಾರ, ಮಾರ್ಚ್ 31, 2023
26 °C
ಬಜೆಟ್ ನಿರೀಕ್ಷೆ: ಜಿಲ್ಲೆಯಲ್ಲಿವೆ ಗಮನ ಸೆಳೆಯುವ ಪ್ರವಾಸಿ ತಾಣಗಳು; ಬೇಕಿದೆ ಕಾಯಕಲ್ಪ

ಹುಬ್ಬಳ್ಳಿ–ಧಾರವಾಡ: ಪ್ರವಾಸೋದ್ಯಮ ತಾಣದ ಕನಸು ನನಸಾಗುವುದೇ?

ನಾಗರಾಜ್‌ ಬಿ.ಎನ್‌. Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಹುಬ್ಬಳ್ಳಿ ವಾಣಿಜ್ಯ ನಗರಿಯೆಂದು, ಧಾರವಾಡ ವಿದ್ಯಾಕಾಶಿಯೆಂದು ಖ್ಯಾತಿ ಪಡೆದಿವೆ. ದೂರದೂರುಗಳಿಂದ ಈ ಅವಳಿನಗರಕ್ಕೆ ಸಂಪರ್ಕ ಕಲ್ಪಿಸಲು ವಿಮಾನಯಾನ, ರೈಲು ಮತ್ತು ಬಸ್ ಸೌಲಭ್ಯಗಳು ಸಹ ವಿಪುಲವಾಗಿವೆ. ಹೀಗಿದ್ದರೂ, ಇಲ್ಲಿಯ ಪ್ರವಾಸಿತಾಣಗಳ ಅಭಿವೃದ್ಧಿ ಮಾತ್ರ ಮರೀಚಿಕೆ!

ಇದೇ ಫೆ.17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸ್ತುತ ಸರ್ಕಾರದ ಕೊನೆಯ ಬಜೆಟ್ ಮಂಡನೆ ಮಾಡಲಿದ್ದು, ಅವಳಿನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬಹುದಾದ ವಿಶೇಷ ಯೋಜನೆಯೇನಾದರೂ ಘೋಷಿಸಬಹುದೇ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಇದೇ ಮಣ್ಣಿನಲ್ಲಿ ಬೆಳೆದು, ವಿದ್ಯಾಭ್ಯಾಸ ಮಾಡಿರುವ ಬೊಮ್ಮಾಯಿ, ತಾವು ಮಂಡಿಸಲಿರುವ ಎರಡನೇ ಬಜೆಟ್‌ನಲ್ಲಿ ಋಣಸಂದಾಯ ಮಾಡಲಿದ್ದಾರೆ ಎನ್ನುವ ಭರವಸೆ ಜನರದ್ದು.

ಮಂಗಳೂರು, ಬೆಂಗಳೂರು, ಕಲಬುರಗಿ, ಹಂಪಿ, ಗೋವಾ ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖ ನಗರಗಳಿಂದ ಹುಬ್ಬಳ್ಳಿ–ಧಾರವಾಡಕ್ಕೆ ನೇರ ರೈಲು ಸಂಪರ್ಕವಿದೆ. ಮುಂಬೈ, ಹೈದರಾಬಾದ್, ಬೆಂಗಳೂರು, ಬೆಳಗಾವಿಗೆ ನೇರ ವಿಮಾನ ಸೌಲಭ್ಯವಿದೆ. ರಾಜ್ಯದ ವಿವಿಧ ಭಾಗಗಳಿಗೆ ದಿನಪೂರ್ತಿ ಬಸ್ ಸಂಪರ್ಕವೂ ಇದೆ. ಆ ಎಲ್ಲ ಭಾಗಗಳಿಂದ ಪ್ರತಿನಿತ್ಯ ಸಾವಿರಾರು ಮಂದಿ ಒಂದಿಲ್ಲೊಂದು ಕಾರಣಕ್ಕೆ ಜಿಲ್ಲೆಗೆ ಬರುತ್ತಾರೆ. ಇಲ್ಲಿರುವ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿಪಡಿಸಿದರೆ, ಅವರು ಪ್ರವಾಸಿಗರಾಗಿ ಆದಾಯಕ್ಕೆ ಮೂಲವಾಗುತ್ತಾರೆ. ಅಲ್ಲದೆ, ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ. ಪೂರಕವಾಗಿ ಕೆಲವು ಉದ್ಯಮಗಳು ಅಭಿವೃದ್ಧಿ ಹೊಂದುತ್ತವೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಇತಿಹಾಸ ಕಾಲದ ದೇಗುಲಗಳು, ಪಾರಂಪರಿಕ ಕೆರೆ-ಕಟ್ಟೆಗಳು, ಧರ್ಮಾತೀತ-ಜಾತ್ಯತೀತ ಮಠಗಳು, ಪ್ರಸಿದ್ಧ ಉದ್ಯಾನಗಳು ಸೇರಿದಂತೆ, ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ನಿರೀಕ್ಷೆಗೆ ತಕ್ಕಂತೆ ಅವು ಅಭಿವೃದ್ಧಿಯಾಗದ ಕಾರಣ, ಇನ್ನೂ ಮುನ್ನೆಲೆಗೆ ಬಂದಿಲ್ಲ. ಮೂಲಸೌಕರ್ಯಗಳಿಂದ‌ ವಂಚಿತವಾಗಿರುವ ಅವುಗಳಿಗೆ ಬಜೆಟ್‌ನಲ್ಲಿ ಅನುದಾನದ ಟಾನಿಕ್ ನೀಡಬೇಕಿದೆ. ಆ ಮೂಲಕ ಪ್ರವಾಸಿಗರನ್ನು ಆಕರ್ಷಿಸಿ ಜಿಲ್ಲೆಯನ್ನು ‘ಟೂರಿಸಂ ಹಬ್’ ಆಗಿಸಬೇಕಿದೆ.

ನಿರೀಕ್ಷೆಗಳೇನು?:

– ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದಕ್ಕಾಗಿ ಹುಬ್ಬಳ್ಳಿಯಲ್ಲಿ ಹೆಲಿಪೋರ್ಟ್ ಸ್ಥಾಪಿಸುವ ಯೋಜನೆ ಪ್ರವಾಸೋದ್ಯಮ ಇಲಾಖೆ ಮುಂದಿದೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಸೆಳೆಯಲು ಈ ಯೋಜನೆ ಪೂರಕವಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಸಹ ಈ ಕುರಿತು ಪ್ರಸ್ತಾವ ಮಾಡಿದ್ದರು.

– ದಾಂಡೇಲಿ, ಜೊಯಿಡಾ ಹಾಗೂ ಕರಾವಳಿ ಭಾಗದಲ್ಲಿರುವಂತೆ, ಜಿಲ್ಲೆಯಲ್ಲೂ ಹೆರಿಟೇಜ್ ಹೋಮ್‌ ಸ್ಟೇಗೆ(ಪಾರಂಪರಿಕ ಶೈಲಿಯ ಮನೆ ವಾಸ್ತವ್ಯ) ಪ್ರೋತ್ಸಾಹ ನೀಡಬೇಕು ಎನ್ನುವುದು ಜನರ ಆಗ್ರಹ. ಅರಣ್ಯ ಇಲಾಖೆಯ ಸಹಯೋಗದಲ್ಲಿ ವನ್ಯಪ್ರಾಣಿಗಳಿಗೆ ಸಮಸ್ಯೆಯಾಗದ ರೀತಿಯಲ್ಲಿ‌ ನಿರ್ಮಿಸಬೇಕು. ಕಲಘಟಗಿ, ಧಾರವಾಡ ಭಾಗದಲ್ಲಿ ಇವುಗಳಿಗೆ ಸಾಕಷ್ಟು ಅವಕಾಶಗಳಿವೆ. ಇವುಗಳು ಸಹಜವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತವೆ.

– ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಪ್ರವಾಸಿಗರಿಗೆ ಯಾವ ಸೌಕರ್ಯವೂ ಇಲ್ಲ. ವಾರಾಂತ್ಯದ ಬಿಡುವಿನ ವೇಳೆ ಕಳೆಯಲು, ಸ್ಥಳೀಯ ನಿವಾಸಿಗಳಿಗಷ್ಟೇ ಬೆಟ್ಟ ಸೀಮಿತವಾಗಿದೆ. ಮೂಲಸೌಕರ್ಯದ ಜೊತೆಗೆ, ಬೆಟ್ಟದಲ್ಲಿ ರೋಪ್‌ವೇ ಹಾಗೂ ಸಾಹಸ ಕ್ರೀಡೆಗಳನ್ನು ಆಯೋಜಿಸುವ ಶಾಶ್ವತ ಯೋಜನೆ‌ ಜಾರಿಯಾಗಬೇಕು.

– ಧಾರವಾಡದ ಸಾಧನಕೇರಿ, ಕೆಲಗೇರಿಕೆರೆ, ಹುಬ್ಬಳ್ಳಿಯ ಉಣಕಲ್ ಕೆರೆಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣಗಳನ್ನಾಗಿ ರೂಪಿಸಬೇಕು. ಕೆರೆಯಲ್ಲಿ ಜಲಕ್ರೀಡೆಗಳಿಗೆ ಅಗತ್ಯವಿರುವ ಸಲಕರಣೆ, ಯಂತ್ರಗಳನ್ನು ನೀಡಿ ಪ್ರೋತ್ಸಾಹಿಸಬೇಕು. ಕಲಘಟಗಿಯ ನೀರಸಾಗರದಲ್ಲಿ ‘ವಾಟರ್ ಪಾರ್ಕ್’ ನಿರ್ಮಿಸಿ, ಜಲಕ್ರೀಡೆಗೆ ಅವಕಾಶ ನೀಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬಹುದು. ಈ ಯೋಜನೆ ಸಹ ಸರ್ಕಾರದ ಮುಂದಿದ್ದು, ಅನುದಾನ ದೊರೆಯಬೇಕಿದೆ.

– ಕೃಷಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು. ‘ಒಂದು ಜಿಲ್ಲೆ ಒಂದು ಬೆಳೆ’ ಯೋಜನೆಯಡಿ ಜಿಲ್ಲೆಯ ಮಾವು ಬೆಳೆ ಆಯ್ಕೆಯಾಗಿದೆ. ‘ಮಾವು ಪ್ರವಾಸೋದ್ಯಮ’ ಆಯೋಜಿಸಲೂ ಸಾಕಷ್ಟು ಅವಕಾಶಗಳಿವೆ. ಬೆಳೆಯ ಪ್ರಾತ್ಯಕ್ಷಿಕೆಗೆ ಹಾಗೂ ಬೆಳೆ ವೀಕ್ಷಣೆಗೆ ದೇಶದ ವಿವಿಧ ಭಾಗಗಳಿಂದ ಆಸಕ್ತರನ್ನು ಹಾಗೂ ಪ್ರವಾಸಿಗರನ್ನು ಸೆಳೆಯಬಹುದು.

– ಚಿತ್ರಕಲೆ, ಸಾಹಿತ್ಯ, ಸಂಗೀತ, ನಾಟಕ, ನೃತ್ಯ ಮತ್ತು ಜಾನಪದ ಕಲೆಗಳಿಗೂ ಜಿಲ್ಲೆ ಖ್ಯಾತಿ ಪಡೆದಿದೆ. ಇಲ್ಲಿ ಸಾಕಷ್ಟು ಕಲಾವಿದರು ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ದೇಶ-ವಿದೇಶಗಳಲ್ಲಿ ಕಲಾ ಪ್ರದರ್ಶನ ನೀಡಿ ಧಾರವಾಡದ ಕೀರ್ತಿ ಹೆಚ್ಚಿಸಿದ್ದಾರೆ. ಅವರೆಲ್ಲರನ್ನೂ ಒಂದೇ ಸೂರಿನಡಿ ತರಲು, ಧಾರವಾಡ ಸಪ್ತಾಪುರದ ಸರ್ಕಾರಿ ಜಮೀನಿನಲ್ಲಿ ‘ಕಲಾಗ್ರಾಮ’ ಸ್ಥಾಪಿಸಲು ಜಿಲ್ಲಾಡಳಿತ ಯೋಜನೆ ಸಿದ್ಧಪಡಿಸಿದೆ. ಪ್ರವಾಸೋದ್ಯಮದ ಮೂಲಕ ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಪರಿಚಯಿಸಲು ಇದು ಸಹಕಾರಿಯಾಗಿದೆ.

ಭಕ್ತರಿಗೆ ವಸತಿ ಸಮುಚ್ಚಯ ಅಗತ್ಯ

ಹುಬ್ಬಳ್ಳಿ ಸಿದ್ಧಾರೂಢಮಠ ಧರ್ಮಾತೀತ ಮಠವಾಗಿದ್ದು, ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ‌. ಜಾತ್ರೆ ಹಾಗೂ ಹಬ್ಬದ ದಿನಗಳಂದು ಮುಂಬೈ, ಗೋವಾ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ.‌ ಆದರೆ, ಸರಿಯಾದ ವಸತಿ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಸದ್ಯ ಮಠದಲ್ಲಿ‌ 120 ಕೊಠಡಿಗಳಿದ್ದು, ವರ್ಷಪೂರ್ತಿ ಭರ್ತಿಯಾಗಿಯೇ ಇರುತ್ತವೆ. ಸರ್ಕಾರ ಮಠದ ಆವರಣದಲ್ಲಿ ವಸತಿ ಸಮುಚ್ಚಯ ನಿರ್ಮಾಣವಾದರೆ, ಭಕ್ತರ ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತದೆ. ನವಲಗುಂದದ ಯಮನೂರು ಚಾಂಗದೇವ ಕ್ಷೇತ್ರವನ್ನು ಸಹ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬಹುದು.

ಸಿದ್ಧಾರೂಢ ಮಠಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಸತಿ ಸಮುಚ್ಚಯದ ಅಗತ್ಯವಿದೆ. ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯ ಬಜೆಟ್‌ನಲ್ಲಿ ವಿಶೇಷ ಅನುದಾನ ಘೋಷಣೆಯಾದರೆ ಅನುಕೂಲ
–ಡಾ. ಗೋವಿಂದ ಮಣ್ಣೂರ, ವೈಸ್‌ ಚೇರ್‌ಮೆನ್‌, ಶ್ರೀ ಸಿದ್ಧಾರೂಢ ಮಠ ಟ್ರಸ್ಟ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು