ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗದ್ವೇಷಗಳಿರದ ಸಮಾಜ ನಿರ್ಮಾಣಕ್ಕೆ ಬಸವತತ್ವ ಅವಶ್ಯ

ಬಸವ ಜಯಂತಿ ಅಂಗವಾಗಿ ‘ಮಾನವತಾವಾದಿ ಬಸವೇಶ್ವರ’ ಪ್ರಶಸ್ತಿ ಪ್ರದಾನ
Published 12 ಮೇ 2024, 14:30 IST
Last Updated 12 ಮೇ 2024, 14:30 IST
ಅಕ್ಷರ ಗಾತ್ರ

ಗದಗ: 'ಶಿವಮೊಗ್ಗದ ಡಾ. ಪುಟ್ಟರಾಜ ಗವಾಯಿಗಳ ಉಚಿತ ಸಂಗೀತ ಹಾಗೂ ಸಂಸ್ಕೃತ ಪಾಠಶಾಲೆಗೆ ‘ಮಾನವತಾವಾದಿ ಬಸವೇಶ್ವರ’ ಪ್ರಶಸ್ತಿ ನೀಡಿರುವ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಕಾರ್ಯ ಅಭಿನಂದನೀಯ' ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ನಡೆದ ‘ಮಾನವತಾವಾದಿ ಬಸವೇಶ್ವರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಬಸವಣ್ಣನವರ ಆದರ್ಶಗಳ ಕುರಿತು ಮಾತನಾಡಿದ ಅವರು, ಮಾನವಕುಲವನ್ನು ಕಾಡುತ್ತಿರುವ ಸಮಕಾಲೀನ ಸಮಸ್ಯೆಗಳಿಗೆ ಬಸವತತ್ವವು ಎಳೆ ಎಳೆಯಾಗಿ ಪರಿಹಾರ ಸೂಚಿಸಿದ್ದು, ಬಸವತತ್ವವವನ್ನು ಅಧ್ಯಯನ ಮಾಡುವ ವ್ಯವಧಾನ ನಮ್ಮಲ್ಲಿ ಇಲ್ಲವಾಗಿದೆ. ರಾಗ-ದ್ವೇಷಗಳಿಲ್ಲದ ಸಮಾಜ ನಿರ್ಮಾಣವಾಗಬೇಕಾದರೆ ಬಸವತತ್ವಗಳು ಅತ್ಯವಶ್ಯವಾಗಿವೆ ಎಂದರು.

ವಿಜಯನಗರದ ಪ್ರಸಿದ್ಧ ದೊರೆ ಪ್ರೌಢದೇವರಾಯನ ಕಾಲದಲ್ಲಿ ಕನ್ನಡ ಸಾಹಿತ್ಯದ ಸ್ಥಿತಿಗತಿಗಳ ಕುರಿತು ವಿವರಣೆ ನೀಡುವ ಅಪರೂಪದ ಕೃತಿ ಬಿಡುಗಡೆಯಾಗಿರುವುದು ಕೂಡ ಖುಷಿಯ ಸಂಗತಿ. ತೋಂಟದ ಸಿದ್ಧರಾಮ ಸ್ವಾಮೀಜಿಗಳೇ ಈ ಕೃತಿಯ ಪರಿಷ್ಕರಣೆ ಕಾರ್ಯ ಮಾಡಿರುವುದು ಅವರ ಸಾಹಿತ್ಯ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರಕಾಶ ಲಿಂಬಯ್ಯಸ್ವಾಮಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಲಿಂಬಯ್ಯಸ್ವಾಮಿ ಪ್ರತಿಷ್ಠಾನ ನಮ್ಮ ತಂದೆಯವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಸದುದ್ದೇಶದಿಂದ ಸ್ಥಾಪಿಸಿದರು. ಪರಿಸರವಾದಿಗಳು, ಅಂಗವಿಕಲರ ಸಂಸ್ಥೆ ಹಾಗೂ ಆದರ್ಶ ದಂಪತಿ ಎಂಬ ಮೂರು ವಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತಿದ್ದೇವೆ ಎಂದರು.

ಶಿವಮೊಗ್ಗದ ಡಾ. ಪುಟ್ಟರಾಜ ಕವಿ ಗವಾಯಿಗಳ ಉಚಿತ ಸಂಗೀತ ಮತ್ತು ಸಂಸ್ಕೃತ ಪಾಠಶಾಲೆಯ ಸಂಸ್ಥಾಪಕ ಆರ್.ಬಿ.ಸಂಗಮೇಶ್ವರ ಗವಾಯಿಗಳು ಮಾತನಾಡಿ, ಪುಟ್ಟರಾಜ ಗವಾಯಿಗಳ ಪ್ರೇರಣೆಯಿಂದ ಆಶ್ರಮ ಸ್ಥಾಪಿಸಿದ ಬಗೆಯನ್ನು ಕುರಿತು ವಿವರಿಸಿದರು.

ಡಾ.ಶಿವಾನಂದ ವಿರಕ್ತಮಠ ರಚಿಸಿದ ‘ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ’ ಲೋಕಾರ್ಪಣೆಗೊಂಡಿತು. ಹಂಪಿ ಕನ್ನಡ ವಿಶ್ವವಿದ್ಯಾಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ.ಕೆ ರವೀಂದ್ರನಾಥ ಗ್ರಂಥ ಲೋಕಾರ್ಪಣೆ ಮಾಡಿ ಗ್ರಂಥದ ವೈಶಿಷ್ಟ್ಯಗಳ ಕುರಿತು ಮಾತನಾಡಿದರು.

ತೋಂಟದ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು. ರೇವಣಸಿದ್ಧಯ್ಯ ಮರಿದೇವರಮಠ ಹಾಗೂ ಡಾ.ಪುಟ್ಟರಾಜ ಕವಿ ಗವಾಯಿಗಳ ಉಚಿತ ಸಂಗೀತ ಮತ್ತು ಸಂಸ್ಕೃತ ಪಾಠಶಾಲೆಯ ಅಂಧ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನೆರವೇರಿತು.

ಸಿ.ಪಿ.ಐ ಹಾಗೂ ಸಾಹಿತಿಗಳಾದ ಜ್ಯೋತಿರ್ಲಿಂಗ ಹೊನಕಟ್ಟಿ, ಆನಂದಸ್ವಾಮಿ ಗಡ್ಡದ್ದೇವರಮಠ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎಚ್.ಬೇಲೂರ, ಕಾರ್ಯದರ್ಶಿ ಪ್ರವೀಣ ವಾರಕರ, ಉಪಾಧ್ಯಕ್ಷ ಶ್ರೀದೇವಿ ಶೆಟ್ಟರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ, ಅಮರೇಶ ಅಂಗಡಿ ಇದ್ದರು.

ಬಸವ ಜಯಂತಿ ದಿನದಂದು ತೋಂಟದಾರ್ಯ ಮಠದಲ್ಲಿ ಬಸವಣ್ಣನಿಗೆ ಪ್ರಿಯವಾದ ಶ್ರಮಜೀವಿಗಳಿಗೆ ಸನ್ಮಾನ ಹಾಗೂ ಜ್ಞಾನದಾಸೋಹದಂಥ ಸತ್ಕಾರ್ಯಗಳು ನಡೆದಿರುವುದು ವಿಶೇಷವಾಗಿದೆ.
ಡಾ. ಡಿ.ವಿ.ಪರಮಶಿವಮೂರ್ತಿ ಕುಲಪತಿ
ತೋಂಟದ ಸಿದ್ಧರಾಮ ಸ್ವಾಮೀಜಿ ಮಾರ್ಗದರ್ಶನದ ಮೇರೆಗೆ ಶಿವಮೊಗ್ಗದ ಪುಟ್ಟರಾಜ ಗವಾಯಿಗಳ ಉಚಿತ ಸಂಗೀತ ಪಾಠಶಾಲೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜಕ್ಕೆ ಅರ್ಪಿತವಾದ ಸಂಸ್ಥೆಯೊಂದಕ್ಕೆ ಪ್ರಶಸ್ತಿ ನೀಡುತ್ತಿರುವುದು ತೃಪ್ತಿ ತಂದಿದೆ.
–ಪ್ರಕಾಶ ಲಿಂಬಯ್ಯ ಸ್ವಾಮಿಮಠ ಪ್ರತಿಷ್ಠಾನದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT