ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲೂ ಕ್ರಿಕೆಟ್ ಜ್ವರ!

Last Updated 14 ಫೆಬ್ರುವರಿ 2011, 9:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬೆಂಗಳೂರಿನಲ್ಲಿ ನಡೆಯಲಿರುವ ಭಾರತ-ಇಂಗ್ಲೆಂಡ್ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಒಂದು ಟಿಕೆಟ್ ಕೊಡಿಸಲು ಆದೀತೆ?’
ಕ್ರಿಕೆಟ್ ಜೊತೆಗೆ ತಳಕು ಹಾಕಿಕೊಂಡ ಪ್ರಭಾವಿ ವ್ಯಕ್ತಿಗಳಿಗೆ ಇಂತಹ ಮನವಿಯನ್ನು ಹೊತ್ತ ನೂರಾರು ಕರೆಗಳು ನಿತ್ಯ ಅವಳಿನಗರದಿಂದ ಹೋಗುತ್ತಿವೆ. ಕೆಲವರಂತೂ ಬೆಂಗಳೂರನ್ನು ‘ಓವರ್ ಟೇಕ್’ ಮಾಡಿ ಮುಂಬೈನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೇ ಟಿಕೆಟ್ ಬೇಡಿಕೆ ಇಡುತ್ತಿದ್ದಾರೆ. ಒಂದೊಂದು ಟಿಕೆಟ್‌ಗಾಗಿ ಸಾವಿರಾರು ರೂಪಾಯಿ ಚೆಲ್ಲಲು ಹುಬ್ಬಳ್ಳಿಯ ಕ್ರಿಕೆಟ್ ಪ್ರಿಯರು ಸಿದ್ಧವಾಗಿದ್ದಾರೆ.

ಭಾರತ-ಇಂಗ್ಲೆಂಡ್ ಪಂದ್ಯವು ಕೋಲ್ಕತ್ತಾದಿಂದ ಬೆಂಗಳೂರಿಗೆ ಸ್ಥಳಾಂತರವಾಗದಿದ್ದರೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪಂದ್ಯಗಳೆಲ್ಲ ಸಪ್ಪೆಯಾಗಿರುತ್ತಿದ್ದವು ಎಂಬುದು ಸ್ಥಳೀಯ ಕ್ರಿಕೆಟ್ ಪ್ರಿಯರ ಅನಿಸಿಕೆಯಾಗಿತ್ತು. ಏಕೆಂದರೆ, ಆಸ್ಟ್ರೇಲಿಯಾ-ಕೀನ್ಯಾ, ಆಸ್ಟ್ರೇಲಿಯಾ-ಕೆನಡಾ, ಭಾರತ-ಐರ್ಲೆಂಡ್, ಇಂಗ್ಲೆಂಡ್-ಐರ್ಲೆಂಡ್ ಪಂದ್ಯಗಳು ಮಾತ್ರ ಬೆಂಗಳೂರಿಗೆ ಸಿಕ್ಕಿದ್ದವು. ಹೀಗಾಗಿ ಹುಬ್ಬಳ್ಳಿ ಮಂದಿ ಅಕ್ಕ-ಪಕ್ಕದ ರಾಜ್ಯಗಳ ಕ್ರಿಕೆಟ್ ಕೇಂದ್ರಗಳತ್ತ ಕಣ್ಣು ಹಾಯಿಸಿದ್ದರು.

ಭಾರತ-ಇಂಗ್ಲೆಂಡ್ ಪಂದ್ಯ ಬೆಂಗಳೂರಿಗೆ ಸಿಕ್ಕಿದ್ದೇ ತಡ, ಕ್ರೀಡಾಂಗಣದಲ್ಲೇ ಪಂದ್ಯ ನೋಡುವ ಅವಳಿನಗರದ ಜನರ ಆಸೆ ಮತ್ತೆ ಎದ್ದು ಕುಳಿತಿತು. ಕೆಲವರಂತೂ ಪಾಕೆಟ್ ತುಂಬಾ ದುಡ್ಡು ಇಟ್ಟುಕೊಂಡು ಬೆಂಗಳೂರಿಗೇ ಹೋಗಿ ನಿರಾಸೆಯಿಂದ ವಾಪಸ್ ಬಂದರು. 

ನಿತ್ಯ ಏರುತ್ತಿರುವ ಬಿಸಿಲಿನಂತೆಯೇ ಹುಬ್ಬಳ್ಳಿಯಲ್ಲೂ ವಿಶ್ವಕಪ್ ಕ್ರಿಕೆಟ್ ಜ್ವರ ಸರ್ರನೇ ಏರುತ್ತಿದೆ. ಒಂದೆಡೆ ಟಿಕೆಟ್‌ಗಾಗಿ ಯಾತ್ರೆ ನಡೆದರೆ, ಇನ್ನೊಂದೆಡೆ ಸಿಕ್ಕಾಪಟ್ಟೆ ದುಡ್ಡು ಸುರುವಿ ಕ್ರಿಕೆಟ್ ನೋಡಿ ಹೈರಾಣವಾಗಿ ಬರುವುದಕ್ಕಿಂತ, ಬಾರ್‌ನಲ್ಲಿ ಗುಂಡು ಹಾಕುತ್ತಾ ಪಂದ್ಯವನ್ನು ಆಸ್ವಾದಿಸಬಹುದು ಎಂಬ ಲೆಕ್ಕಾಚಾರದಲ್ಲಿ ‘ಗುಂಡು’ಪ್ರಿಯರು ಇದ್ದಾರೆ.

ಹಲವು ಹೊಟೆಲ್‌ಗಳಲ್ಲಿ ದೊಡ್ಡ ಸ್ಕ್ರೀನ್ ಮೂಲಕ ವಿಶ್ವಕಪ್ ಹಣಾಹಣಿ ತೋರಿಸುವ ಪ್ರಯತ್ನಗಳು ಆರಂಭವಾಗಿವೆ. ಗೆಳೆಯರ ಮಧ್ಯೆ ಬೆಟ್ಟಿಂಗ್ ಕೂಡ ಆಗಲೇ ಶುರುವಾಗಿದ್ದು, ಇನ್ನೊಂದೆಡೆ ಅವಳಿನಗರದ ಬುಕ್ಕಿಗಳೂ ಚುರುಕಾಗಿದ್ದಾರೆ. ಅವಳಿನಗರದಲ್ಲಿ ಪ್ರತಿ ಪಂದ್ಯಕ್ಕೂ ಕೋಟ್ಯಂತರ ರೂಪಾಯಿ ಮೊತ್ತದ ಬೆಟ್ಟಿಂಗ್ ನಡೆಯುವ ನಿರೀಕ್ಷೆ ಇದೆ.

ಪರೀಕ್ಷಾ ದಿನಗಳಲ್ಲೇ ವಿಶ್ವಕಪ್ ಬಂದಿದ್ದು, ಶಾಲಾ ಮಕ್ಕಳಿಗೆ ನಿರಾಸೆ ಉಂಟು ಮಾಡಿದೆ. ಇತ್ತ ತದೇಕಚಿತ್ತರಾಗಿ ಅಭ್ಯಾಸವನ್ನೂ ಮಾಡಲಾಗದ, ಅತ್ತ ಟಿವಿ ಮುಂದೆ ಕುಳಿತು ಪಂದ್ಯವನ್ನೂ ನೋಡಲಾಗದ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ದಂಡು ಒದ್ದಾಡುತ್ತಿದೆ.

ಭಾನುವಾರ ನಡೆದ ಆಸ್ಟ್ರೇಲಿಯಾ-ಭಾರತ ನಡುವಿನ ಅಭ್ಯಾಸ ಪಂದ್ಯವನ್ನು ನೋಡಲೇ ಹಲವು ಜನ ಪಾಲಕರು ಮಕ್ಕಳಿಗೆ ಬ್ರೇಕ್ ಹಾಕಿದ್ದಾರೆ. ‘ಫೈನಲ್ ಪಂದ್ಯದ ವೇಳೆಗಾದರೂ ಪರೀಕ್ಷೆಗಳು ಮುಗಿದು ಹೋಗಬೇಕು’ ಎಂಬ ಪ್ರಾರ್ಥನೆ ಪ್ರತಿ ಶಾಲಾ ಅಂಗಳದಿಂದ ಕೇಳಿ ಬರುತ್ತಿದೆ.

ಈ ಮಧ್ಯೆ ಪ್ರತಿವರ್ಷದಂತೆ ಬರೋಡಾದ ಥೋರಿ ಕುಟುಂಬ ಪುನಃ ಹುಬ್ಬಳ್ಳಿಗೆ ಬಂದು ಬಿಡಾರ ಹೂಡಿದೆ. ಕಳೆದ 14 ವರ್ಷಗಳಿಂದ ಬರೋಡಾದ ಈ ನಾಲ್ಕು ಕುಟುಂಬಗಳು ಅವಳಿನಗರದಲ್ಲಿ ಬ್ಯಾಟ್‌ಗಳನ್ನು ಮಾರಾಟ ಮಾಡುತ್ತಿವೆ. ‘ಸದ್ಯ ಪ್ರತಿನಿತ್ಯ ಸಾವಿರ ರೂಪಾಯಿ ಮೌಲ್ಯದ ಬ್ಯಾಟ್‌ಗಳು ಮಾರಾಟವಾಗುತ್ತಿವೆ. ಒಂದೊಮ್ಮೆ ವಿಶ್ವಕಪ್ ಆರಂಭವಾದರೆ ನಿತ್ಯ ಐದು ಸಾವಿರ ರೂಪಾಯಿಯಷ್ಟು ವಹಿವಾಟು ನಡೆಯುವ ನಿರೀಕ್ಷೆ ಇದೆ’ ಎನ್ನುತ್ತಾರೆ ರಮಣಭಾಯಿ ಥೋರಿ.

ಕಿಮ್ಸ್ ಮುಂಭಾಗದಲ್ಲಿ ಬಿಡಾರ ಹೂಡಿರುವ ನಾಲ್ಕು ಥೋರಿ ಕುಟುಂಬಗಳಲ್ಲಿ ಒಟ್ಟಾರೆ 40 ಜನ ಇದ್ದಾರೆ. ಬೆಳಗಿನಿಂದ ಸಂಜೆವರೆಗೆ ಅಲ್ಲಿ ಬ್ಯಾಟ್‌ಗಳು ಸಿದ್ಧವಾಗುತ್ತಿವೆ. ರೂ. 70ರಿಂದ 200ರವರೆಗೆ ಬೆಲೆಯಲ್ಲಿ ಈ ಬ್ಯಾಟ್‌ಗಳು ಮಾರಾಟಕ್ಕೆ ಲಭ್ಯ. ಸ್ಟಂಪ್‌ಗಳನ್ನೂ ತಯಾರಿಸಿ ಮಾರಾಟ ಮಾಡಲಾಗುತ್ತದೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಆರಂಭದಲ್ಲೇ ವಹಿವಾಟು ಚೆನ್ನಾಗಿದೆ. ವಿಶ್ವಕಪ್ ಕ್ರಿಕೆಟ್ ಮುಂದಿರುವುದೇ ಇದಕ್ಕೆ ಕಾರಣ’ ಎಂದು ರಮಣಭಾಯಿ ಹೇಳುತ್ತಾರೆ. ಆದರೆ, ‘ಹಿಂದಿನ ವಿಶ್ವಕಪ್ ಸಂದರ್ಭದಲ್ಲಿ ಟಿ.ವಿ.ಗಳು ಮಸಾಲೆ ದೋಸೆಗಳಂತೆ ಮಾರಾಟವಾಗಿದ್ದವು. ಈ ಸಲ ಅಂತಹ ಟ್ರೆಂಡ್ ಕಂಡು ಬರುತ್ತಿಲ್ಲ’ ಎಂಬುದು ಎಲೆಕ್ಟ್ರಾನಿಕ್ ಅಂಗಡಿ ಮಾಲೀಕರ ಅಭಿಪ್ರಾಯವಾಗಿದೆ. ‘ಹಳೆಯ ಟಿವಿಗಳನ್ನು ಕೊಟ್ಟು ಎಲ್‌ಸಿಡಿ ಕೊಂಡುಕೊಳ್ಳುವ ಖಯಾಲಿ ಅಲ್ಪ ಪ್ರಮಾಣದಲ್ಲಿ ಕಾಣುತ್ತಿದೆ’ ಎಂದು ಅವರು ವಿವರಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT