ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಜೀವನ ನಿರ್ವಹಣೆಗಾಗಿ ನಿತ್ಯ ‘ಕುಸ್ತಿ’

ಮುಚ್ಚಿರುವ ಗರಡಿಮನೆಗಳು; ಸಂಕಷ್ಟದಲ್ಲಿ ಪೈಲ್ವಾನರು
Last Updated 29 ಜೂನ್ 2020, 16:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕುಸ್ತಿ ಸ್ಪರ್ಧೆಗಳಲ್ಲಿ ಬಂದ ಬಹುಮಾನದ ಹಣವನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ, ಉತ್ತರ ಕರ್ನಾಟಕ ಭಾಗದ ಪೈಲ್ವಾನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಾಕ್‌ಡೌನ್ ತೆರವಾದರೂ ಗರಡಿ ಮನೆಗಳು ಪೂರ್ಣವಾಗಿ ಆರಂಭವಾಗದ ಕಾರಣ ಅಭ್ಯಾಸವೂ ಇಲ್ಲ; ಟೂರ್ನಿಗಳೂ ಇಲ್ಲದಂತಾಗಿದೆ.

ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಕುಸ್ತಿ ಕ್ರೀಡೆಗೆ ಪ್ರಸಿದ್ಧಿ ಹೊಂದಿವೆ. ಈ ಜಿಲ್ಲೆಗಳಲ್ಲಿ ಸಾವಿರಾರು ಪೈಲ್ವಾನರಿದ್ದಾರೆ. ಬಹಳಷ್ಟು ಜನ ಕುಸ್ತಿಯನ್ನು ವೃತ್ತಿಪರವಾಗಿ ಸ್ವೀಕರಿಸಿ ಇದರಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.

ಸಾಮಾನ್ಯವಾಗಿ ಪ್ರತಿ ವರ್ಷ ಜನವರಿಯಿಂದ ಜೂನ್ ಅವಧಿಯಲ್ಲಿ ಜಾತ್ರೆಯ ಸಮಯದಲ್ಲಿ ಮತ್ತು ಊರಿನ ಹಬ್ಬಗಳ ವೇಳೆ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಟೂರ್ನಿಗಳಲ್ಲಿ ಸಾವಿರಾರು ಪೈಲ್ವಾನರು ಪಾಲ್ಗೊಳ್ಳುತ್ತಿದ್ದರು.

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಲಾಕ್‌ಡೌನ್‌ ಘೋಷಣೆಯಾದ ಬಳಿಕ ಎಲ್ಲ ಕ್ರೀಡಾ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ರಾಜ್ಯ ಸರ್ಕಾರ ಈಗ ಕೆಲ ಕ್ರೀಡೆಗಳಿಗಷ್ಟೇ ಅವಕಾಶ ನೀಡಿದೆ. ಸಾಂಪ್ರದಾಯಿಕ ಕ್ರೀಡೆ ಕುಸ್ತಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಇದರಿಂದ ಈ ಭಾಗದ ಪೈಲ್ವಾನರು ಬದುಕು ಸಾಗಿಸಲು ನಿತ್ಯ ‘ಕುಸ್ತಿ’ ಆಡುವಂತಾಗಿದೆ.

ಗರಡಿ ಮನೆಗಳಲ್ಲಿ ತಾಲೀಮು ಮಾಡುವವರು ಪೌಷ್ಟಿಕ ಆಹಾರವನ್ನು ಸೇವಿಸಬೇಕಾಗುತ್ತದೆ. ಇದಕ್ಕಾಗಿ ನಿತ್ಯ ₹500ರಿಂದ ₹600 ಖರ್ಚಾಗುತ್ತದೆ. ಟೂರ್ನಿಗಳು ನಡೆದಿದ್ದರೆ ಅಲ್ಲಿ ಬಹುಮಾನ ಗೆದ್ದು ಅದೇ ಹಣದಿಂದ ಬಹಳಷ್ಟು ಪೈಲ್ವಾನರು ಮುಂದಿನ ಟೂರ್ನಿಗಳಿಗೆ ಸಜ್ಜಾಗುತ್ತಿದ್ದರು. ಈಗ ಹಣಕ್ಕಾಗಿ ಮನೆಯವರತ್ತ ಕೈ ಚಾಚಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಲಾಕ್‌ಡೌನ್‌ ತೆರವಾದರೂ ಯುವ ಕುಸ್ತಿಪಟುಗಳು ಈಗಲೂ ತಮ್ಮೂರುಗಳಲ್ಲಿಯೇ ಉಳಿದುಕೊಂಡಿದ್ದಾರೆ. ಫೆಬ್ರುವರಿಯಲ್ಲಿ ಧಾರವಾಡದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಮುಗಿದ ಬಳಿಕ ಯಾವ ಟೂರ್ನಿಗಳು ಕೂಡ ನಡೆದಿಲ್ಲ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಧಾರವಾಡದ ಕುಸ್ತಿ ಕೋಚ್‌ ಶಿವಲಿಂಗಪ್ಪ ಕುಂದರಗಿ ‘ಲಾಕ್‌ಡೌನ್‌ನಿಂದಾಗಿ ಕುಸ್ತಿ ಪಟುಗಳು ಬಹಳಷ್ಟು ಸಮಸ್ಯೆ ಎದುರಿಸಿದ್ದಾರೆ. ಕುಸ್ತಿ ಆಡಿದಾಗ ಬರುತ್ತಿದ್ದ ಹಣವನ್ನು ಮತ್ತೊಂದು ಟೂರ್ನಿಗೆ ತಯಾರಿ ನಡೆಸಲು ಬಳಸುತ್ತಿದ್ದರು. ಈಗ ಟೂರ್ನಿಯೂ ಇಲ್ಲ; ಹಣವೂ ಇಲ್ಲದಂತಾಗಿದೆ. ಇದರಿಂದ ಕುಸ್ತಿಪಟುಗಳ ಬದುಕು ದುಸ್ತರವಾಗಿದ್ದು, ಸರ್ಕಾರ ನೆರವಾಗಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT