ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ: ಎರಡನೇ ಡೋಸ್ ಪಡೆಯದಿದ್ದರೂ ಬಂತು ಸಂದೇಶ!

ಕೋವಿಡ್–19 ಲಸಿಕೆ ವಿಷಯದಲ್ಲಿ ಯಡವಟ್ಟು: ಆರೋಪ
Last Updated 8 ಡಿಸೆಂಬರ್ 2021, 8:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್–19 ಲಸಿಕೆಯ ಎರಡನೇ ಡೋಸ್ ಪಡೆಯದಿದ್ದರೂ, ಡೋಸ್ ಪಡೆದಿರುವ ಸಂದೇಶ ಮೊಬೈಲ್ ಸಂಖ್ಯೆಗೆ ಬಂದಿದೆ!

ರಾಜನಗರದ ಪದ್ಮಾವತಿ ಕೆ.ಆರ್. ಅವರಿಗೆ ಇಂತಹದ್ದೊಂದು ಸಂದೇಶ ಬಂದಿದೆ. ಲಸಿಕೆ ನೀಡುವ ಸಿಬ್ಬಂದಿ ಯಡವಟ್ಟಿನಿಂದಲೋ ಅಥವಾ ಲಸಿಕೆ ಗುರಿ ತಲುಪುವ ಧಾವಂತದಿಂದಲೋ ಈ ರೀತಿ ಆಗಿರಬಹುದಾದ ಕುರಿತು, ಪದ್ಮಾವತಿ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ಮೊದಲ ಡೋಸ್ ಪಡೆದು 84 ದಿನಗಳಾಗಿದೆ. ಸದ್ಯದಲ್ಲೇ ಹೋಗಿ ಪಡೆದರಾಯಿತು ಅಂದುಕೊಂಡಿದ್ದೆ. ಆದರೆ, ಡಿ. 6ರಂದು ನನ್ನ ಮೊಬೈಲ್ ನಂಬರ್‌ಗೆ ಎರಡೂ ಡೋಸ್ ಪಡೆದಿರುವ ಸಂದೇಶ ಬಂತು’ ಎಂದು ಪದ್ಮಾವತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಎರಡನೇ ಸಂದೇಶದಲ್ಲಿ ಲಸಿಕೆಯ ಪ್ರಮಾಣಪತ್ರ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್ ಕೂಡ ಇತ್ತು. ಅದನ್ನು ಕ್ಲಿಕ್ ಮಾಡಿದಾಗ, ನನ್ನ ಹೆಸರಿನ ಪ್ರಮಾಣಪತ್ರ ಡೌನ್‌ಲೋಡ್ ಆಯಿತು. ಲಸಿಕೆ ಪಡೆಯಲು ನನ್ನ ನಂಬರ್ ಅನ್ನು ಕುಟುಂಬದ ಬೇರಾರೂ ಕೊಟ್ಟಿಲ್ಲ. ಆದರೂ, ಇದು ಹೇಗೆ ಸಾಧ್ಯವಾಯಿತು ಎಂದು ತಿಳಿಯದಾಗಿದೆ’ ಆಶ್ಚರ್ಯ ವ್ಯಕ್ತಪಡಿಸಿದರು.

‘ಎರಡು ಕಾರಣವಿರಬಹುದು’

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ, ‘ಎರಡನೇ ಡೋಸ್‌ ಪಡೆಯದಿದ್ದರೂ ಪಡೆದಿರುವುದಾಗಿ ಮೊಬೈಲ್ ಸಂಖ್ಯೆಗೆ ಸಂದೇಶ ಹೋಗಿರುವ ಎರಡ್ಮೂರು ಪ್ರಕರಣಗಳು ಜಿಲ್ಲೆಯಲ್ಲಿ ಗಮನಕ್ಕೆ ಬಂದಿವೆ. ಇದಕ್ಕೆ ಎರಡು ಕಾರಣಗಳಿರಬಹುದು. ಒಂದೇ ಮೊಬೈಲ್ ಸಂಖ್ಯೆಯನ್ನು ಕುಟುಂಬದ ಇತರ ಸದಸ್ಯರು ಲಸಿಕೆ ಪಡೆಯುವುದಕ್ಕಾಗಿ ಕೊಟ್ಟಿದ್ದರೆ ಅಥವಾ ಲಸಿಕೆ ಪಡೆದವರ ಸಂಪರ್ಕ ಸಂಖ್ಯೆಯನ್ನು ಸಿಬ್ಬಂದಿ ತಪ್ಪಾಗಿ ದಾಖಲಿಸಿದ್ದರೆ, ಬೇರೆಯವರಿಗೆ ಸಂದೇಶ ಹೋಗಿರುತ್ತದೆ’ ಎಂದು ಹೇಳಿದರು.

‘ಲಸಿಕಾ ಕೇಂದ್ರದ ಗಮನಕ್ಕೆ ತರಲಿ’

‘ಎರಡನೇ ಡೋಸ್ ಪಡೆಯದಿದ್ದರೂ ಪಡೆದಿರುವುದಾಗಿ ಯಾರ ಮೊಬೈಲ್ ಸಂಖ್ಯೆಗೆ ಸಂದೇಶ ಬಂದಿದೆಯೋ, ಅವರು ಸ್ಥಳೀಯವಾಗಿ ಕೋವಿಡ್ ಲಸಿಕೆ ನೀಡುವ ಕೇಂದ್ರಕ್ಕೆ ಭೇಟಿ ನೀಡಬೇಕು. ಆ ಸಂದೇಶವನ್ನು ಕೇಂದ್ರದ ಸಿಬ್ಬಂದಿಯ ಗಮನಕ್ಕೆ ತಂದು ಲಸಿಕೆ ಪಡೆಯಬೇಕು’ ಎಂದು ಡಾ. ಯಶವಂತ ಮದೀನಕರ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT