ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ–ಖುಷಿ | ಲಕ್ಷ್ಮೇಶ್ವರ: ನಿಸಾರ್‌ಅಹಮ್ಮದ್‍ ಕೈ ಹಿಡಿದ ವೀಳ್ಯದೆಲೆ ಕೃಷಿ

ವೀಳ್ಯದೆಲೆ ಕೃಷಿಗೆ ₹2.50 ಲಕ್ಷ ಖರ್ಚ; ಉತ್ತಮ ಆದಾಯ ನಿರೀಕ್ಷೆ
Published 28 ಜೂನ್ 2024, 4:43 IST
Last Updated 28 ಜೂನ್ 2024, 4:43 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಮೂವತ್ತು ವರ್ಷಗಳಿಂದ ಬೇರೆ ಬೇರೆ ರೈತರ ಎಲೆಬಳ್ಳಿ ತೋಟಗಳಲ್ಲಿ ಕೆಲಸ ಮಾಡುತ್ತ ಬದುಕು ಸವೆಸಿರುವ ನಿಸಾರ್‌ಅಹಮ್ಮದ್ ಕಮಡೊಳ್ಳಿ ಸದ್ಯ ತಾವೇ 35 ಗುಂಟೆ ಜಮೀನಿನಲ್ಲಿ ಎಲೆಬಳ್ಳಿ ಕೃಷಿ ಮಾಡುತ್ತಿದ್ದಾರೆ. ಎಲೆಬಳ್ಳಿ ಕೃಷಿಯಲ್ಲಿ ಅಪಾರ ಅನುಭವ ಇರುವ ಕಮಡೊಳ್ಳಿ ಮೂರೂವರೆ ಸಾವಿರ ಕರಿ ಎಲೆ ಬಳ್ಳಿಗಳನ್ನು ಬೆಳೆಸಿದ್ದಾರೆ.

ಲಕ್ಷ್ಮೇಶ್ವರದಲ್ಲಿಯೇ ಎಲೆಬಳ್ಳಿ ಬೀಜಗಳನ್ನು ಖರೀದಿಸಿ ನಾಟಿ ಮಾಡಿದ್ದು ಬೀಜಕ್ಕಾಗಿ ಒಟ್ಟು ₹10 ಸಾವಿರ ಸೇರಿದಂತೆ ಬಳ್ಳಿ ನಾಟಿ, ಗೊಬ್ಬರ, ಔಷಧಕ್ಕಾಗಿ ಈವರೆಗೆ ₹2.50 ಲಕ್ಷ ಖರ್ಚು ಮಾಡಿದ್ದಾರೆ. ಬಳ್ಳಿಯಿಂದ ಬಳ್ಳಿಗೆ ಮೂಡಿ ಅಡಿಗಳಷ್ಟು ಅಂತರ ಇದ್ದು, ಬಳ್ಳಿ ಆಸರೆಗಾಗಿ ಚೊಗಚೆ ಮತ್ತು ನುಗ್ಗಿ ಗಿಡಗಳನ್ನು ಬೆಳೆದಿದ್ದಾರೆ. ಇವರ ತೋಟದಲ್ಲಿನ ಬಳ್ಳಿಗಳು ಆರೋಗ್ಯವಾಗಿದ್ದು, ಪ್ರತಿ ಇಪ್ಪತ್ತು ದಿನಕ್ಕೊಮ್ಮೆ ಎಲೆ ಕೊಯ್ಲು ಮಾಡಿ ಮಾರಾಟ ಮಾಡುತ್ತಾರೆ.

ನಿಸಾರ್‌ಅಹಮ್ಮದ್ ಅವರ ತೋಟದಲ್ಲಿ ಹೆಚ್ಚಾಗಿ ಕರಿ ಎಲೆ ಬಳ್ಳಿ ಇದ್ದು, ಅಲ್ಲೊಂದು ಇಲ್ಲೊಂದು ಅಂಬಾಡಿ ಎಲೆ ಬಳ್ಳಿ ಬೆಳೆಸಿದ್ದಾರೆ. ಸಾಮಾನ್ಯವಾಗಿ ಕರಿ ಎಲೆಯನ್ನು ಎಲ್ಲ ರೀತಿಯ ಪೂಜೆ, ಆತಿಥ್ಯ ಹಾಗೂ ಊಟದ ನಂತರ ಅಷ್ಟೆ ಅಲ್ಲದೆ ಚಹಾ ಸೇವಿಸಿದಾಗಲೊಮ್ಮೆ ತಾಂಬೂಲು ಸೇವನೆಗೆ ಬಳಸುತ್ತಾರೆ. ಹೀಗಾಗಿ ಇದಕ್ಕೆ ವರ್ಷದ ಹನ್ನೆರಡು ತಿಂಗಳು ಬೇಡಿಕೆ ಇರುತ್ತದೆ.

ಇನ್ನು ಬಿಳಿ ಅಥವಾ ಅಂಬಾಡಿ ಎಲೆ ಮೃದುವಾಗಿದ್ದು, ಅಡಿಕೆಯೊಂದಿಗೆ ತಿನ್ನಲು ಮತ್ತು ಪಾನ್ ಕಟ್ಟಲು ಬಳಸುತ್ತಾರೆ. ಆದರೆ ಉತ್ತರ ಕರ್ನಾಟಕ ಜಿಲ್ಲೆಗಳ ಜನ ಕರಿ ಎಲೆಯನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ. ಮಲೆನಾಡಿನ ಅಡಿಕೆಗೂ ಉತ್ತರ ಕರ್ನಾಟಕದ ಎಲೆಗೂ ಅವಿನಾಭಾವ ಸಂಬಂಧ. ಮಲೆನಾಡಿನಲ್ಲಿ ಅಡಿಕೆ ಬೆಳೆದರೆ ಬಯಲು ಸೀಮೆಯಲ್ಲಿ ಎಲೆ ಬೆಳೆಯುತ್ತದೆ. ಆದರೆ ಒಂದನ್ನು ಬಿಟ್ಟು ಮತ್ತೊಂದು ಇರಲು ಸಾಧ್ಯವಿಲ್ಲ. ವೀಳ್ಯ ಹಾಕಿಹೊಳ್ಳಲು ಕರಿ ಎಲೆಯೇ ಸೂಕ್ತ ಎಂಬುದು ಇಲ್ಲಿನ ಜನರ ಅಭಿಮತ.

‘ಸದ್ಯ ಮಾರುಕಟ್ಟೆಯಲ್ಲಿ 12 ಸಾವಿರ ಎಲೆಗಳ ಒಂದು ಅಂಡಿಗೆ ₹6 ಸಾವಿರದಿಂದ ₹7 ಸಾವಿರ ಬೆಲೆ ಇದೆ. ಶ್ರಾವಣ ಮಾಸದಲ್ಲಿ ಈ ದರ ಮತ್ತಷ್ಟು ಹೆಚ್ಚಾಗುತ್ತದೆ. ಏಕೆಂದರೆ ಶ್ರಾವಣ ಮಾಸದಲ್ಲಿ ಪ್ರತಿದಿನದ ಪೂಜೆಗೆ ಎಲೆ ಅಡಿಕೆ ಅತಿ ಅಗತ್ಯ. ಹೀಗಾಗಿ ಎಲೆಗೆ ಬೇಡಿಕೆ ಹೆಚ್ಚಾಗಿ ರೈತರಿಗೆ ಉತ್ತಮ ದರ ಸಿಗುತ್ತದೆ. ಒಮ್ಮೆ ನಾಟಿ ಮಾಡಿದ ಬಳ್ಳಿ 15ರಿಂದ 20 ವರ್ಷಗಳವರೆಗೆ ಫಸಲು ಕೊಡುತ್ತದೆ. ಆದರೆ ಕಾಲ ಕಾಲಕ್ಕೆ ತಕ್ಕಂತೆ ಬಳ್ಳಿಗಳನ್ನು ಮಕ್ಕಳಂತೆ ಜೋಪಾನ ಮಾಡುವುದು ಅವಶ್ಯ’ ಎನ್ನುತ್ತಾರೆ ರೈತ ನಿಸಾರ್‌ಅಹಮದ್‌.

ನಿಸಾರ್ ಅಹಮ್ಮದ್‍ ಅವರ ಸೊಗಸಾಗಿ ಎಲೆಬಳ್ಳಿ ತೋಟ
ನಿಸಾರ್ ಅಹಮ್ಮದ್‍ ಅವರ ಸೊಗಸಾಗಿ ಎಲೆಬಳ್ಳಿ ತೋಟ
ನಾನು ಸಣ್ಣವ ಇದ್ದಾಗಿಂದ ಎಲೆಬಳ್ಳಿ ತೋಟಗಳಲ್ಲಿ ದುಡಿದ್ದೇನೆ. ಈ ವರ್ಷ ನಾನೇ ತೋಟ ಮಾಡೇನ್ರೀ. ಬಳ್ಳಿ ಚಲೋ ಬೆಳದಾವು. ಒಳ್ಳೆಯ ಬೆಲೆ ಸಿಗುವ ನಿರೀಕ್ಷೆ ಕೂಡ ಐತಿ
ನಿಸಾರ್‌ಅಹಮ್ಮದ್ ಕಮಡೊಳ್ಳಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT