ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಮನೆಯಲ್ಲೂ ಸುರಕ್ಷಿತವಲ್ಲ: ಡಾ.ಆರ್.ಇಂದಿರಾ

Last Updated 9 ಜೂನ್ 2021, 16:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪುರುಷ ಪ್ರಧಾನ ವ್ಯವಸ್ಥೆ ಮೇಳೈಸಿರುವ ಈಗಿನ ಸಮಾಜದಲ್ಲಿ ಮಹಿಳೆಯರು ಲಿಂಗ ಅಸಮಾನತೆ, ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ಹೋಗಲಾಡಿಸುವಲ್ಲಿ ನಾಗರಿಕ ಸಮಾಜದ ಪಾತ್ರ ಅತಿ ಮುಖ್ಯವಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕಿ ಡಾ.ಆರ್.ಇಂದಿರಾ ಬುಧವಾರ ಪ್ರತಿಪಾದಿಸಿದರು.

ಕೆ.ಎಲ್.ಇ ಸಂಸ್ಥೆಯ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ, ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯ ಸಮಾಜಶಾಸ್ತ್ರ ವಿಭಾಗ ಮತ್ತು ಮನೋಶಾಸ್ತ್ರ ವಿಭಾಗ ಜಂಟಿಯಾಗಿ ಏರ್ಪಡಿಸಿದ್ದ ‘ಸಾಂಕ್ರಾಮಿಕ ಪಿಡುಗು ಪರಿಸ್ಥಿತಿಯಲ್ಲಿ ಲಿಂಗ ಸಂವೇದನಾಶೀಲತೆ’ ವಿಷಯ ಕುರಿತು ರಾಷ್ಟ್ರೀಯ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

’ಕೋವಿಡ್‌ನಂಥ ಸಾಂಕ್ರಾಮಿಕ ಪಿಡುಗೇ ಇರಲಿ; ಸುನಾಮಿಯೇ ಬರಲಿ, ಮಹಿಳೆಯರೇ ಮೊದಲು ಆರ್ಥಿಕವಾಗಿ ತೊಂದರೆಗೆ ಒಳಗಾಗಿ ಅನ್ಯಾಯ, ದಬ್ಬಾಳಿಕೆ, ಅತ್ಯಾಚಾರ ಮತ್ತು ಕೌಟುಂಬಿಕ ಹಿಂಸಾಚಾರಕ್ಕೆ ಬಲಿಯಾಗುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಲಸಿಕೆ ಪಡೆಯುವಲ್ಲಿ ಹಿಂದುಳಿದಿದ್ದಾರೆ. ಮನೆಯಲ್ಲಿರುವುದೇ ಸುರಕ್ಷಿತ ಎನ್ನುವ ಭಾವನೆ ಅವರಲ್ಲಿ ಹುಸಿಯಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

’ದೇಶದಲ್ಲಿನ ಸುಮಾರು ಶೇ 40ರಷ್ಟು ಕುಟುಂಬಗಳು ಮಹಿಳೆಯರ ಆದಾಯದ ಮೇಲೆಯೇ ಅವಲಂಬಿಸಿವೆ. ಇವರೆಲ್ಲರೂ ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿದವರಾಗಿದ್ದು, ಇವರಿಗೆ ಯಾವುದೇ ವೇತನ, ಸೇವಾ ಭದ್ರತೆ ಇಲ್ಲ. ಇದರಿಂದ ಅವರು ಕೆಲಸವಿಲ್ಲದಿದ್ದರೆ ಉಪವಾಸವೇ ಗತಿ ಎನ್ನುವಂತಾಗಿದೆ’ ಎಂದರು.

ಕಾಲೇಜಿನ ಪ್ರಾಚಾರ್ಯೆ ಡಾ.ಉಮಾ ವಿ. ನೇರ್ಲೆ ಅಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೈ.ಎನ್. ನಾಗೇಶ್, ಗಣಿತ ಉಪನ್ಯಾಸಕಿ ಡಾ.ಎಂ.ಅರ್ಚನಾ, ಮನೋಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಸುನೀತಾ ಹಾನಗಲ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT