ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಕೋಟಿ ಉಳಿಸಲು ಬದಲಿ ಮಾರ್ಗ

ಬಸವೇಶ್ವರ ವೃತ್ತದಿಂದ ಹೆಬ್ಬಾಳವರೆಗೆ ಹಾಲಿ ರಸ್ತೆಯಲ್ಲೇ ಸಿಗ್ನಲ್‌ ಮುಕ್ತ ಪ್ರಯಾಣ ಸಾಧ್ಯತೆ
Last Updated 9 ಜನವರಿ 2019, 20:20 IST
ಅಕ್ಷರ ಗಾತ್ರ

ಬೆಂಗಳೂರು: ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಉದ್ದೇಶಿತ ಮೇಲು ಸೇತುವೆ ನಿರ್ಮಾಣದ ಪ್ರಸ್ತಾವ ಸಿದ್ಧವಾಗುವುದಕ್ಕೆ ಸಾಕಷ್ಟು ಮುಂಚಿತವಾಗಿಯೇ ಇದೇ ವೃತ್ತದಿಂದ, ವಿಂಡ್ಸರ್‌ ಮ್ಯಾನರ್‌ವರೆಗೆ ಸಿಗ್ನಲ್‌ ರಹಿತ ಮಾರ್ಗದ ಬಗ್ಗೆ ನಗರದ ನಾಗರಿಕರೊಬ್ಬರು ಯೋಜನೆ ರೂಪಿಸಿದ್ದಾರೆ.

ಈ ಪರಿಕಲ್ಪನೆ ಅನುಷ್ಠಾನಕ್ಕೆ ಬಂದಲ್ಲಿ ದುಬಾರಿ ಯೋಜನೆಯ ಬದಲಿಗೆ ಪುಟ್ಟ ಎತ್ತರಿಸಲ್ಪಟ್ಟ ಮಾರ್ಗ ನಿರ್ಮಿಸಿ ಹೆಬ್ಬಾಳ ರಸ್ತೆಯವರೆಗೆ ಸಿಗ್ನಲ್‌ ರಹಿತ ಪ್ರಯಾಣ ಮಾಡಬಹುದು. ಮಾತ್ರವಲ್ಲ ಬಸವೇಶ್ವರ ವೃತ್ತದಲ್ಲಿ ಈಗ ಇರುವ ದಟ್ಟಣೆಯನ್ನು ನಿವಾರಿಸಬಹುದು ಎಂದು ಅವರು ಯೋಜನೆಯಲ್ಲಿ ನಿರೂಪಿಸಿದ್ದಾರೆ.

ಕೆನರಾ ಬ್ಯಾಂಕ್‌ ಉದ್ಯೋಗಿ ಎ.ವಿ. ಮಂಜುನಾಥ್‌ ಈ ಯೋಜನೆ ರೂಪಿಸಿದವರು. 2015ರಲ್ಲೇ ನಕ್ಷೆ ಸಹಿತ ನಿರೂಪಿಸಿದ ಈ ‍ಪರಿಕಲ್ಪನೆಯನ್ನು ಬಿಬಿಎಂಪಿಯ ಸಂಚಾರ ವಿಭಾಗದ ಎಂಜಿನಿಯರ್‌ ಕೂಡಾ ಅನುಮೋದಿಸಿ ಅನುಷ್ಠಾನ ಸಂಬಂಧಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳುಹಿಸಿದ್ದರು.

ಯೋಜನೆಯೇನು?
ಬಸವೇಶ್ವರ ವೃತ್ತದ ಸಮೀಪ (ಸಿಐಡಿ ಕಚೇರಿ) ಬಳಿ ಎತ್ತರಿಲ್ಪಟ್ಟ ರಸ್ತೆ ನಿರ್ಮಿಸಬೇಕು. ಈ ರಸ್ತೆಯು ಸ್ಯಾಂಕಿ ರಸ್ತೆಯ ಮೂಲಕ ಹಾದು ಸಪ್ತ ಸಚಿವರ ವಸತಿಗೃಹಕ್ಕಿಂತ ಸ್ವಲ್ಪ ಮುಂದೆ ಕೊನೆಗೊಳ್ಳುತ್ತದೆ.

ಅಲ್ಲಿಂದ ಮುಂದೆ ವಿಂಡ್ಸರ್ ಮ್ಯಾನರ್‌ ವೃತ್ತಕ್ಕಿಂತ ಸ್ವಲ್ಪ ಹಿಂದೆ ದ್ವಿಪಥ ಅಂಡರ್‌ಪಾಸ್‌ ನಿರ್ಮಿಸಬೇಕು. ಈ ಅಂಡರ್‌ಪಾಸ್‌ ವಿಂಡ್ಸರ್‌ ಮ್ಯಾನರ್‌ ಹೋಟೆಲ್‌ ಸಮೀಪದ ರೈಲ್ವೆ ಸೇತುವೆಯ ಬಳಿ ಮುಕ್ತಾಯಗೊಳ್ಳುತ್ತದೆ. ಮುಂದೆ ಮೇಖ್ರಿ ವೃತ್ತದ ಮೂಲಕ ಹಾದು ವಿಮಾನ ನಿಲ್ದಾಣ ರಸ್ತೆಯನ್ನು ಸಂಪರ್ಕಿಸಬಹುದು. ಮುಂದೆ ವಿಮಾನ ನಿಲ್ದಾಣದತ್ತ ಸಾಗುವ ಹಾದಿ ಸುಗಮ ಎನ್ನುತ್ತದೆ ಯೋಜನಾ ವರದಿ.

ವಾಪಸಾಗುವ ವಾಹನಗಳು ಸಪ್ತ ಸಚಿವರ ವಸತಿಗೃಹದ ಸಮೀಪದ ಎಲಿವೇಟೆಡ್‌ ರಸ್ತೆಯೇರಿದರೆ ಮುಂದೆ ಡಾ.ಎ.ಕೃಷ್ಣರಾವ್‌ ರಸ್ತೆವರೆಗೆ ಸಿಗ್ನಲ್‌ಮುಕ್ತ ಪ್ರಯಾಣ ಮಾಡಬಹುದು. ಕೆಳರಸ್ತೆಗೆ ಸಂಪರ್ಕಿಸಲು ಅನುಕೂಲವಾಗಲು ಅಲ್ಲಲ್ಲಿ ರ್‍ಯಾಂಪ್‌ಗಳನ್ನು ರೂಪಿಸಲಾಗಿದೆ.

ರಾಜಭವನ ರಸ್ತೆಯಿಂದ ರೇಸ್‌‌ಕೋರ್ಸ್‌ ಕಡೆಗೆ ಹೋಗುವ ವಾಹನಗಳಿಗಾಗಿ ಅಂಡರ್‌ಪಾಸ್‌ ನಿರ್ಮಿಸಬೇಕು. ರೇಸ್‌ಕೋರ್ಸ್‌ ಕಡೆಯಿಂದ ಕನ್ನಿಂಗ್‌ಹ್ಯಾಮ್‌ ರಸ್ತೆ, ಶಿವಾಜಿನಗರ ಕಡೆಗೆ ಹೋಗುವ ವಾಹನಗಳಿಗಾಗಿಯೂ ಅಂಡರ್‌ಪಾಸ್‌ ನಿರ್ಮಿಸಬೇಕು. ಒಟ್ಟಿನಲ್ಲಿ ವಾಹನಗಳು ಸಿಗ್ನಲ್‌ ಹೆಸರಿನಲ್ಲಿ ಎಲ್ಲಿಯೂ ನಿಲ್ಲಬಾರದು. ಒಂದೇ ಪ್ರಕಾರದ ಚಲನೆಯಿದ್ದರೆ ದಟ್ಟಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮಂಜುನಾಥ್‌ ಸಮರ್ಥಿಸುತ್ತಾರೆ.

ಲಾಭಗಳು
* ಭೂಸ್ವಾಧೀನ, ಅರಣ್ಯನಾಶ ಇಲ್ಲ. ವಿಪರೀತ ಉದ್ದದ ಫ್ಲೈಓವರ್‌ ನಿರ್ಮಿಸಿ ಸಂಚಾರ ವ್ಯವಸ್ಥೆಯನ್ನು ಹದಗೆಡಿಸುವುದಿಲ್ಲ. ಅಲ್ಪಕಾಲ, ವೆಚ್ಚದಲ್ಲಿ ಅನುಷ್ಠಾನಗೊಳಿಸಬಹುದಾದ ಯೋಜನೆ.

* ಬಸವೇಶ್ವರ ವೃತ್ತದಲ್ಲಿ ಅಂಡರ್‌ಪಾಸ್‌ ನಿರ್ಮಿಸುವುದರಿಂದ ರಾಜಭವನ ರಸ್ತೆ, ರೇಸ್‌ ಕೋರ್ಸ್‌ ರಸ್ತೆಯಲ್ಲಿ ಸಿಗ್ನಲ್‌ಗಾಗಿ ಕಾಯಬೇಕಿಲ್ಲ. ನೇರವಾಗಿ ರೇಸ್‌ಕೋರ್ಸ್‌ ರಸ್ತೆ ಹಾದು ಮೈಸೂರು ರಸ್ತೆ ಸಂಪರ್ಕಿಸುವುದು ಸುಲಭ.

* ಎಲ್ಲ ರಸ್ತೆಗಳು ದ್ವಿಪಥವಾಗುವುದರಿಂದ ವಾಹನಗಳು ನಿಲ್ಲುವುದಿಲ್ಲ. ದಟ್ಟಣೆಯ ಪ್ರಶ್ನೆಯೇ ಬರುವುದಿಲ್ಲ

*
ಈ ಯೋಜನೆಯಲ್ಲಿ ಉದ್ದೇಶಿತ ಎತ್ತರಿಸಲ್ಪಟ್ಟ ಸೇತುವೆಯಷ್ಟು ವೆಚ್ಚ, ಪರಿಸರ ಹಾನಿ, ಇರುವ ನಿರ್ಮಾಣಗಳ ತೆರವು, ಆರ್ಥಿಕ ನಷ್ಟ ಖಂಡಿತ ಇಲ್ಲ.
-ಭಾನುಪ್ರಕಾಶ್‌, ನಿವೃತ್ತ ಹಿರಿಯ ತಾಂತ್ರಿಕ ಅಧಿಕಾರಿ (ಸಿವಿಲ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT