ಶನಿವಾರ, ಸೆಪ್ಟೆಂಬರ್ 18, 2021
21 °C
ಫೇಸ್‌ಬುಕ್, ಯೂಟ್ಯೂಬ್, ಇತರ ಆನ್‌ಲೈನ್ ವೇದಿಕೆ‌ಗಳಲ್ಲಿ ಸಾಮೂಹಿಕ ಯೋಗ

ಡಿಜಿಟಲ್ ವೇದಿಕೆಯಲ್ಲಿ ‘ಯೋಗ’ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಿವಿಧ ಸಂಘ–ಸಂಸ್ಥೆಗಳು, ಯೋಗ ಸಮಿತಿಗಳು ಹಾಗೂ ಯೋಗಾಸಕ್ತರು ಡಿಜಿಟಲ್ ವೇದಿಕೆಯಲ್ಲಿ ಭಾನುವಾರ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಿದರು. 

ಕೊರೊನಾದಿಂದಾಗಿ ಸಾಮೂಹಿಕ ಯೋಗಕ್ಕೆ ಅವಕಾಶವಿಲ್ಲದಿದ್ದರಿಂದ ಫೇಸ್‌ಬುಕ್, ಯೂಟ್ಯೂಬ್ ಹಾಗೂ ಇತರ ಆನ್‌ಲೈನ್ ವೇದಿಕೆಗಳ ಸಾಮೂಹಿಕ ಯೋಗಾಭ್ಯಾಸ ನಡೆದಿದ್ದು ಈ ಬಾರಿಯ ವಿಶೇಷ. ರಾಜಕೀಯ ಮುಖಂಡರು, ಹಿರಿಯ ಅಧಿಕಾರಿಗಳು ಸೇರಿದಂತೆ ನೂರಾರು ಯೋಗಾಸಕ್ತರು ಇದಕ್ಕೆ ಕೈ ಜೋಡಿಸಿದರು. 

ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್‌ಪಿವೈಎಸ್‌ಎಸ್‌), ಯೋಗಸ್ಪರ್ಶ ಪ್ರತಿಷ್ಠಾನ, ಕರ್ನಾಟಕ ಧ್ಯಾನ ಪ್ರಗತಿ ಪರಿಷತ್, ಪಿರಮಿಡ್ ಸ್ಪಿರಿಚುವಲ್ ಸೊಸೈಟೀಸ್ ಮೂವ್‌ಮೆಂಟ್‌, ಯೋಗ ತರಬೇತಿ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಯೋಗ ದಿನ ಆಚರಿಸಿದವು. ಇದಕ್ಕೆ ಹೊರತಾಗಿ ಕೆಲವರು ಮನೆಯಲ್ಲಿ ಅಂತರ ಕಾಯ್ದುಕೊಂಡು ಯೋಗಾಭ್ಯಾಸ ಮಾಡಿದರು.

50 ಸಾವಿರ ಮಂದಿ ಭಾಗಿ:

‘ಯೋಗ ಸ್ಪರ್ಶ ಪ್ರತಿಷ್ಠಾನವು ತನ್ನ 1,200 ಶಾಖೆಗಳಲ್ಲಿ ಬೆಳಿಗ್ಗೆ 7ರಿಂದ 8ರವರೆಗೆ ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ನಲ್ಲಿ ಆನ್‌ಲೈನ್ ಯೋಗ ದಿನಾಚರಣೆ ಆಚರಿಸಿತು. ಸುಮಾರು 50 ಸಾವಿರ ಯೋಗಾಸಕ್ತರು ಭಾಗವಹಿಸಿದ್ದರು. ಜತೆಗೆ ಚಂದನ ವಾಹಿನಿ, ಆಯುಷ್ ಟಿ.ವಿ.ಯಲ್ಲಿ ಪ್ರತಿಷ್ಠಾನದಲ್ಲಿ ನಡೆದ ಯೋಗಾಭ್ಯಾಸ ನೇರ ಪ್ರಸಾರವಾಯಿತು’ ಎಂದು ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ ಹಾಗೂ ಎಸ್‌ಪಿವೈಎಸ್‌ಎಸ್‌ ಸಂಚಾಲಕ ಮಂಜುನಾಥ ಬಳಗಾನೂರು ತಿಳಿಸಿದರು.

ಕೇಶ್ವಾಪುರದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಆಯೋಜಿಸಿದ್ದ ಡಿಜಿಟಲ್ ಯೋಗ ದಿನಾಚರಣೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ವಿಶ್ವಶಾಂತಿಗಾಗಿ ಭಾನುವಾರ ರಾತ್ರಿ 11 ರಿಂದ 12ರವರೆಗೆ ನಗರದ ನೂರಾರು ಮಂದಿ ತಾವಿರುವ ಸ್ಥಳದಲ್ಲಿಯೇ ಧ್ಯಾನ ಮಾಡಿದರು.

ನೈರುತ್ಯ ರೈಲ್ವೆಯಲ್ಲಿ ನಡೆದ ಆನ್‌ಲೈನ್ ಯೋಗದಲ್ಲಿ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್, ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲ್ಕೆಡೆ, ಬಿ.ಜಿ. ಮಲ್ಯ, ಅಶೋಕ್‌ಕುಮಾರ್ ವರ್ಮಾ, ನೈರುತ್ಯ ರೈಲ್ವೆ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುಜಾತ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಯೋಗ ಉದ್ಯಾನದಲ್ಲಿರುವ ಪತಂಜಲಿ ಮಹರ್ಷಿ ಪ್ರತಿಮೆಗೆ ಅಜಯಕುಮಾರ್ ಸಿಂಗ್ ಮಾಲಾರ್ಪಣೆ ಮಾಡಿದರು. ಬಳಿಕ ಸಸಿ ನೆಡುವ ಕಾರ್ಯಕ್ರಮ ಜರುಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು