ಹಾಂಗ್‌ಝೌ : ಭಾರತದ ಪುರುಷರ ಮತ್ತು ಮಹಿಳಾ ರಿಲೆ ತಂಡಗಳು ಏಷ್ಯನ್ ಗೇಮ್ಸ್ ಈಜು ಸ್ಪರ್ಧೆಯ ಫೈನಲ್ ಪ್ರವೇಶಿಸಿವೆ. ಇದರೊಂದಿಗೆ ರಾಷ್ಟ್ರೀಯ ದಾಖಲೆಗಳನ್ನೂ ನಿರ್ಮಿಸಿದವು.
ಗುರುವಾರ ನಡೆದ ಅರ್ಹತಾ ಸುತ್ತಿನಲ್ಲಿ ಪುರುಷರ 4X100 ಮೀಟರ್ಸ್ ಫ್ರೀಸ್ಟೈಲ್ ರಿಲೆ ಹಾಗೂ ಮಹಿಳೆಯರ ಫ್ರೀಸ್ಟೈಲ್ 4X200 ಮೀಟರ್ಸ್ ರಿಲೆ ತಂಡಗಳು ಫೈನಲ್ ಪ್ರವೇಶಿಸಿದವು.
ಒಲಿಂಪಿಯನ್ ಶ್ರೀಹರಿ ನಟರಾಜ್, ತನಿಷ್ ಜಾರ್ಜ್ ಮ್ಯಾಥ್ಯೂ ಮತ್ತು ವಿಶಾಲ್ ಗ್ರೆವಾಲ್ ಅವರಿದ್ದ ಪುರುಷರ ತಂಡವು ಹೀಟ್ಸ್‌ನಲ್ಲಿ 3ನಿ, 21.22ಸೆಕೆಂಡುಗಳಲ್ಲಿ ಗುರಿ ಮುಟ್ಟಿತು. ಐದನೇ ಸ್ಥಾನ ಪಡೆಯಿತು.
2019ರಲ್ಲಿ ಶ್ರೀಹರಿ, ಸಜನ್ ಪ್ರಕಾಶ್, ವೀರಧವಳ್ ಖಾತೆ ಮತ್ತು ಅನಿಲ್ ಕುಮಾರ್ ಶೈಲಜಾ ಅವರಿದ್ದ ತಂಡವು 3ನಿಮಿಷ, 23.72ಸೆಕೆಂಡುಗಳಲ್ಲಿ ಗುರಿ ತಲುಪಿ ಮಾಡಿದ್ದ ದಾಖಲೆಯನ್ನು ಈ ಬಾರಿಯ ತಂಡವು ಮೀರಿತು.
ಮಹಿಳೆಯರ 4X200 ಮೀಟರ್ಸ್ ಫ್ರೀಸ್ಟೈಲ್ ರಿಲೆಯಲ್ಲಿ ಧಿನಿಧಿ ದೇಶಿಂಗು, ಶಿವಾಂಗಿ ಶರ್ಮಾ, ವೃತಿ ಅಗರವಾಲ್ ಮತ್ತು ಹಷಿಕಾ ರಾಮಚಂದ್ರ ಅವರ ಬಳಗವು 8ನಿ,39.64ಸೆಕೆಂಡುಗಳಲ್ಲಿ ಗುರಿ ಮುಟ್ಟಿತು. ಹೀಟ್ಸ್‌ನಲ್ಲಿ ಹತ್ತು ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಎಂಟನೇ ಸ್ಥಾನ ಪಡೆದ ಭಾರತ ತಂಡವು ಫೈನಲ್ ಪ್ರವೇಶಿಸಿತ್ತು.
ಈ ವರ್ಷದ ಆರಂಭದಲ್ಲಿ ನಡೆದಿದ್ದ ರಾಷ್ಟ್ರೀಯ ಕೂಟದಲ್ಲಿ ಹಷಿಕಾ, ಧಿನಿಧಿ, ವಿಹಿತಾ ನಯನಾ ಮತ್ತು ಶಿರಿನ್ ಅವರಿದ್ದ ತಂಡವು 8ನಿಮಿ, 40.89ಸೆಕೆಂಡುಗಳಲ್ಲಿ ಗುರಿ ಮುಟ್ಟಿತ್ತು. ಆ ದಾಖಲೆಯನ್ನು ಭಾರತ ತಂಡವು ಇಲ್ಲಿ ಉತ್ತಮಪಡಿಸಿಕೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.