ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ಹಂಚಿ ತಿನ್ನುವುದರಲ್ಲಿದೆ ಬದುಕಿನ ಖುಷಿ

Published 8 ಮಾರ್ಚ್ 2024, 5:53 IST
Last Updated 8 ಮಾರ್ಚ್ 2024, 5:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದುಡಿಮೆಗಾಗಿ ದಾರಿ ಅರಸುತ್ತ ಗುಜರಾತ್‌ನ ನಾಡಿಯಾಡ್ ಜಿಲ್ಲೆಯ ಆನಂದ ಗ್ರಾಮದ ನಾಲ್ಕು ಕುಟುಂಬಗಳ ಅಂದಾಜು 16 ಜನ ಹುಬ್ಬಳ್ಳಿಗೆ ಬಂದು, ನಗರದ ಕಿಮ್ಸ್‌ ಆಸ್ಪತ್ರೆ ಎದುರು ಟೆಂಟ್‌ ಹಾಕಿ, ಕೆಲಸ ಮಾಡುತ್ತಿದ್ದೇವೆ’.

ಹೀಗೆ ಬದುಕಿನ ಕಥೆಯನ್ನು ಹೇಳಿಕೊಂಡವರು ಮಂಜುಳಾ ಖೋರಿ. ಕಟ್ಟಿಗೆಯಿಂದ ಬ್ಯಾಟ್‌ಗಳನ್ನು ಸಿದ್ಧಪಡಿಸುವ ‘ಸುಥಾರಿ’ ಸಮುದಾಯದ ಅವರಿಗೆ ಊರಿನಲ್ಲಿ ನಿರೀಕ್ಷಿಸಿದಷ್ಟು ಉತ್ತಮ ಸಂಬಳ ಸಿಗುವ ಕೆಲಸ ಸಿಗಲಿಲ್ಲ. ಅವರ ಕಾಯಕಕ್ಕೆ ಅಲ್ಲಿ ಅಷ್ಟು ಬೇಡಿಕೆಯೂ ಇಲ್ಲ. ಅದಕ್ಕಾಗಿ ಊರೂರು ಅಲೆಯುತ್ತ ಬಂದ ಅವರಿಗೆ ನೆರಳು ಕೊಟ್ಟದ್ದು ಹುಬ್ಬಳ್ಳಿ. ನವೆಂಬರ್‌– ಡಿಸೆಂಬರ್‌ನಲ್ಲಿ ಕುಟುಂಬ ಸಮೇತ ಇಲ್ಲಿ ಬಂದರೆ, ಜೂನ್‌–ಜುಲೈಯಲ್ಲಿ ಊರಿಗೆ ಮರಳುತ್ತಾರೆ.  

‘ನಾನು ಹತ್ತು ವರ್ಷದವಳಿದ್ದಾಗಿನಿಂದ ಬ್ಯಾಟ್‌ ಸಿದ್ಧಪಡಿಸುವ ಕೆಲಸ ಕಲಿತೆ. ನನಗೀಗ 35 ವರ್ಷ. ಬಡತನ ಶಾಲೆಯ ಮುಖ ನೋಡದಂತೆ ಮಾಡಿತು. ಹೊಟ್ಟೆ, ಬಟ್ಟೆ, ಮನೆ, ಮಕ್ಕಳಿಗಾಗಿ ದುಡಿಯೋದಷ್ಟೇ ಮುಖ್ಯವಾಗಿತ್ತು. ನನಗೀಗ ಮೂವರು ಮಕ್ಕಳು. ಅಲ್ವಸ್ವಲ್ಪ ಶಿಕ್ಷಣ ಕಲಿತಿದ್ದಾರೆ’ ಎಂದು ಮಂಜುಳಾ ಖೋರಿ ತಿಳಿಸಿದರು.

‘ಐಪಿಎಲ್‌, ವರ್ಲ್ಡ್‌ ಕಪ್‌ ಕ್ರಿಕೆಟ್‌ ಪಂದ್ಯಗಳಲ್ಲಿ ಭಾರತದ ಆಟಗಾರರು ಗೆದ್ದರೆ ಎಲ್ಲಿಲ್ಲದ ಖುಷಿ ನನಗೆ. ಹೆತ್ತವರಿಂದ ದೂರ ಇದ್ದು, ವರ್ಷಪೂರ್ತಿ ಕಟ್ಟಿಗೆಯ ದೂಳು ಕುಡಿಯುತ್ತ, ಬದುಕನ್ನು ಸವೆಸುವ ನನಗೆ ಬೊಗಸೆ ಪೂರ್ಣ ದುಡ್ಡು ಸಿಗುವ ಸಮಯ ಅದು. ನಮ್ಮ ಆಟಗಾರರು ಸೋತರೆ, ನಮ್ಮ ಬದುಕೂ ಸೋತಂತೆ ಲೆಕ್ಕ’ ಎಂದರು.

‘ಕುಟುಂಬದವರೆಲ್ಲ ಸೇರಿ ದುಡಿದರೂ ತಿಂಗಳಿಗೆ ನಮಗೆ ಸಿಗುವ ಆದಾಯ ಕೇವಲ ₹ 20 ಸಾವಿರ. ಅದೇ ವ್ಯಾಪಾರ ಜೋರಾಗಿದ್ದರೆ ಅಂದಾಜು ₹ 40 ಸಾವಿರ ಸಿಗುತ್ತದೆ. ಮನೆ ಮಂದಿ ನೆಮ್ಮದಿಯಿಂದ ಊಟ ಮಾಡಬಹುದು. ಪುಟ್ಟ ಮಕ್ಕಳಿಗೆ ಹೊಸ ಬಟ್ಟೆ, ಆಟಿಕೆ, ಇತ್ಯಾದಿ ಕೊಡಿಸಬಹುದು’ ಎಂದು ಅವರು ಹೇಳಿದರು.

‘ಬದುಕಿನಲ್ಲಿ ದೊಡ್ಡ ಕನಸುಗಳೇನಿಲ್ಲ. ಗಟ್ಟಿಮುಟ್ಟಾದ ಸೂರೊಂದರ ಅಡಿ ನೆಮ್ಮದಿಯ ಬದುಕು ಕಳೆಯಬೇಕು ಎನ್ನುವುದಷ್ಟೇ ನನ್ನ ಗುರಿ. ನಮ್ಮಂತೆಯೇ ಬದುಕುವ ನೆರೆ ಹೊರೆಯವರಿಗೂ ನೆರವಾಗಬೇಕು, ನಮ್ಮಲ್ಲಿ ಇದ್ದುದರಲ್ಲೇ ಹಂಚಿ ತಿನ್ನುವುದರಲ್ಲಿ ಇರೋ ಖುಷಿಯೇ ಬೇರೆ. ನಮ್ಮ ಬಳಿ ಕೆಲಸ ಕೇಳಿಕೊಂಡು ಬರುವವರಿಗೆ ನಾನು ಮಾಡೋ ಕೆಲಸ ಕಲಿಸಿದ್ದೇನೆ. ನಮ್ಮ ಜೊತೆಗಿದ್ದು, ಬದುಕಲು ಅನ್ನ, ನೆರಳು, ನೀರು ಕೊಟ್ಟಿರುವೆ. ಕಷ್ಟ ಎಂದು ಬಂದವರಿಗೊಂದಷ್ಟು ಹೆಗಲಾದ ಖುಷಿ ನನಗಿದೆ’ ಎಂದು ಅವರು ತಿಳಿಸಿದರು.

ಬ್ಯಾಟ್‌ ಸಿದ್ಧಪಡಿಸುವ ಕಾಯಕದಲ್ಲಿ ನಿರತರಾದ ಮಂಜುಳಾ ಖೋರಿ
ಬ್ಯಾಟ್‌ ಸಿದ್ಧಪಡಿಸುವ ಕಾಯಕದಲ್ಲಿ ನಿರತರಾದ ಮಂಜುಳಾ ಖೋರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT