ಮಂಗಳವಾರ, ಜನವರಿ 26, 2021
15 °C
ನರಗುಂದ: ಅಂಗನವಾಡಿ ಸಿಬ್ಬಂದಿಯಿಂದ ಪ್ರತಿಭಟನೆ

ಕಾರ್ಮಿಕ ವಿರೋಧಿ ನೀತಿ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಗುಂದ: ರಾಜ್ಯ ಮತು ಕೇಂದ್ರ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ, ಅಂಗನವಾಡಿ ನೌಕರರ ಬೇಡಿಕೆ ಈಡೇರಿಸದೆ ವಿಳಂಬ ಮಾಡುತ್ತಿವೆ. ಸರ್ಕಾರಗಳಿಂದ ಕಾರ್ಮಿಕರು ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ ಎಂದು ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಲಕ್ಷ್ಮಿ ಗಾಯಕವಾಡ ಆರೋಪಿಸಿದರು.

ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹಾಗೂ ಜಾರಿಯಾಗಿರುವ ಕಾರ್ಮಿಕ ವಿರೋಧಿ ಕಾನೂನನ್ನು ವಾಪಸ್‌ ಪಡೆಯುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಶುಕ್ರವಾರ ಅಂಗನವಾಡಿ ನೌಕರರು ಮಿನಿವಿಧಾನಸೌಧದ ಎದುರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

ಪ್ರಧಾನಿ ಕಾರ್ಮಿಕ, ರೈತರ ಪರವಾಗಿ ಇಲ್ಲ. ರೈತ ವಿರೋಧಿ ಕೃಷಿ ಕಾಯ್ದೆ, ವಿದ್ಯುತ್ ಮಸೂದೆ ಸೇರಿದಂತೆ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ಮಾಡಲಾಗಿದೆ. ಇದರಿಂದಾಗಿ ಜನ ಸಾಮಾನ್ಯರ, ಕಾರ್ಮಿಕರ ಬದುಕು ಬೀದಿಗೆ ಬರುವಂತಾಗಿದೆ, ಇವುಗಳನ್ನು ರದ್ದುಗೊಳಿಸಲು ಸಿಐಟಿಯು ರಾಷ್ಟ್ರದಾದ್ಯಂತ ಪ್ರತಿಭಟನೆ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೂತನ ಶಿಕ್ಷಣ ನೀತಿ (ಎಸ್.ಇ.ಪಿ) ರದ್ದುಪಡಿಸಬೇಕು, ಎಲ್ಲಾ ರೀತಿಯ ಖಾಸಗೀಕರಣವನ್ನು ಕೂಡಲೇ ನಿಲ್ಲಿಸಬೇಕು, ಆದಾಯ ತೆರಿಗೆಯ ಮಿತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೂ ಮಾಸಿಕ ₹ 7,500 ನಗದು ಹಣ ವರ್ಗಾವಣೆ ಮಾಡಬೇಕು, ಬಡವರಿಗೆ ಪ್ರತಿ ತಿಂಗಳ 10 ಕೆಜಿ ಆಹಾರ ಧಾನ್ಯ ಉಚಿತವಾಗಿ ನೀಡಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಾರ್ಷಿಕ 200 ದಿನಗಳ ಕೆಲಸ ಮತ್ತು ದಿನಕ್ಕೆ ₹ 700 ವೇತನ ನೀಡಬೇಕು. ನಗರ ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸಬೇಕು, ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣೆ ವ್ಯವಸ್ಥೆಯನ್ನು ಪುನ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ರಕ್ಷಣಾ ಯೋಜನೆಗಳನ್ನು ವಿಸ್ತರಿಸಬೇಕು. ಉಚಿತ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಎಲ್ಲರಿಗೂ ಜಾರಿಗೊಳಿಸಬೇಕು ಎಂದು ಸಿಐಟಿಯು ಮುಖಂಡರು ಆಗ್ರಹಿಸಿದರು.

ಪ್ರತಿಭಟನಾಕಾರರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ತಾಲ್ಲೂಕು ಘಟಕದ ಅಧ್ಯಕ್ಷೆ ಗಿರಿಜಾ ಮರ್ಚಕನ್ನವರ, ಪ್ರಧಾನ ಕಾರ್ಯದರ್ಶಿ ಎಸ್.ಬಿ.ರೋಣದ, ಬೇಬಿ ದೊಡಮನಿ, ದಾದೀಮಾ ನದಾಫ್, ಸುನಂದಾ ಬಂದೋಜಿ, ಶಂಕ್ರಮ್ಮ ಸುಳ್ಳಿಕೇರಿ, ತುಳಸವ್ವ ಬಂದೋಜಿ, ದೇವಕ್ಕೆ ಮಾಮನಿ, ನೀಲಗಂಗಾ ಮಾದರ, ಶಾರದಾ ಹಳೇಮನಿ, ಬಸಮ್ಮ ಕೊಡ್ಲಿವಾಡ, ಬಸಮ್ಮ ಗುಡಿಕಾರ, ಸಾವಿತ್ರಿ ಪಾಟೀಲ, ರೇಣುಕಾ ಮಟಗೇರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು