ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಪಡಿತರ ಸಾಲಿನಲ್ಲಿ ಮಹಿಳೆಯರು; ಮದ್ಯಕ್ಕೆ ಪುರುಷರು

ನಗರದಲ್ಲಿ ಸಾಲುಗಟ್ಟಿ ನಿಂತ ಜನ; ಸಾಮಾಜಿಕ ಅಂತರ ಮರೀಚಿಕೆ
Last Updated 4 ಮೇ 2020, 13:10 IST
ಅಕ್ಷರ ಗಾತ್ರ

ಧಾರವಾಡ: ಒಂದೆಡೆ ನ್ಯಾಯಬೆಲೆ ಅಂಗಡಿ ಎದುರು ಪಡಿತರ ಪಡೆಯಲು ಮಹಿಳೆಯರು ಸಾಲುಗಟ್ಟಿ ನಿಂತಿದ್ದರೆ, ಮತ್ತೊಂದೆಡೆ ಮದ್ಯದ ಅಂಗಡಿ ಬಾಗಿಲು ತೆರೆಯುವುದನ್ನೇ ಚಾತಕಪಕ್ಷಿಯಂತೆ ಕಾದಿದ್ದ ಮದ್ಯಪ್ರಿಯ ಪುರುಷರ ಉದ್ದನೆಯ ಸಾಲುಗಳು ನಗರದಲ್ಲಿ ಸೋಮವಾರ ಕಂಡುಬಂತು.

ಮುಖಗವಸು ತೊಟ್ಟು ಬೆಳ್ಳಂಬೆಳಿಗ್ಗೆಯೇ ಹಲವರು ಮದ್ಯದ ಅಂಗಡಿ ಎದುರು ಸಾಲುಗಟ್ಟಿ ನಿಂತಿದ್ದರು. ಮುಖಗವಸು ತೊಟ್ಟಿದ್ದವರಲ್ಲಿ ಕೆಲವರು ಗುರುತು ಮರೆಮಾಚಿಕೊಳ್ಳಲು ಹೆಲ್ಮೆಟ್‌ ಧರಿಸಿ ಸರತಿಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡುಬಂತು.

ಮದ್ಯಕ್ಕಾಗಿ ಪಾದಚಾರಿ ಮಾರ್ಗದಲ್ಲಿ ಉದ್ದನೆಯ ಸಾಲುಗಟ್ಟಿ ನಿಂತಿರುವುದನ್ನು ನೋಡಲು ಇನ್ನಷ್ಟು ಜನರು ಪೇಟೆಯಲ್ಲಿ ಸುತ್ತಾಡಿದರು. ಹಣ ಪಾವತಿಗೆ ಎಟಿಎಂಗಳ ಮುಂದೆಯೂ ಸಾಲುಗಳು ಕಂಡುಬಂದವು. ಸಾಲಿನಲ್ಲಿ ನಿಂತವರಿಗೆ ಅಂತರ ಕಾಯ್ದುಕೊಳ್ಳುವಂತೆ ಹೇಳುವುದು‍‍ಪೊಲೀಸರು ಹಾಗೂ ಮದ್ಯದಂಗಡಿಯವರು ಪ್ರಯಾಸಪಟ್ಟರು.

ಮದ್ಯ ಸಿಕ್ಕ ಸಂತಸದಲ್ಲಿ ಹಲವರು ಮನೆಯತ್ತ ಹೆಜ್ಜೆ ಹಾಕಿದರೆ, ಇನ್ನೂ ಕೆಲವರು ಖಾಲಿ ಜಾಗದಲ್ಲೇ ಕೂತು ಕುಡಿದು ಮದ್ಯದ ಗುಂಗಿನಲ್ಲಿ ತೇಲಾಡಿದರು. ಇನ್ನೂ ಹಲವರು ಮತ್ತಿನಲ್ಲಿ ಮನಬದಂತೆ ವರ್ತಿಸುತ್ತಾ, ರಸ್ತೆಯಲ್ಲೇ ಮಲಗಿ ಜನಸಾಮಾನ್ಯರ ಅಸಮಾಧಾನಕ್ಕೂ ಕಾರಣರಾದರು.

‘ಮದ್ಯದ ಮಾರಾಟ ಮತ್ತೆ ಸ್ಥಗಿತಗೊಳ್ಳುವ ಭೀತಿಯಿಂದ ಗರಿಷ್ಠ ಮಿತಿಯಷ್ಟು ಖರೀದಿಸುತ್ತಿದ್ದೇನೆ. ಈಗಾಗಲೇ ದುಬಾರಿ ಹಣ ಕೊಟ್ಟು ಮದ್ಯ ಸೇವಿಸಿದ್ದೆ. ಈಗ ಸರ್ಕಾರಿ ದರಕ್ಕೆ ಮದ್ಯ ಸಿಗುತ್ತಿರುವುದು ಸಂತಸ ತಂದಿದೆ. ಒಂದಷ್ಟು ಮನೆಯಲ್ಲೇ ದಾಸ್ತಾನು ಮಾಡಿಕೊಳ್ಳುವುದು ಉತ್ತಮ. ಸರ್ಕಾರ ಯಾವ ಸಮಯದಲ್ಲಿ ಏನು ನಿರ್ಣಯ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಮದ್ಯಪ್ರಿಯರೊಬ್ಬರು ತಿಳಿಸಿದರು.

ಇಲ್ಲಿನ ಬಸ್ ನಿಲ್ದಾಣದ ಮುಂಭಾಗದಲ್ಲಿ ಮದ್ಯದ ಗುಂಗಿನಲ್ಲಿದ್ದ ವ್ಯಕ್ತಿಯೊಬ್ಬ ಮೈಮೇಲಿನ ಮೇಲಂಗಿಯನ್ನು ತೆಗೆದು, ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರಂತೆ ವರ್ತಿಸುತ್ತಿದ್ದ ದೃಶ್ಯ ಕಂಡುಬಂತು. ವಾಹನಗಳಿಗೆ ಸೂಚನೆ ನೀಡುತ್ತಿದ್ದಂತೆ ಕಂಡುಬಂದರೂ, ಈತನ ವರ್ತನೆಯಿಂದ ವಾಹನ ಸವಾರರು ತೀವ್ರ ಕಿರಿಕಿರಿ ಅನುಭವಿಸಿದರು. ಆದರೆ ಈತನನ್ನು ರಸ್ತೆಯಿಂದ ಸರಿಸಲು ಯಾರೂ ಮುಂದೆ ಬರಲಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಬಸವರಾಜ ಮಲಕಾರಿ,‘ಇಂಥ ಸಂಷಕ್ಟ ಸಮಯದಲ್ಲಿ ಸರ್ಕಾರ ತನ್ನ ಸ್ವಾರ್ಥ ಹಾಗೂ ತನ್ನ ಲಾಭಕ್ಕಾಗಿ ಸರಾಯಿಯನ್ನು ಮಾರಾಟ ಮಾಡಲು ಅನುಮತಿ ನೀಡುವ ಬಡ ಕುಟುಂಬಗಳ ನೆಮ್ಮದಿಯನ್ನು ಕಸಿದು ಮತ್ತೆ ಬೀದಿಯಲ್ಲಿ ನಿಲ್ಲಿಸಿದೆ’ ಎಂದು ಆರೋಪಿಸಿದರು.

ಉಳಿದಂತೆ ನಗರದಲ್ಲಿ ಲಾಕ್‌ಡೌನ್ ರಿಯಾಯಿತಿ ನೀಡಿದ್ದರಿಂದ ಮಾರುಕಟ್ಟೆ ಪ್ರದೇಶ ಈ ಹಿಂದಿನಂತೆಯೇ ಸೋಮವಾರ ಕಂಡುಬಂತು. ಮುಖಗವಸು ತೊಟ್ಟವರು ಗರಿಷ್ಟ ಸಂಖ್ಯೆಯಲ್ಲಿ ಕಂಡುಬಂದರೂ, ಅಂತರ ಕಾಯ್ದುಕೊಳ್ಳುವ ಪದ್ಧತಿಗೆ ತಿಲಾಂಜಲಿ ಹೇಳಿದಂತಿತ್ತು. ಪೊಲೀಸರು ಮೈಕ್‌ ಮೂಲಕ ಅಂತರ ಕಾಯ್ದುಕೊಳ್ಳುವ ಪಾಠ ಮಾಡುತ್ತಿದ್ದರೂ, ಜನರು ತಮ್ಮ ವಹಿವಾಟಿನಲ್ಲೇ ನಿರತರಾಗಿದ್ದರು. ಮೊಬೈಲ್ ಅಂಗಡಿಗಳು ಗಿಜಿಗಿಡುತ್ತಿದ್ದವು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಮಳಿಗೆಯಲ್ಲೂ ಜನದಟ್ಟಣೆ ಹೆಚ್ಚಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT