ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಚುಮುಚುಮು ಚಳಿಯಲ್ಲಿ ಯುವಜನೋತ್ಸವದ ಬಿಸಿ

ಸಿರಿಧಾನ್ಯಗಳ ವಿಶೇಷ ಪ್ರದರ್ಶನ: ವಿವಿಧ ಖಾದ್ಯಗಳ ಮಾರಾಟ
Last Updated 10 ಜನವರಿ 2023, 5:34 IST
ಅಕ್ಷರ ಗಾತ್ರ

ಧಾರವಾಡ: ನಗರದಲ್ಲಿ ತಾಪಮಾನ ಒಂದಂಕಿಗೆ ಕುಸಿದಿದೆ. ಇಂಥ ಚುಮುಚುಮು ಚಳಿಯಲ್ಲೂ ರಾಷ್ಟ್ರೀಯ ಯುವಜನೋತ್ಸವದ ಬಿಸಿ ಯುವ ಮನಸ್ಸುಗಳನ್ನು ಬೆಚ್ಚಗಿರಿಸಿವೆ.

ಈಗಾಗಲೇ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ದೆಹಲಿ ಹಾಗೂ ಉತ್ತಾರಖಂಡದ ಪ್ರತಿನಿಧಿಗಳು ನಗರಕ್ಕೆ ಬಂದಿಳಿದಿದ್ದಾರೆ. ಉತ್ತರ ಕರ್ನಾಟಕದ ಸಂಪ್ರದಾಯದಂತೆ ಆರತಿ ಬೆಳಗಿ, ತಿಲಕವಿಟ್ಟು ಇವರನ್ನು ಜಿಲ್ಲಾಡಳಿತ ಬರಮಾಡಿಕೊಂಡಿದೆ.

ಪ್ರತಿನಿಧಿಗಳಿಗೆ ಕೃಷಿ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಸತಿ ವ್ಯವಸ್ಥೆ ಮಾಡಿದೆ. ತೀವ್ರ ಹದಗೆಟ್ಟಿದ್ದ ನಗರದ ಕೆಲ ಪ್ರಮುಖ ರಸ್ತೆಗಳನ್ನು ಯುವಜನೋತ್ಸವಕ್ಕಾಗಿಯೇ ಜಿಲ್ಲಾಡಳಿತ ಟಾರು ಹಾಕಿಸಿ ಸಜ್ಜುಗೊಳಿಸಿದೆ. ವಿಶ್ವವಿದ್ಯಾಲಯಗಳಲ್ಲಿ ರಸ್ತೆಗಳ ತೊಳೆದು ಅಲಂಕರಿಸಲಾಗುತ್ತಿದೆ. ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ಸರ್ಕಾರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕರ್ನಾಟಕ ವಿಶ್ವ ವಿದ್ಯಾಲಯ ಆವರಣದಲ್ಲಿ ಹಸಿರು ಉದ್ಯಾನವನ್ನು ಸ್ವಚ್ಛಗೊಳಿಸಲಾಗಿದೆ.

ಬಂದಿರುವ ಹಾಗೂ ಬರಲಿರುವ ಪ್ರತಿನಿಧಿಗಳಿಗೆ ಉತ್ತರ ಕರ್ನಾಟಕ ಶೈಲಿಯ ಊಟದೊಂದಿಗೆ ಸಿರಿಧಾನ್ಯಗಳನ್ನು ಪರಿಚಯಿಸಲೂ ಜಿಲ್ಲಾಡಳಿತ ನಿರ್ಧರಿಸಿದೆ.

ರಾಷ್ಟ್ರೀಯ ಯುವಜನೋತ್ಸವದಲ್ಲಿ ಸ್ಥಾಪಿಸಲಾಗುತ್ತಿರುವ ಆಹಾರ ಮಳಿಗೆಯಲ್ಲಿ ಸುಮಾರು 20 ಮಳಿಗೆಗಳನ್ನು ಸಿರಿ ಧಾನ್ಯಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಮೀಸಲಿಡಲಾಗಿದೆ.

ವಿಶ್ವಸಂಸ್ಥೆಯು 2023ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ. ಸಿರಿಧಾನ್ಯಗಳ ಕಣಜವಾಗಿರುವ ಕರ್ನಾಟಕದಲ್ಲಿ ಬೆಳೆಯುವ ಸಿರಿಧಾನ್ಯಗಳಿಂದ ಸಿದ್ಧಗೊಂಡ ಆಹಾರ ಪದಾರ್ಥಗಳು ಈ ಮಳಿಗೆಯಲ್ಲಿ ಸಿಗಲಿವೆ. ಯುವಜನೋತ್ಸವದಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳಿಗೆ ಹಾಗೂ ಗಣ್ಯರಿಗೆ ಸಿರಿಧಾನ್ಯಗಳ ಪೌಷ್ಟಿಕತೆಯನ್ನು ಪರಿಚಯಿಸಲು ಸಿದ್ಧತೆ ನಡೆದಿದೆ.

‘ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಸಿರಿಧಾನ್ಯ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿ ಹಾರಕ, ಸಾಮೆ, ಊದಲು, ಕೊರಲು, ಬರಗು, ನವಣೆಯಂತಹ ವೈವಿಧ್ಯಮಯ ಸಿರಿಧಾನ್ಯಗಳ ಮಾರಾಟ ಮತ್ತು ಖಾದ್ಯಗಳ ಮಳಿಗೆಗಳು ಇರಲಿವೆ. ತುಮಕೂರು, ಉತ್ತರ ಕನ್ನಡ, ವಿಜಯಪುರ, ರಾಯಾಪುರದಿಂದ ಸಿರಿಧಾನ್ಯಗಳ ವಿಶೇಷ ತಿನಿಸುಗಳು ಇರಲಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾರವಾಡದ ಕೃಷಿ ವಿ.ವಿ ನೆರವಿನಿಂದ ಸಿರಿಧಾನ್ಯ ಕೈಗಾರಿಕೆ ನಡೆಸುತ್ತಿರುವ 2 ನವೋದ್ಯಮಗಳಿಗೆ ಸಿರಿಧಾನ್ಯ ಮತ್ತು ಸಿರಿಧಾನ್ಯ ಉಪ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲು ವೇದಿಕೆ ಕಲ್ಪಿಸಲಾಗಿದೆ. ರಾಜ್ಯದ ಪ್ರಮುಖ ತೃಣಧಾನ್ಯ ಉತ್ಪನ್ನಗಳ ಮಾರಾಟ ಮತ್ತದರ ವಿಶೇಷತೆಗಳ ಕುರಿತು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

‘ಇಲ್ಲಿ ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳಾದ ಮಿಲೆಟ್ ಮಿಕ್ಸ್, ಇಡ್ಲಿ ದೋಸಾ ಮಿಕ್ಸ್, ಡಯಾಬಿಟಿಕ್ ಮಿಕ್ಸ್ ಸೇರಿ ಸವಿಯಲು ಸಿದ್ಧವಾದ ಉತ್ಪನ್ನಗಳು, ಬೇಕರಿ ಉತ್ಪನ್ನಗಳಾದ ಬಿಸ್ಕತ್ತು, ರಸ್ಕು ಸಿರಿಧಾನ್ಯ ಮೇಳದ ವೈಶಿಷ್ಟ್ಯ. ಆರೋಗ್ಯ‌ ವರ್ಧನೆಗಾಗಿ ಡಯಾಬಿಟಿಕ್ ಹಾಗೂ ಪಿಸಿಒಡಿ ಕಿಟ್‌ಗಳು ಇರಲಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT